ನಿಮ್ಮ ಬರಹ

ಪಂಚರಾಜ್ಯಗಳ ಚುನಾವಣಾ ಫಲಿತಾಂಶ; ಬಿಜೆಪಿಯ ಜನವಿರೋಧಿ ನೀತಿಗೆ ಪಾಠ ಕಲಿಸಿದ ಮತದಾರ

ಲೇಖನ: ರುದ್ರು ಪುನೀತ್ ಆರ್.ಸಿ.

ವರದಿಗಾರ (ಡಿ.21): ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಹೊರಬಿದ್ದಮೇಲೆ ಗೆದ್ದವರು ಸಂಭ್ರಮದಿಂದ ಸರ್ಕಾರ ರಚನೆ ಮಾಡುತ್ತಿದ್ದರೆ , ಸೋತ ಪಕ್ಷಗಳು ಮೌನಕ್ಕೆ ಶರಣಾಗಿದ್ದಾರೆ.

ಬಿಜೆಪಿ ಸರ್ಕಾರವಿದ್ದ ರಾಜಸ್ತಾನ ಮತ್ತು ಮಧ್ಯಪ್ರದೇಶದ ಮೇಲೆ ಭಾರೀ ನಿರೀಕ್ಷೆಯನ್ನ ಇಟ್ಟುಕೊಂಡಿದ್ದ ಬಿಜೆಪಿಗೆ ಈ ಫಲಿತಾಂಶದಿಂದ ಮುಖಭಂಗವಾಗಿದೆ. ಮೋದಿಯ ಅಲೆಗಳು ಈ ರಾಜ್ಯಗಳ ಮೇಲೆ ಅಪ್ಪಳಿಸದೇ ಇರುವುದು ಮೋದಿ ಅಭಿಮಾನಿಗಳಿಗೆ ಭಾರಿ ಆಘಾತವನ್ನುಂಟು ಮಾಡಿದೆ.

2019 ರ ಚುನಾವಣೆಗೆ ಇದು ದೊಡ್ಡ  ಮಟ್ಟದ ಪರಿಣಾಮ ಬೀರಲಿದೆ ಎಂದು ಬಿಜೆಪಿ ಯ ನಾಯಕರೇ ಹೇಳಿದ್ದು, ಅವರೇ ಉಗುಳಿದ ತುತ್ತು ಬೆಂಕಿಯಾಗಿ ಅವರ ಮಡಿಲಿಗೆ ಬಿದ್ದುರುವುದು ವಿಪರ್ಯಾಸ.

