ರಾಷ್ಟ್ರೀಯ ಸುದ್ದಿ

‘ಗುಂಪು ಹತ್ಯೆಗಳಿಗೆ ಎದೆಗುಂದದೆ ಕಾನೂನು ಹೋರಾಟ ಮಾಡಿ’ : ಲಾತೇಹಾರ್ ಸಂತ್ರಸ್ತ ಮಝ್ಲೂಮ್ ಅನ್ಸಾರಿ ಪತ್ನಿ ಕರೆ

ವರದಿಗಾರ ಡಿ.25 : ಜಾರ್ಖಂಡಿನ ಲಾತೇಹಾರ್ ಜಿಲ್ಲೆಯಲ್ಲಿ ತಥಾಕಥಿತ ಗೋರಕ್ಷಕ ಗೂಂಡಾಗಳು 2016 ರಲ್ಲಿ ಇಬ್ಬರು ಜಾನುವಾರು ವ್ಯಾಪಾರಿಗಳನ್ನು ಕೊಂದು ಮೃತದೇಹಗಳನ್ನು ಮರಕ್ಕೆ ನೇಣು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಸೆಶನ್ಸ್ ನ್ಯಾಯಾಲಯ ಎಲ್ಲಾ 8 ಮಂದಿ ಅರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದು, ಇಂದು ಸಂತ್ರಸ್ತರ ಕುಟುಂಬದವರು ನವದೆಹಲಿಯ ಪ್ರೆಸ್ ಕ್ಲಬ್ ಆಫ್ ಇಂಡಿಯಾದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕೋರ್ಟ್ ತೀರ್ಪಿನ ಕುರಿತು ತೃಪ್ತಿ  ವ್ಯಕ್ತಪಡಿಸಿದ್ದು, ಈ ತೀರ್ಪು ದೇಶದ ನ್ಯಾಯಾಂಗ ವ್ಯವಸ್ಥೆಯ ಮೇಲಿನ ಭರವಸೆ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಸಂತ್ರಸ್ತ ಕುಟುಂಬ ತಮಗೆ ನೆರವು ನೀಡಿದವರಿಗೆ ಕೃತಜ್ಞತೆ ಸಲ್ಲಿಸುತ್ತಲೇ ಹತ್ಯೆಯ ನಂತರ ತಾವೆದುರಿಸಿದ ಸಂಕಷ್ಟಗಳ ಸರಮಾಲೆಗಳನ್ನು ವಿವರಿಸಿದ ಘಟನೆ ನಡೆಯಿತು.

ಮಾಧ್ಯಮಗಳಿಗೆ ಧನ್ಯವಾದ :

‘ಈ ಘಟನೆ ನಡೆದ ನಂತರ ಇದನ್ನು ಜೀವಂತವಾಗಿಟ್ಟು ಘಟನೆಯಲ್ಲಿ ನ್ಯಾಯದ ಪರವಾಗಿ ತೀರ್ಪು ಬರುವ ಹಾಗೆ ನೋಡಿಕೊಂಡ ಎಲ್ಲಾ ಮಾಧ್ಯಮಗಳಿಗೆ ನಾವು ಧನ್ಯವಾದ ಸಲ್ಲಿಸುತ್ತಿದ್ದೇವೆ. ಜನರ ಮನಸ್ಸಿನಲ್ಲಿ ಘಟನೆ ಜೀವಂತವಾಗಿರುವಂತೆ ನೋಡಿಕೊಂಡಿದ್ದರಲ್ಲಿ ಮಾಧ್ಯಮಗಳ ಪಾಲು ಹೆಚ್ಚು ಇದೆ’  ಎಂದು ಅವರು ನೆನಪಿಸಿದರು.

ಕಾನೂನು ನೆರವು ನೀಡಿದ ಪಾಪ್ಯುಲರ್ ಫ್ರಂಟ್ಗೆ ಕೃತಜ್ಞತೆಗಳು

‘ಘಟನೆಯ ಆರಂಭದ ದಿನದಿಂದಲೂ ಕಾನೂನು ನೆರವು ನೀಡಿ ನಮಗೆ ನೈತಿಕವಾಗಿ ಧೈರ್ಯ ತುಂಬಿದ  ಮತ್ತು ಪ್ರಕರಣವನ್ನು ನ್ಯಾಯಾಲಯದಲ್ಲಿ ಸಮರ್ಥವಾಗಿ ನಿಭಾಯಿಸಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಗೆ ನಾವು ಅಭಾರಿಯಾಗಿದ್ದೇವೆ’ ಎಂದು ಮೃತ ಸಂತ್ರಸ್ತರ ಕುಟುಂಬ ವರ್ಗ ಪತ್ರಿಕಾಗೋಷ್ಠಿಯಲ್ಲಿ ಕೃತಜ್ಞತೆ ಸಲ್ಲಿಸಿತು.

