ರಾಷ್ಟ್ರೀಯ ಸುದ್ದಿ

ಲಾತೇಹಾರ್ ಗುಂಪು ಹತ್ಯೆ : ಎಲ್ಲಾ 8 ಮಂದಿ ಗೋರಕ್ಷಕ ಗೂಂಡಾಗಳಿಗೆ ಜೀವಾವಧಿ ಶಿಕ್ಷೆ !

ವರದಿಗಾರ (ಡಿ 21) :  ಜಾರ್ಖಂಡ್ ರಾಜ್ಯದ ಲಾತೇಹಾರ್ ಜಿಲ್ಲೆಯಲ್ಲಿ 2016 ರಲ್ಲಿ ನಡೆದಿದ್ದ ಇಬ್ಬರು ಜಾನುವಾರು ಮಾರಾಟಗಾರರ ಹತ್ಯೆಯ ಎಲ್ಲಾ 8 ಅಪರಾಧಿಗಳಿಗೆ ಜಿಲ್ಲಾ ಸೆಶನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದು,  ಮನುಷ್ಯರ ಜೀವದ ಜೊತೆ ಚೆಲ್ಲಾಟವಾಡುವ ಗೋರಕ್ಷಕ ಗೂಂಡಾಗಳಿಗೆ ಎಚ್ಚರಿಕೆಯ ಕರೆಗಂಟೆ ಮೊಳಗಿಸಿದ ತೀರ್ಪು ಇದಾಗಿದೆ ಎಂದು ಬಣ್ಣಿಸಲಾಗಿದೆ. ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯ ಜೊತೆಗೆ ತಲಾ 25000 ರೂಪಾಯಿ ದಂಡ ವಿಧಿಸಿದ್ದು, ಆ ಮೊತ್ತವನ್ನು ಇಬ್ಬರು ಸಂತ್ರಸ್ತರ ಕುಟುಂಬಗಳಿಗೆ ನೀಡಬೇಕೆಂದು ಆದೇಶಿಸಲಾಗಿದೆ.

35 ರ ಹರೆಯದ ಮಝ್ಲೂಮ್ ಅನ್ಸಾರಿ ಹಾಗೂ 15ರ ಹರೆಯದ ಇಮ್ತಿಯಾಝ್ ಖಾನ್ ನನ್ನು ಕೊಂದು ಹಾಕಿ ನೇಣು ಹಾಕಿದ್ದ ಮಿಥಿಲೇಶ್ ಪ್ರಸಾದ್ ಸಾಹು, ಪ್ರಮೋದ್ ಕುಮಾರ್ ಸಾಹು, ಮನೋಜ್ ಕುಮಾರ್ ಸಾಹು, ಅವದೇಶ್ ಸಾಹು, ಮನೋಜ್ ಸಾಹು, ಅರುಣ್ ಸಾಹು, ವಿಶಾಲ್ ತಿವಾರಿ ಮತ್ತು ಸಹದೇವ್ ಸೋನಿ ಈ 8 ಮಂದಿ ಗೋರಕ್ಷಕ ಗೂಂಡಾಗಳಿಗೆ ಲಾತೇಹಾರ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಆದರೆ ಮೊದಲ ಮೂರು ಎಫ್ ಐ ಆರ್ ಗಳ ಪೈಕಿ ಒಂದರಲ್ಲಿ ಪ್ರಮುಖ ಆರೋಪಿ ಎಂದು ಮೂರು ಸಾಕ್ಷಿಗಳು ಗುರುತಿಸಿದ್ದ ವಿನೋದ್ ಪ್ರಜಾಪತಿಯನ್ನು ಚಾರ್ಜ್ ಶೀಟ್ ಸಲ್ಲಿಸುವಾಗ ಪೊಲೀಸರು ಆತನ ಹೆಸರನ್ನು ಕೈಬಿಟ್ಟಿದ್ದರು ಎನ್ನುವುದು ಗಮನಾರ್ಹವಾಗಿದೆ. ವಿನೋದ್ ಪ್ರಜಾಪತಿ ಸ್ಥಳೀಯ ಬಿಜೆಪಿ ನಾಯಕನಾಗಿದ್ದಾನೆ.

ಲಾತೇಹಾರ್ ಗುಂಪು ಹತ್ಯೆಯ ತೀರ್ಪು, ಗೋರಕ್ಷಕರ ಸೋಗಿನಲ್ಲಿರುವ ಗೂಂಡಾಗಳು ಜಾನುವಾರು ಸಾಗಾಟಗಾರರನ್ನು ಹತ್ಯೆ ಮಾಡಿರುವ ಪ್ರಕರಣಗಳಲ್ಲಿ ಬಂದಿರುವ ಎರಡನೆಯ ತೀರ್ಪಾಗಿದೆ. ಇದಕ್ಕಿಂತ ಮೊದಲು ಜಾರ್ಖಂಡ್ ರಾಜ್ಯದ ರಾಮ್’ಗಢ್ ಜಿಲ್ಲೆಯಲ್ಲಿ ಅಲೀಮುದ್ದೀನ್ ಅನ್ಸಾರಿ ಎನ್ನುವ ಮಾಂಸ ವ್ಯಾಪಾರಿಯನ್ನು 100ಕ್ಕೂ ಹೆಚ್ಚಿದ್ದ ಗುಂಪು ಹೊಡೆದು ಕೊಂದ ಪ್ರಕರಣದಲ್ಲಿ 11 ಮಂದಿ ದೋಷಿಗಳೆಂದು ತೀರ್ಪು ಬಂದಿತ್ತು.

To Top
error: Content is protected !!
WhatsApp chat Join our WhatsApp group