ರಾಷ್ಟ್ರೀಯ ಸುದ್ದಿ

ಬುಲಂದ್ ಶಹರ್ ಹಿಂಸಾಚಾರ: ಪೊಲೀಸ್ ಅಧಿಕಾರಿ ಸುಬೋಧ್ ಕುಮಾರ್ ಸಿಂಗ್ ಹತ್ಯೆಯ ಪ್ರಮುಖ ಆರೋಪಿ ಬಜರಂಗದಳ ನಾಯಕನ ಬಂಧನ

ವರದಿಗಾರ (ಜ.03): ಉತ್ತರಪ್ರದೇಶದ ಬುಲಂದ್​ಶಹರ್​ನಲ್ಲಿ ನಡೆದ ಹಿಂಸಾಚಾರ​ ಪ್ರಕರಣದಲ್ಲಿ ಪೊಲೀಸ್​ ಅಧಿಕಾರಿ ಸುಬೋಧ್​ ಕುಮಾರ್​ ಸಿಂಗ್​ ರನ್ನು ಹತ್ಯೆಗೈದಿದ್ದ ಪ್ರಮುಖ ಆರೋಪಿ ಬಜರಂಗದಳದ ನಾಯಕ ಯೋಗೇಶ್​ ರಾಜ್​ನನ್ನು ಗುರುವಾರ ಪೊಲೀಸರುಬುಲಂದ್​ಶಹರ್ ನ ಖುರ್ಜಾದಲ್ಲಿ ಬಂಧಿಸಿರುವುದಾಗಿ ಮೂಲಗಳು ವರದಿ ಮಾಡಿವೆ.

ಬಜರಂಗದಳದ ನಾಯಕ ಯೋಗೇಶ್​ ರಾಜ್​ ಇತ್ತೀಚೆಗೆ ಅಜ್ಞಾತ ಸ್ಥಳದಿಂದ ವಿಡಿಯೋವೊಂದನ್ನು ಬಿಡುಗಡೆ ಮಾಡಿ, ಹಿಂಸಾಚಾರ ನಡೆದ ಸ್ಥಳದಲ್ಲಿ ನಾನಿರಲಿಲ್ಲ, ಪ್ರತಿಭಟನೆಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಸಮರ್ಥಿಸಿಕೊಂಡಿದ್ದ. ಅಷ್ಟೇ ಅಲ್ಲದೇ ಉತ್ತರ ಪ್ರದೇಶ ಪೊಲೀಸರ ಮೇಲೆ ಆರೋಪ ಮಾಡಿ ಕೈ ತೊಳೆದುಕೊಳ್ಳಲು ಪ್ರಯತ್ನಿಸಿದ್ದ. ‘ಸಿಯಾನಾ ಪೊಲೀಸ್​ ಠಾಣೆಯ ರಸ್ತೆಯಲ್ಲಿ ಪ್ರತಿಭಟನೆಗಳು ನಡೆದವು. ಭಜರಂಗದಳದ ಕಾರ್ಯಕರ್ತರು ಮತ್ತು ನಾನು ಪೊಲೀಸ್​ ಠಾಣೆಯ ಒಳಗೆ ಕುಳಿತಿದ್ದೆವು’ ಎಂದು ಯೋಗೇಶ್​ ರಾಜ್​ ಹೇಳಿದ್ದಾನೆ. ವಿಡಿಯೋದಲ್ಲಿ 28 ವರ್ಷದ ಯುವಕ ಬಜರಂಗದಳದ ಜಿಲ್ಲಾ ಸಂಚಾಲಕರಾಗಿದ್ದಾರೆ ಎಂದು ದೃಢಪಡಿಸಿದ್ದಾರೆ.

‘ಸೋಮವಾರ ಬೆಳಗ್ಗೆ ನಾನು ಮನೆಯಲ್ಲಿದ್ದಾಗ ಕೆಲವು ಗ್ರಾಮಸ್ಥರು ಕಬ್ಬಿನ ಗದ್ದೆಯಲ್ಲಿ ಹಸುವಿನ ಮಾಂಸ ಇರುವುದಾಗಿ ಹೇಳಿದರು. ಇದಾದ ಬಳಿಕ ನಾನು ಆ ಸ್ಥಳಕ್ಕೆ ಹೋದಾಗ, ನೇರವಾಗಿ ಪೊಲೀಸ್​ ಠಾಣೆಗೆ ಎಳೆದೊಯ್ದರು’ ಎಂದು ವಿಡಿಯೋದಲ್ಲಿ ಹೇಳಿದ್ದಾನೆ.

ಡಿಸೆಂಬರ್​ನಲ್ಲಿ ನಡೆದಿದ್ದ ಬುಲಂದ್​ಶಹರ್ ಗುಂಪು ಘರ್ಷಣೆಯಲ್ಲಿ ಹಾಡಹಗಲೇ ಪೋಲೀಸ್ ಅಧಿಕಾರಿ ಹತ್ಯೆ ನಡೆದಿತ್ತು. ಈ ಘಟನೆಯಲ್ಲಿ ಇನ್ಸ್ಪೆಕ್ಟರ್ ಸುಬೋಧ್ ಕುಮಾರ್ ಸಿಂಗ್​​  ಮತ್ತು 20 ವರ್ಷದ ಸುಮಿತ್ ಮೃತಪಟ್ಟಿದ್ದರು.

ಹಿಂಸಾಚಾರ ಪ್ರಕರಣದ ತನಿಖೆ ಚುರುಕುಗೊಳಿಸಿದ ವಿಶೇಷ ತನಿಖಾ ತಂಡ(ಎಸ್‌ಐಟಿ), ನೂರಾರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿತ್ತು. ಒಂದು ಸಿಸಿಟಿವಿ ದೃಶ್ಯದಲ್ಲಿ, ಯುವಕನೊಬ್ಬ ಹುತಾತ್ಮ ಪೊಲೀಸ್ ಅಧಿಕಾರಿ ಸುಬೋಧ್ ಕುಮಾರ್ ಅವರ ಗನ್ ಕದ್ದು, ಅವರನ್ನೇ ಹತ್ಯೆ ಮಾಡುವ ದೃಶ್ಯ ಸೆರೆಯಾಗಿರುವುದು ಕಂಡುಬಂದಿತ್ತು.  

To Top
error: Content is protected !!
WhatsApp chat Join our WhatsApp group