ನಾವಿಂದು ಪತ್ರಿಕಾಗೋಷ್ಠಿ ನಡೆಸುತ್ತಿರುವ ಉದ್ದೇಶ ಇಷ್ಟೇ, ನಮ್ಮ ಕುಟುಂಬಗಳಿಗೆ ಬಂದಿರುವ ಪರಿಸ್ಥಿತಿ ಇನ್ಯಾರಿಗೂ ಬಾರದಿರಲಿ. ನಮ್ಮ ಕಾನೂನು ಹೋರಾಟವು ಇತರರಿಗೂ ಮಾದರಿಯಾಗಿರಲಿ ಎಂಬ ಉದ್ದೇಶದಿಂದಾಗಿದೆ. ಮೃತ ಮಝ್ಲೂಮ್ ಅನ್ಸಾರಿಯ ಪತ್ನಿ ಸಾಯಿರಾ ಬೀಬಿ ಹಾಗೂ ಸಹೋದರ ಅಫ್ಝಲ್ ಅನ್ಸಾರಿ ಹತ್ಯೆಯ ನಂತರ ತಾವೆದುರಿಸಿ ಸಂಕಷ್ಟಗಳನ್ನು ಪತ್ರಿಕಾಗೋಷ್ಠಿಯಲ್ಲಿ ಬಿಡಿಸಿಟ್ಟರು. ಹತ ಮಝ್ಲೂಮ್ ಅನ್ಸಾರಿ ಕುಟುಂಬದ ಏಕೈಕ ದುಡಿಮೆಯ ಆಸರೆಯಾಗಿದ್ದರು. ಐದು ಮಕ್ಕಳ ಜೊತೆಗೆ ಮಝ್ಲೂಮ್ ಅನ್ಸಾರಿ ತನ್ನ ವೃದ್ಧ ತಂದೆ ತಾಯಿಯನ್ನೂ ನೋಡಿಕೊಳ್ಳುತ್ತಿದ್ದರು. ನಾನು ನನ್ನ ತಂದೆಗೆ ಏಕೈಕ ಮಗಳಾಗಿದ್ದರಿಂದ ನನ್ನ ವೃದ್ಧ ತಂದೆ ತಾಯಿಯನ್ನೂ ಮಝ್ಲೂಮ್ ಅನ್ಸಾರಿಯವರೇ ನೋಡಿಕೊಳ್ಳುತ್ತಿದ್ದರು. ಮಝ್ಲೂಮ್ ಅನ್ಸಾರಿಯ ಹತ್ಯೆಯ ನಂತರ ನಮಗೆಲ್ಲರಿಗೂ ದಿಕ್ಕೇ ಇಲ್ಲದಂತಾಗಿದೆ. ನನ್ನ ವೃದ್ಧ ತಂದೆ ತಾಯಿಯ ಜೊತೆಗೆ ಈಗ ಇದ್ದೇನಾದರೂ ಬಹಳ ಕಷ್ಟಕರದ ಜೀವನ ಸಾಗಿಸುತ್ತಿದ್ದೇನೆ’ ಎಂದು ಪತ್ನಿ ಸಾಯಿರಾ ಬೀಬಿ ತಮ್ಮ ಅಳಲು ತೋಡಿಕೊಂಡರು. ಮಝ್ಲೂಮ್ ಅನ್ಸಾರಿಯ ಸಹೋದರ ಅಫ್ಝಲ್ ಅನ್ಸಾರಿ ಮಾತನಾಡುತ್ತಾ, ‘ನನ್ನ ಅಣ್ಣ ಕಠಿಣ ದುಡಿಮೆಗಾರನಾಗಿದ್ದ. ಆತನ ಹತ್ಯೆಯ ನಂತರ ವ್ಯಾಪಾರವೇ ನಿಂತು ಹೋಯಿತು’ ಎಂದರು