ಭಾರೀ ನಿರೀಕ್ಷೆಯೊಂದಿಗೆ ಕೇಂದ್ರದಲ್ಲಿ ಸರ್ಕಾರ ರಚನೆ ಮಾಡಿದ ಬಿಜೆಪಿಯ ನಾಲ್ಕು ವರ್ಷದ ಆಡಳಿತವನ್ನು ಜನರು ವೀಕ್ಷಿಸುತ್ತಿದ್ದಾರೆ ಎನ್ನುವುದು ಪ್ರಾಯಶಃ ಅವರ ಗಮನಕ್ಕೆ ಬಂದಿರಲಿಕ್ಕಿಲ್ಲ. 6 ದಶಕಗಳಿಂದ ದೇಶದ ಚುಕ್ಕಾಣಿ ಹಿಡಿದಿದ್ದ ದೊಡ್ಡ ಪಕ್ಷವವೊಂದನ್ನು ಸೋಲಿಸಿ ಅಧಿಕಾರದ ಗದ್ದುಗೆ ಹಿಡಿದವರು, ಅಭಿವೃದ್ಧಿಯ ಕಡೆಗೆ ಗಮನ ಹರಿಸುವುದಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ ಪಕ್ಷವನ್ನ ಟೀಕೆ ಮಾಡುವುದರಲ್ಲೇ ಹೆಚ್ಚು ಕಾಲ ಕಳೆದಿದ್ದಾರೆ ಎನ್ನಬಹುದು. ಒಬ್ಬ ಪ್ರಜ್ಞಾವಂತ ವ್ಯಕ್ತಿ ನರೇಂದ್ರ ಮೋದಿಯವರು ಪ್ರಧಾನಮಂತ್ರಿ ಎನ್ನುವ ಅತ್ಯುನ್ನತ ಹುದ್ದೆಯಲ್ಲಿದ್ದುಕೊಂಡು ಆಡಿರುವ ಕೆಲವು ಹಗುರವಾದ ಟೀಕೆಗಳೇ ಇವತ್ತು ಮೋದಿಯವರ ಇಮೇಜ್ ತಲೆಕೆಳಗಾಗಲು ಕಾರಣ.  ಘನತೆವೆತ್ತ ಸ್ಥಾನದಲ್ಲಿದ್ದುಕೊಂಡು ಸೋನಿಯಾ ಗಾಂಧಿಯನ್ನು ಕಾಂಗ್ರೆಸ್ ನ ವಿಧವೆ ಅಂದ್ರು, ಇತ್ತೀಚೆಗೆ ನಡೆದ ಯಾವುದೋ ಒಂದು ಬಿಜೆಪಿ ಸಭೆಯಲ್ಲಿ ಮಾತನಾಡಿದ ಮೋದಿ ಒಬ್ಬ ಸಣ್ಣ ಮಗುವಿನ ಬಾಯಿಯಲ್ಲಿ ರಾಹುಲ್ ಗಾಂಧಿ ಪಪ್ಪು ಹೈ ಎಂದು ಹೇಳಿಸಿ ಆ ಮಗುಗೆ ಶಬ್ಬಾಸ್ ಎಂದು ಬೀಗಿದ್ದರು. ಇದು ಒಬ್ಬ ಪ್ರಜ್ಞಾವಂತ ಪ್ರಧಾನಿ ಮಾಡುವ ಕೆಲಸವೇ?.. ಈ ರೀತಿಯ ಅನೇಕ ತುಚ್ಛವಾದ ಹೇಳಿಕೆಗಳೇ ಮೋದಿಜಿಯವರ ಈ ಸೋಲಿಗೆ ಕಾರಣವಾಗಿರಲೂಬಹುದು….

