ನಿಮ್ಮ ಬರಹ

ಎರಡು ದೋಣಿಯಲ್ಲಿ ಕಾಲಿಟ್ಟ ಮಧ್ವರಾಜ್ ನಂಬಿಕೆಗರ್ಹರೇ…?

ಇಸ್ಮರ್ ಫಜೀರ್

ಇತ್ತೀಚೆಗೆ ಟಿಪ್ಪು ವಿರೋಧೀ ಹೇಳಿಕೆ ನೀಡಿದ್ದ ಮಾಜಿ ಸಚಿವ ಪ್ರಮೋದ್ ಮಧ್ವರಾಜರ ಹೆಸರನ್ನು ಮಂಗಳೂರಿನ ಮುಸ್ಲಿಂ ಸೆಂಟ್ರಲ್ ಕಮಿಟಿಯ ಸುವರ್ಣ ಮಹೋತ್ಸವದ ಆಮಂತ್ರಣ ಪತ್ರಿಕೆಯಲ್ಲಿ ಹಾಕಿದ್ದಕ್ಕೆ ಮುಸ್ಲಿಂ ಸಮುದಾಯದೊಳಗಿಂದ ವ್ಯಕ್ತವಾದ ವ್ಯಾಪಕ ವಿರೋಧದ ಹಿನ್ನೆಲೆಯಲ್ಲಿ ಪ್ರಮೋದ್ ಹೆಸರು ಕೈ ಬಿಟ್ಟು ಹೊಸ ಆಮಂತ್ರಣ ಪತ್ರಿಕೆ ಮುದ್ರಿಸಲಾಯಿತು. ಇದೀಗ ಈ ನಡೆಯ ಬಗ್ಗೆ ಕೆಲವು ಋಣಾತ್ಮಕ ಮಾತುಗಳೂ ಕೇಳಿಬರುತ್ತಿವೆ. ಅನೇಕರು “ಇದರಿಂದ ಪ್ರಮೋದ್ ಗೆ ರಾಜಕೀಯ ಮೈಲೇಜ್ ಹೆಚ್ಚಾಗುತ್ತದೆ” ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸುತ್ತಿದ್ದಾರೆ. ಇದರ ಕುರಿತು ತುಸು ವಿಶ್ಲೇಷಣೆ ಅಗತ್ಯವೆಂದು ತೋರುತ್ತಿದೆ.