ಮಝ್ಲೂಮ್ ಅನ್ಸಾರಿಯ ಜೊತೆಗೆ ಹತ್ಯೆಯಾದ ಇಮ್ತಿಯಾಝ್ ನ ತಂದೆ ಆಝಾದ್ ಖಾನ್ ಮತ್ತು ನಜ್ಮಾ ಬೀಬಿ ಮಾತನಾಡುತ್ತಾ, ‘ನಮ್ಮ ಮಗ ಕೇವಲ 13 ವರ್ಷದ ಬಾಲಕನಾಗಿದ್ದ. ಆಗಷ್ಟೆ ಮನೆಯ ಹೊರಗಡೆ ಕಾಲಿಡಲು ಆರಂಭಿಸಿದ್ದ. ಹತ್ಯೆಯಾದಾಗ ಆತ ಆರನೇ ತರಗತಿಯಲ್ಲಿ ಕಲಿಯುತ್ತಿದ್ದ. ಕಲಿಕೆಯ ಜೊತೆಗೆ ತನ್ನ ತಂದೆಯ ವ್ಯಾಪಾರದಲ್ಲಿ ಸಹಾಯ ಮಾಡುತ್ತಿದ್ದ. ಮಗನ ಹತ್ಯೆಯ ನಂತರ ವ್ಯಾಪಾರವನ್ನೂ ನಿಲ್ಲಿಸಿದ್ದು, ಜೀವನ ನಿರ್ವಹಣೆ ಬಲುಕಷ್ಟವಾಗಿದೆ. ಅಣ್ಣ ಹತ್ಯೆಯ ನಂತರ ಆತನ ತಮ್ಮ ಶಾಲೆಗೆ ಹೋಗುವುದನ್ನೇ ನಿಲ್ಲಿಸಿದ್ದಾನೆ. ನನ್ನ ಅಣ್ಣನನ್ನು ಕೊಂದವರು ನನ್ನನ್ನೂ ಕೊಲ್ಲಬಹುದು ಎಂಬ ಭೀತಿಯಲ್ಲಿ ಶಾಲೆಗೆ ಹೋಗಲು ನಿರಾಕರಿಸುತ್ತಾನೆ. ಇಮ್ತಿಯಾಝ್ ನನ್ನ ಮಕ್ಕಳಲ್ಲಿ ಕಿರಿಯನಾಗಿದ್ದ. ಈಗ ಸ್ವಲ್ಪ ಕೃಷಿ ಭೂಮಿಯಿದೆ. ಅದರ ಮೂಲಕ ಜೀವನ ನಿರ್ವಹಣೆ ಮಾಡುತ್ತಿದ್ದೇನೆ. ಹೆಣ್ಣುಮಕ್ಕಳಿಬ್ಬರು ಮದುವೆಯ ವಯಸ್ಸಿಗೆ ಬಂದು ನಿಂತಿದ್ದು, ಆದರೆ ದುಡ್ಡಿಲ್ಲದೆ ಕೈಕಟ್ಟಿ ನಿಂತಿದ್ದೇವೆ ಎಂದು ದುಃಖಭರಿತರಾಗಿ ಮೃತ ಇಮ್ತಿಯಾಝ್ ರ ತಾಯಿ ನಜ್ಮಾ ಬೀಬಿ ಹೇಳುತ್ತಾರೆ.

‘ಜಾರ್ಖಂಡಿನ ರಾಮ್’ಗಢದಲ್ಲಿ ಮಾಂಸ ವ್ಯಾಪಾರಿ ಅಲೀಮುದ್ದೀನ್ ಅನ್ಸಾರಿಯನ್ನು ಕೊಂದ ಗೋರಕ್ಷಕ ಗೂಂಡಾಗಳಿಗೆ ಜೀವಾವಧಿ ಶಿಕ್ಷೆಯಾಗಿದ್ದರೂ, ಹೈಕೋರ್ಟ್ ಅಪರಾಧಿಗಳಿಗೆ ಜಾಮೀನು ನೀಡಿದೆ. ಆದರೆ ಈ ಪ್ರಕರಣದಲ್ಲಿ ಹೈಕೋರ್ಟ್ ಜಾಮೀನು ನೀಡದಂತೆ ನಾವು ಹೈಕೋರ್ಟಿಗೆ ಮನವಿ ಮಾಡುತ್ತಿದ್ದೇವೆ. ಹಾಗೊಂದು ವೇಳೆ ಈ ಆರೋಪಿಗಳಿಗೆ ಜಾಮೀನು ನೀಡಿದಲ್ಲಿ ನಮ್ಮ ಹಾಗೂ ನಮ್ಮ ಕುಟುಂಬಿಕರ ಜೀವಕ್ಕೆ ಅಪಾಯವಿದೆ’ ಎಂದು ಕುಟುಂಬಿಕರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