ಗೌರಿ ಲಂಕೇಶ್ ರ ಹತ್ಯೆಯಾದ ಸಮಯದಲ್ಲಿ ಕೊಲೆಯನ್ನು ಖಂಡಿಸಿ ಮಾತನಾಡಿದ ಪ್ರಕಾಶ್ ರೈ ಅವರನ್ನ ವೈಯಕ್ತಿಕವಾಗಿ ದಾಳಿ ಮಾಡಿ, ಅವರ ವೈಯಕ್ತಿಕ ವಿಷಯವನ್ನಿಟ್ಟುಕೊಂಡು  ಟೀಕೆ ಮಾಡಿ ಅವರ ಬಾಯಿ ಮುಚ್ಚಿಸುವ ಪ್ರಯತ್ನ ಮಾಡಲಾಯಿತು. ಜೆ.ಎನ್.ಯು ವಿಶ್ವವಿದ್ಯಾಲಯವು ನೆಹರೂ ಅವರ ಹೆಸರನ್ನೊಳಗೊಂಡಿದೆ ಎನ್ನುವ ಕಾರಣಕ್ಕೆ ಆ ವಿಶ್ವವಿದ್ಯಾಲಯದ ಹೆಸರಿಗೆ ಮಸಿಬಳೆಯುವ ಪಿತೂರಿ ಮಾಡಲಾಯಿತು. ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಪ್ರಶ್ನೆ ಮಾಡಲು ನಿಂತ ಕನ್ನಯ್ಯ ಕುಮಾರ್ ಅಂತಹ ಯುವಕನನ್ನು ಯಾವುದೋ ಡಾಕ್ಟರೇಟೆಡ್ ವಿಡಿಯೋ ಇಟ್ಟುಕೊಂಡು, ‘ಆತ ಪಾಕಿಸ್ತಾನ್ ಜಿಂದಾಬಾದ್ ಅಂತ ಹೇಳಿದ, ಹಿಂದೂಸ್ತಾನ್ ಮುರ್ದಬಾದ್ ಅಂತ ಹೇಳಿದ’ ಎಂದು ಸುಳ್ಳು ಕಥೆಗಳನ್ನ ಕಟ್ಟಿ ಆತನನ್ನು ದೇಶದ್ರೋಹಿ ಎಂದು ಬಿಂಬಿಸಲಾಯಿತು, ಅಕಸ್ಮಾತ್ ಆತ ಹೇಳಿದ್ದು ನಿಜವೇ ಆಗಿದ್ದಲ್ಲಿ ಇನ್ನೂ ಏಕೆ ಆತನನ್ನು ಜೈಲಿಗೆ ಅಟ್ಟಿಲ್ಲ ಎಂದು ಪ್ರಶ್ನೆ ಮಾಡಿದಾಗ ಆ ವಿಷಯ ಹೊರಬರದ ಹಾಗೆ ಮಾಡಲಾಯಿತು. ನೆಹರೂ ಗೆ ಮೌಂಟ್ ಬ್ಯಾಟನ್ ಹೆಂಡತಿ ಜೊತೆ ಸಂಬಂಧ ಇತ್ತೆಂದು ಸುಳ್ಳು ಸುದ್ದಿಗಳನ್ನ ಹಬ್ಬಿಸಲಾಯಿತು. ದೇಶದ ರಾಷ್ಟ್ರಪಿತನನ್ನು ಟೀಕಿಸಲು ಗೋಡ್ಸೆ ಮಂದಿರ ಕಟ್ಟಲು ಯತ್ನಿಸಲಾಯಿತು. ನೆಹರೂ ರನ್ನು ಅಲ್ಲಗೆಳೆಯಲು ಪಟೇಲ್ ಅವರ ಹೆಸರನ್ನು ಬಳಸಿಕೊಳ್ಳಲಾಯಿತು.

ಇಂದಿರಾ ಗಾಂಧಿ ಯನ್ನ ತೇಜೋವಧೆ ಮಾಡಲು ಶಾಸ್ತ್ರಿ ಅವರ ಹೆಸರನ್ನು ತರಲಾಯಿತು.  ಯಾವ ವ್ಯಕ್ತಿ ಆರೆಸ್ಸೆಸ್ ಸಂಘಟನೆಯನ್ನ ನಿಷೇಧಿಸುವಂತೆ ಒತ್ತಾಯಿಸಿದ್ದರೋ ಅದೇ ಪಟೇಲ್ ರ ಬೃಹತ್ ಪ್ರತಿಮೆಯನ್ನ ಮಾಡಿ ಜನರನ್ನು  ಓಲೈಕೆ ಮಾಡುವ ಪ್ರಯತ್ನ ಮಾಡಲಾಯಿತು. ಅಹ್ಲಾದ ರೂಪಿ ರಾಮನನ್ನು ರಾಜಕೀಯ ವಸ್ತುವನ್ನಾಗಿಸಲಾಯಿತು. ದೇಶಭಕ್ತರೆನಿಸಿಕೊಂಡವರು ಅದೇ ಪಟೇಲ್ ರ ಪ್ರತಿಮೆ ಮಾಡಲು ಕಂಟ್ರಾಕ್ಟ್ ಕೊಟ್ಟಿದ್ದು ಮಾತ್ರ ಶತ್ರು ರಾಷ್ಟ್ರ ಎಂದು ಹೇಳುವ ಚೈನಾದವರಿಗೆ.

ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆ ಎಂದು ಹೊರಟವರ ಪಾಡೇನು ಗೊತ್ತೇ?.. ಪ್ರಧಾನಿ ಮೋದಿ ಮತ್ತು ಯುಪಿ ಮುಖ್ಯಮಂತ್ರಿ ಯೋಗಿ ತಮ್ಮ ಮಾತಿನ ಮೋಡಿಯಿಂದ ಎಲ್ಲೆಲ್ಲಿ ಚುನಾವಣಾ ಪ್ರಚಾರ ಮಾಡಲು ಹೋಗಿದ್ದರೋ ಅಷ್ಟೂ ಕ್ಷೇತ್ರಗಳಲ್ಲಿ ಬಿಜೆಪಿ ಸೋತು ಸುಣ್ಣವಾಗಿರುವುದು ದುಃಖದ ಸಂಗತಿ. ಕಾಂಗ್ರೆಸ್ ಎಂದಿಗೂ ಬಿಜೆಪಿ ಮುಕ್ತ ಭಾರತ ಆಗಬೇಕು ಅಂತ ಹೇಳಲೇ ಇಲ್ಲ. ಏಕೆಂದರೆ ಒಂದು ಸದೃಢ ವಿರೋಧ ಪಕ್ಷವಿರಬೇಕು, ಎಲ್ಲದಕ್ಕೂ ಪ್ರಶ್ನೆ ಮಾಡುವವರಿರಬೇಕು ಆಗ ಮಾತ್ರ ದೇಶ ಪ್ರಗತಿಯತ್ತ ಸಾಗೋದು. ನೆಹರೂ ರವರು ಒಮ್ಮೆ ಚುನಾವಣಾ ಪ್ರಚಾರಕ್ಕೆಂದು ಹೊರಟಾಗ ಅಲ್ಲಿದ್ದ ಒಬ್ಬ ಮುಖಂಡ ಹೇಳುತ್ತಾನೆ ಇವತ್ತು ಅಟಲ್ ಬಿಹಾರಿ ವಾಜಪೇಯಿ ಅವರ ಕ್ಷೇತ್ರಕ್ಕೆ ಪ್ರಚಾರಕ್ಕೆ ಹೋಗಬೇಕೆಂದು, ಅಂದು ನೆಹರೂ ಅವರಿಗೆ ಇದ್ದ ಜನಪ್ರಿಯತೆಗೆ ಅಲ್ಲಿ ಅವರು ಹೋಗಿದ್ದಿದ್ದರೆ ಖಂಡಿತ ವಾಜಪೇಯಿಯವರ ಸೋಲು ಖಚಿತವಾಗಿತ್ತು, ಆದರೆ ನೆಹರೂ ಹೇಳುತ್ತಾರೆ ” ಆ ಹುಡುಗನಲ್ಲಿ ಏನೋ ಒಂದು ಸ್ಪಾರ್ಕ್ ಇದೆ, ಆ ಥರದ ಎನರ್ಜಿಟಿಕ್ ಹುಡುಗರ ಅವಶ್ಯಕತೆ ನಮ್ಮ ದೇಶಕ್ಕಿದೆ ಅಲ್ಲಿ ನಾವು ಪ್ರಚಾರಕ್ಕೆ ಹೋಗೋದು ಬೇಡ” ಅಂತ ಹೇಳುತ್ತಾರೆ. ಅದು ನೆಹರೂ ರವರ ದಕ್ಷತೆ ಮತ್ತು ಪ್ರಮಾಣಿಕರಿಗೆ ಅವರು ಕೊಡುತ್ತಿದ್ದ ಮನ್ನಣೆ. ಆದರೆ ಈಗ ರಾಜಕೀಯವಾಗಿ ಬಿಟ್ಟು ವೈಯಕ್ತಿಕ ನಿಂದನೆ ಮಾಡುವಷ್ಟು ಹೀನಸ್ಥಿತಿಗೆ ನಮ್ಮ ರಾಜಕೀಯ ವ್ಯವಸ್ಥೆ ಬದಲಾಗಿದೆ. ಸಂವಿಧಾನದಡಿಯಲ್ಲಿ ಒಬ್ಬ ವ್ಯಕ್ತಿ ಇಂತಿಷ್ಟು ವರ್ಷ ಭಾರತದಲ್ಲಿ ಅಧಿಕೃತವಾಗಿ ವಾಸ ಮಾಡಿದರೆ ಅಂತವರಿಗೆ ದೇಶದಲ್ಲಿ ಬದುಕಲು Citizenship ಕೊಡುವಾಗ, ಭಾರತದವರೇ ಅಮೆರಿಕ ಲಂಡನ್ ಗೆ ಹೋಗಿ ಸೆಟಲ್ ಆಗುತ್ತಿರುವಾಗ, ಸೋನಿಯಾ ಗಾಂಧಿ ಭಾರತ ದೇಶದಲ್ಲಿ ನೆಲೆಯೂರುವುದು ಮಾತ್ರ ಇವರಿಗೆ ಸಹಿಸಲಾಗೋದಿಲ್ಲ. ಪ್ರತೀ ಬಾರಿಯು ಇಟಲಿಯವಳು ಎಂದು ತುಚ್ಛವಾಗಿ ಮಾತನಡುವುದನ್ನ ಜನರು ಗಮನಿಸಿದ್ದಾರೆ. ಅದರ ಫಲಿತಾಂಶವೇ ಇವತ್ತಿನ ಪಾಠ, ಇನ್ನಾದರೂ ಬುದ್ದಿ ಕಲಿಯದಿದ್ದರೆ ಮುಂದೆ ಇದಕ್ಕಿಂತ ದೊಡ್ಡ ಪಾಠ ಕಲಿಸಲಿದ್ದಾರೆ ಪ್ರಜ್ಞಾವಂತ ಪ್ರಜೆಗಳು..