ಪ್ರಮೋದ್ ಮಧ್ವರಾಜ್ ರ ತಾಯಿ ಮನೋರಮಾ ಮಧ್ವರಾಜ್ ಬಿಜೆಪಿಗೆ ಹೋದಾಗ ಪ್ರಮೋದ್ ಪಕ್ಷ ತೊರೆದಿಲ್ಲ ಎಂಬ ಕ್ರೆಡಿಟ್ ಅವರಿಗಿತ್ತು. ಮುಂದೆ ಅವರಿಗೆ ಕಾಂಗ್ರೆಸಿನಲ್ಲಿ ಅಸೆಂಬ್ಲಿ ಟಿಕೆಟ್ ಪಡೆಯುವಲ್ಲಿ ಆ ಕ್ರೆಡಿಟ್ ಸ್ವಲ್ಪ ಕೆಲಸಕ್ಕೆ ಬಂದಿದೆ. ಅದಾಗ್ಯೂ ಪ್ರಮೋದ್ ಹಿಂದಿನಿಂದಲೂ ಬಲಪಂಥೀಯ ಸಿದ್ಧಾಂತಿಗಳೊಂದಿಗೆ ಉತ್ತಮ ಸಂಬಂಧವನ್ನೇ ಇರಿಸಿಕೊಂಡವರು ಎಂಬುವುದು ರಾಜಕೀಯ ಸೂಕ್ಷ್ಮ ಇರುವವರಿಗೆ ತಿಳಿದ ವಿಚಾರ. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಗೆದ್ದು ಮೊದಲ ಬಾರಿ ಶಾಸಕನಾದ ಪ್ರಮೋದ್ ರಿಗೆ ಸಿದ್ಧರಾಮಯ್ಯ ಅವರು ಹಿಂದುಳಿದ ವರ್ಗದ ನಾಯಕನೆಂಬ ನೆಲೆಯಲ್ಲಿಯೂ ತುಸು ಆದ್ಯತೆ ನೀಡಿದ್ದರು ಎಂದರೂ ತಪ್ಪಾಗದು. ಪ್ರಮೋದ್ ಸಚಿವರಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ. (ಗುಣಕ್ಕೆ ಮತ್ಸರ ಸಲ್ಲ) ಆದರೆ ಪ್ರಮೋದ್ ಗೆ ಹಿಂದೂತ್ವವಾದಿ ಮತಗಳು ಕಾಂಗ್ರೆಸ್ ಅಭ್ಯರ್ಥಿಯಾದ ತನಗೆ ಬೀಳುವುದಿಲ್ಲ ಎಂದು ಖಚಿತವಿತ್ತು. ಆದುದರಿಂದಲೇ ತಾನು ಸಚಿವನಾಗಿದ್ದ ಕಾಲದಲ್ಲಿ ಸಾಧ್ಯಂತ ಹಿಂದೂತ್ವವಾದಿಗಳನ್ನು ಓಲೈಸುವ ಯತ್ನ ಮಾಡಿದ್ದರು. ಎಷ್ಟೇ ಓಲೈಸಿದರೂ ಮತಾಂಧತೆ ತಲೆಗಡರಿಸಿಕೊಂಡವರಿಗೆ ಬಿಜೆಪಿ ಎಂಬುವುದು ಒಂದು ರಾಜಕೀಯ ಪಕ್ಷ ಎಂಬುವುದಕ್ಕಿಂತ ಹೆಚ್ಚಾಗಿ ಅದು ಧರ್ಮದ ಭಾಗ ಎಂಬ ಭಾವನೆಯಿರುವುದು ಸುಳ್ಳಲ್ಲ.
ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟ ಪ್ರಮೋದ್ ಕಳೆದ‌ ಚುನಾವಣೆಯ ಕಾಲದಲ್ಲಿ ಒಂದು ಕಾಲು ಬಿಜೆಪಿಯೊಳಗಿಟ್ಟಿದ್ದರು.ಆದರೆ ಅಲ್ಲಿ ರಘುಪತಿ ಭಟ್ ಯಾವ ಕಾರಣಕ್ಕೂ ಟಿಕೆಟ್ ಬಿಟ್ಟು ಕೊಡಲು ಸಿದ್ಧನಿರಲಿಲ್ಲ. ಒಂದು ವೇಳೆ ಪ್ರಮೋದರಿಗೆ ಬಿಜೆಪಿ ಟಿಕೆಟ್ ಕೊಡುತ್ತಿದ್ದರೆ ಟಿಕೆಟ್ ವಂಚಿತರಾಗುವ ರಘುಪತಿ ಭಟ್ ಶತಾಯ ಗತಾಯ ಪ್ರಮೋದರನ್ನು ಸೋಲಿಸಲು ಪ್ರಯತ್ನ ಮಾಡುತ್ತಿದ್ದರು. ಬಿಜೆಪಿಯ ಹೈಕಮಾಂಡ್ ಕಾಂಗ್ರೆಸಿನ ಪ್ರಮೋದ್ ರಿಗೆ ಟಿಕೆಟ್ ನೀಡುವ ಸಲುವಾಗಿ ಸುಖಾಸುಮ್ಮನೆ ಒಂದು ಕ್ಷೇತ್ರ ಕಳೆದುಕೊಳ್ಳಲು ತಯಾರಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಪ್ರಮೋದರಿಗೆ ಕಾಂಗ್ರೆಸಿನಲ್ಲೇ ನಿಲ್ಲುವುದು ಅನಿವಾರ್ಯವಿತ್ತು. ಹಾಗೆ ಕಾಂಗ್ರೆಸಿನಲ್ಲಿ ನಿಂತರೂ ತನ್ನ ಚುನಾವಣಾ ಪ್ರಚಾರ ಸಂದರ್ಭದಲ್ಲಿ ತನಗೆ ಸಚಿವ ಸ್ಥಾನ ನೀಡಿದ ಸಿದ್ಧರಾಮಯ್ಯರನ್ನೇ ದೂರವಿಡಲು ಹೆಣಗಾಡಿದ್ದು ಗುಟ್ಟಾಗೇನೂ ಉಳಿದಿರಲಿಲ್ಲ. ಅದು ಎಲ್ಲಿಯವರೆಗೆ ಮುಂದುವರಿಯಿತೆಂದರೆ ಪ್ರಮೋದ್ ತನ್ನ ಚುನಾವಣಾ ಪ್ರಚಾರ ವಾಹನವೊಂದರಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಭಾವಚಿತ್ರವನ್ನೂ ಹಾಕಿರಲಿಲ್ಲ. ಏನೇ ತಿಪ್ಪರಲಾಗ ಹೊಡೆದರೂ ಹಿಂದೂತ್ವವಾದಿ ಮತಗಳು ಪ್ರಮೋದರ ಕೈ‌ ಹಿಡಿಯಲಿಲ್ಲ.