‘ನ್ಯಾಯಕ್ಕಾಗಿ ಕಾನೂನು ಹೋರಾಟ ನಡೆಸಿರಿ, ಎದೆಗುಂದಬೇಡಿ, ಆಮಿಷಗಳಿಗೆ ಬಲಿಯಾಗಬೇಡಿ’

‘ನಮ್ಮಂತೆಯೇ ದೇಶದ ಇತರೆಡೆಗಳಲ್ಲಿ ಗೋರಕ್ಷಕ ಗೂಂಡಾಗಳಿಂದ  ಹತ್ಯೆಯಾದ ಕುಟುಂಬಿಕರಿಗೆ ನಾವು ಮನವಿ ಮಾಡಿಕೊಳ್ಳುವುದೇನೆಂದರೆ, ನೀವು ಎದೆಗುಂದದಿರಿ, ಕಾನೂನು ಹೋರಾಟ ನಡೆಸಿರಿ, ನಿಮಗೆ ಖಂಡಿತಾ ಜಯ ಸಿಗುತ್ತದೆ. ನಾವು ಜಾರ್ಖಂಡಿನ ಲಾತೇಹಾರಿನಂತಹಾ ಹಿಂದುಳಿದ ಜಿಲ್ಲೆಯಿಂದ ಬಂದಂತಹಾ ಬಡ ನಿರಕ್ಷರಿಗಳಾಗಿದ್ದರೂ ಕೂಡಾ ಅಪರಾಧಿಗಳ ಯಾವುದೇ ಆಸೆ – ಆಮಿಷಗಳಿಗೆ ಬಲಿಯಾಗದೆ ಅವರನ್ನು ಎದುರಿಸಿ ನಿಂತು ಕಾನೂನು ಹೋರಾಟ ನಡೆಸಿ, ಈಗ ನ್ಯಾಯ ಪಡೆದಿದ್ದೇವೆ’ ಎಂದು ಸಂತ್ರಸ್ತ ಕುಟುಂಬಿಕರು ಗೋರಕ್ಷಕ ಗೂಂಡಾಗಳಿಂದ ಹತ್ಯೆಯಾದ ಇತರ ಸಂತ್ರಸ್ತರಿಗೆ ಧೈರ್ಯ ತುಂಬಿದ್ದಾರೆ.

ಸರ್ಕಾರದ ವತಿಯಿಂದ ಇದುವರೆಗೂ ನಮಗೆ ಯಾವುದೇ ಪರಿಹಾರ ಸಿಕ್ಕಿಲ್ಲ. ಲಾತೇಹಾರ್ ಎಸ್ಪಿ ಹಾಗೂ ಜಿಲ್ಲಾಧಿಕಾರಿಗಳು ಹಲವು ಬಾರಿ ಬಂದು ಕೇವಲ 1 ಲಕ್ಷ ರೂಪಾಯಿಗಳ ಚೆಕ್ ಕೊಟ್ಟಾಗ ನಾವದನ್ನು ನಿರಾಕರಿಸಿದ್ದೇವೆ. ಯಾಕೆಂದರೆ ಅದು ನಿಕೃಷ್ಟ ಮೊತ್ತವಾಗಿತ್ತು. ಮಾತ್ರವಲ್ಲ ಆ ಪರಿಹಾರ ಧನದ ಮೂಲಕ ನಾವು ಮಾಡುತ್ತಿದ್ದ ಕಾನೂನು ಹೋರಾಟವನ್ನು ತಡೆಯುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿತ್ತು ಎಂದು ಕುಟುಂಬಿಕರು ಆರೋಪಿಸಿದ್ದಾರೆ. ಇದೀಗ ಬಂದ ತೀರ್ಪಿನಿಂದಾಗಿ ನಮ್ಮ ಕುಟುಂಬಿಕರನ್ನು ನಿರ್ದಯವಾಗಿ ಹತ್ಯೆ ಮಾಡಿದ್ದು ಸಾಬೀತಾಗಿದ್ದು, ನಮಗೆ ಸೂಕ್ತ ಪರಿಹಾರ ಧನ ಕೊಡಬೇಕು ಮತ್ತು ಕುಟುಂಬದ ಒಬ್ಬನಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಮೃತರ ಸಂತ್ರಸ್ತರು ಸರ್ಕಾರವನ್ನು ಆಗ್ರಹಿಸಿದ್ದಾರೆ