ಸಾಮಾನ್ಯ ಪ್ರಜೆಗಳು ಗಮನದಲ್ಲಿಡಬೇಕಾದ ಮುಖ್ಯವಾದ ವಿಷಯ ಎಂದರೆ ನಾವುಗಳು ಇನ್ನೂ ಪ್ರಜೆಗಳಾಗಿಯೇ ಇದ್ದೇವೆ, ಎಲ್ಲಿಯವರೆಗೆ ನಾವು ನಾಗರಿಕರಾಗುವುದಿಲ್ಲವೋ ಅಲ್ಲಿಯವರೆಗೆ ನಮಗೆ ಈ ರಾಜಕಾರಣಿಗಳು ತಮಗೆ ಬೇಕಾದ ರೀತಿಯಲ್ಲಿ ಬಳಸಿಕೊಳ್ಳುತ್ತಾರೆ. ಈ ಸುಳ್ಳುಕಥೆಗಳನ್ನ ಹೇಳುವ ಬದಲು ಅಭಿವೃದ್ಧಿಯ ಕಡೆಗೆ ಸಾಗುವ ಕೆಲಸ ಮಾಡಿದಾಗ ಮಾತ್ರ ಒಂದು ಪಕ್ಷ ಸದೃಢವಾಗಿ ನೆಲೆಯೂರಲು ಸಾಧ್ಯ. ಪಕ್ಷ ಯಾವುದೇ ಇರಲಿ ಸಮಾಜದ ಅಭಿವೃದ್ಧಿ ಆ ಪಕ್ಷದ ಮೊದಲ ಆದ್ಯತೆ ಆಗಬೇಕು, ಇಲ್ಲದಿದ್ದರೆ ಒಬ್ಬ ಸಾಮಾನ್ಯ ನಾಗರಿಕರಾಗಿ ಎಲ್ಲ ಪಕ್ಷವನ್ನು ಪ್ರಶ್ನೆ ಮಾಡುವ ಪ್ರಭುದ್ಧರಾಗಬೇಕು.

ಉತ್ತಮ ಸಮಾಜ ನಿರ್ಮಾಣ ಮಾಡಲು ಕೇವಲ ಪ್ರಜೆಗಳಾದರೆ ಸಾಲದು, ಪ್ರಜ್ಞಾವಂತ ನಾಗರಿಕರಾಗಬೇಕು..

To Top
error: Content is protected !!
WhatsApp chat Join our WhatsApp group