ಇವು ಒಂದು ವಿಧದ ರಾಜಕೀಯ ತಂತ್ರವಾದರೆ ಇನ್ನೊಂದು ವಿಧದ ರಾಜಕೀಯ ತಂತ್ರವನ್ನೂ ಪ್ರಮೋದ್ ಆಡಿದ್ದರು. ಸಿದ್ಧರಾಮಯ್ಯ ಸರಕಾರವೇ ಜಾರಿಗೆ ತಂದ ಟಿಪ್ಪು ಜಯಂತಿ ಸರಕಾರಿ ಕಾರ್ಯಕ್ರಮದಲ್ಲಿ ಪ್ರಮೋದ್ ಸ್ವತಃ ಸಚಿವನಾಗಿದ್ದೂ ತಪ್ಪಿಸಿಕೊಂಡರು.‌ ಆ ಕುರಿತ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸದೇ ನುಣುಚಿಕೊಂಡರು. ಆಗಲೂ ಪ್ರಮೋದರ ನಡೆಯ ಬಗ್ಗೆ ಕಾಂಗ್ರೆಸ್ ವಲಯದಿಂದ ವಿರೋಧ ವ್ಯಕ್ತವಾಗಿತ್ತು. ಆದರೂ ಪ್ರಮೋದ್ ತುಟಿಪಿಟಕ್ಕೆಂದಿರಲಿಲ್ಲ. ರಾಜಕೀಯ ಸೂಕ್ಷ್ಮ ಬಲ್ಲವರಿಗೆ ಪ್ರಮೋದ್ ಯಾಕೆ ಟಿಪ್ಪು ಜಯಂತಿಗೆ ಗೈರಾಗಿದ್ದರು ಎಂಬುವುದು ತಿಳಿಯದ ವಿಚಾರವೇನಲ್ಲ. ಇದೀಗ ಚುನಾವಣೆಯಲ್ಲಿ ಸೋತ ಬಳಿಕ ಪ್ರಮೋದರ ಬಾಯಲ್ಲೇ ಪ್ರಜ್ಞಾಪೂರ್ವಕವೋ…. ಅಪ್ರಜ್ಞಾಪೂರ್ವಕವೋ…. ಟಿಪ್ಪು ಜಯಂತಿಯಲ್ಲಿ ತಾನು ಯಾಕೆ ಭಾಗವಹಿಸಲಿಲ್ಲ ಎಂಬ ಸತ್ಯ ಹೊರಬಂತು. ಆದರೆ ಪ್ರಮೋದ್ ಟಿಪ್ಪು ಜಯಂತಿಯ ಬಗ್ಗೆ ತನಗಿದ್ದ ವಿರೋಧವನ್ನು ವ್ಯಕ್ತಪಡಿಸಿದ್ದು ಮಾತ್ರ ಕ್ರೈಸ್ತ ಸಮುದಾಯದ ಕಾರ್ಯಕ್ರಮವೊಂದರಲ್ಲಿ. ಇದರ ಹಿಂದಿನ ಉದ್ದೇಶ ಮುಂದೆ ಯಾವತ್ತಾದರೂ ಕ್ರೈಸ್ತ ಸಮುದಾಯದ ಮತಗಳು ತನಗೆ ಉಪಯೋಗಕ್ಕೆ ಬರಬಹುದೆಂಬ ದೂರಾಲೋಚನೆಯಾಗಿರಬಹುದು. ಇದನ್ನು ನಾವು ಎರಡು ವಿಧದಲ್ಲಿ ವಿಶ್ಲೇಷಿಸಲು ಸಾಧ್ಯ. ಮೊದಲನೆಯದಾಗಿ, ಬಿಜೆಪಿಯ ಓಲೈಕೆ. ಮುಂದೆ ಯಾವತ್ತಾದರೂ ಬಿಜೆಪಿಗೆ ಹೋಗವ ಸಂದರ್ಭ ಬಂದರೆ ನಾನು ಕಾಂಗ್ರೆಸಿನಲ್ಲಿ ಸಚಿವನಾಗಿಯೂ ಟಿಪ್ಪು ಜಯಂತಿಯನ್ನು ವಿರೋಧಿಸಿದ್ದೆ ಎನ್ನಬಹುದು. ಎರಡನೆಯದಾಗಿ, ಬಿಜೆಪಿಗೆ ಹೋದರೆ ತಾನು ಮುಸ್ಲಿಂ ಮತ್ತು ಕ್ರೈಸ್ತ ಅಲ್ಪಸಂಖ್ಯಾತ ಮತಗಳನ್ನು ವಿಭಜಿಸಲು ಸಫಲನಾದೆ ಎಂದು ಬಿಜೆಪಿಯ‌ ಹಿರಿತಲೆಗಳನ್ನು ಮೆಚ್ವಿಸಲು ಸಾಧ್ಯ ಎಂಬ ದೂರಾಲೋಚನೆ.

ಒಟ್ಟಿನಲ್ಲಿ ಪ್ರಮೋದರ ಇತ್ತೀಚಿನ ರಾಜಕೀಯ ನಡೆ ನಿಗೂಡವೇನೂ ಅಲ್ಲ. ಈ ರೀತಿಯ ಸ್ಪಷ್ಟತೆಯಿಲ್ಲದ ರಾಜಕೀಯ ನಡೆಗಳು ಅಯೋಮಯವಾಗಿರುವ ತನ್ನ ರಾಜಕೀಯ ಬದುಕನ್ನು ಮರುರೂಪಿಸಲು ಮಾಡುತ್ತಿರುವ ಕಸರತ್ತಿನ ಭಾಗವಾಗಿದೆಯಷ್ಟೆ.

To Top
error: Content is protected !!
WhatsApp chat Join our WhatsApp group