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವಕೀಲ ಸೈಫಾನ್ ಶೇಖ್ ಪುಣೆ ಅವರು, ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ವತಿಯಿಂದ ಮೃತ ಮಝ್ಲೂಮ್ ಅನ್ಸಾರಿ ಪತ್ನಿ ಸಾಯಿರಾ ಬೀಬಿ ಹಾಗೂ ಮೃತ ಇಮ್ತಿಯಝ್ ಖಾನ್ ತಂದೆ ಆಝಾದ್ ಖಾನರಿಗೆ ಸೂಕ್ತ ಪರಿಹಾರ ಧನ ನೀಡಬೇಕೆಂದು ರಾಂಚಿ ಹೈಕೋರ್ಟಿನಲ್ಲಿ ರಿಟ್ ಅರ್ಜಿ ಸಲ್ಲಿಸಿತ್ತು. ರಿಟ್ ಗೆ ಉತ್ತರಿಸಿದ್ದ  ಜಾರ್ಖಂಡ್ ಹೈಕೋರ್ಟ್, ರಾಜ್ಯ ಸರ್ಕಾರದ ಕಾನೂನು ಸೇವಾ ಪ್ರಾಧಿಕಾರಕ್ಕೆ ಈ ಪ್ರಕರಣದ ಕುರಿತು ಶೀಘ್ರ ತನಿಖೆ ನಡೆಸಿ ಸೂಕ್ತ ಪರಿಹಾರ ಧನ ವಿತರಿಸುವಂತೆ ಆದೇಶಿಸಿತ್ತು. ಆದರೆ ರಾಜ್ಯ ಸರ್ಕಾರದ ಅಧೀನದ ಕಾನೂನು ಪ್ರಾಧಿಕಾರ ಹೈಕೋರ್ಟ್ ಆದೇಶವನ್ನು ಕಡೆಗಣಿಸಿ, ಸಂತ್ರಸ್ತರಿಗೆ ಅನ್ಯಾಯ ಎಸಗಿದೆ. ನಾವೀಗ ರಾಜ್ಯ ಸರ್ಕಾರದ ನ್ಯಾಯಾಂಗ ನಿಂದನೆಯ ವಿರುದ್ಧ ಮತ್ತೊಮ್ಮೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಿದ್ದೇವೆ. ಸಂತ್ರಸ್ತರಿಗೆ ಸರ್ಕಾರಿ ನೌಕರಿ ನೀಡುವ ಬಗ್ಗೆ ಪ್ರತ್ಯೇಕ ಅರ್ಜಿ ಸಲ್ಲಿಸುವಂತೆ ಹೈಕೋರ್ಟ್ ತಿಳಿಸಿದ್ದು, ಮಾತ್ರವಲ್ಲ ಆರೋಪಿಗಳು ತಮ್ಮ ವಿರುದ್ಧ ಬಂದಿರುವ ತೀರ್ಪಿನ ವಿರುದ್ಧ ಹೈಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿದರೆ ಅದರ ವಿರುದ್ಧ ಹೋರಾಡಲು ನಾವು ಕೂಡಾ ಕಾನೂನು ರೀತ್ಯಾ ಪ್ರಯತ್ನಗಳನ್ನು ಮಾಡಲಿದ್ದೇವೆ’ ಎಂದವರು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಜಾರ್ಖಂಡ್ ರಾಜ್ಯಾಧ್ಯಕ್ಷ ಮುಹಮ್ಮದ್ ಹಂಝಲಾ ಶೇಕ್  ‘ಘಟನೆ ನಡೆದ ಮೂರನೇ ದಿನದಿಂದ ತೀರ್ಪು ಬರುವ ವರೆಗೆ ನಾವು ಎರಡೂ ಕುಟುಂಬದವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದುಕೊಂಡು ಅವರಿಗೆ ಬೇಕಾಗಿದ್ದ ಕಾನೂನು ನೆರವು ನೀಡಿ ಅವರ ಮನೋಸ್ಥೈರ್ಯ ಹೆಚ್ಚಿಸಿದ್ದಲ್ಲದೆ, ಅವರಿಗೆ ನೈತಿಕ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದೆವು. ಇನ್ನು ಮುಂದಕ್ಕೂ ಅವರಿಗೆ ಬೇಕಾಗುವ ಕಾನೂನು ನೆರವನ್ನು ನೀಡಲು ನಮ್ಮ ಸಂಘಟನೆ ಸದಾ ಸಿದ್ಧವಾಗಿದೆ’ ಎಂದು ತಿಳಿಸಿದರು.

To Top
error: Content is protected !!
WhatsApp chat Join our WhatsApp group