ರಾಷ್ಟ್ರೀಯ ಸುದ್ದಿ

‘ನನ್ನ ಅಣ್ಣನನ್ನು ಕೊಂದು ನೇತು ಹಾಕಿದ ಗೋರಕ್ಷಕ ಕೊಲೆಗಡುಕರು ನೇಣುಗಂಬದಲ್ಲಿ ನೇತಾಡಬೇಕು’ : ಸಂತ್ರಸ್ತನ ಸಹೋದರ

ವರದಿಗಾರ (ಡಿ 21) : ಇಡೀ ದೇಶವೇ ನಾಚುವಂತೆ ಮಾಡಿದ್ದ 2016 ಮಾರ್ಚ್ 18 ರ ಲಾತೇಹಾರ್ ಗುಂಪು ಹತ್ಯೆಯಲ್ಲಿ ಗೋರಕ್ಷಕ ಗೂಂಡಾಗಳು ಇಬ್ಬರು ಜಾನುವಾರು ವ್ಯಾಪಾರಿಗಳನ್ನು  ಅತಿ ಭೀಕರವಾಗಿ ಮರ್ದಿಸಿ , ಅವರನ್ನು ಕೊಂದು ಹಾಕಿದ ನಂತರ ಮೃತದೇಹಗಳನ್ನು ಮರವೊಂದಕ್ಕೆ ನೇತು ಹಾಕಿದ ಪ್ರಕರಣದಲ್ಲಿ ಎಲ್ಲಾ 8 ಮಂದಿ ಗೋರಕ್ಷಕ ಗೂಂಡಾಗಳು ತಪ್ಪಿತಸ್ಥರೆಂದು ಲಾತೇಹಾರ್ ಜಿಲ್ಲಾ ಹೆಚ್ಚುವರಿ ಮತ್ತು ಸೆಶನ್ಸ್ ನ್ಯಾಯಾಧೀಶ ರಶಿಕೇಶ್ ಕುಮಾರ್ ಅವರು ತೀರ್ಪಿತ್ತಿದ್ದು, ಕೊಲೆಗಡುಕರ ಶಿಕ್ಷೆಯ ಪ್ರಮಾಣ ಇಂದು ಘೋಷಣೆಯಾಗಲಿದೆ. ಈ ನಡುವೆ ಅಂದು ಕೊಲೆಗೈಯ್ಯಲ್ಪಟ್ಟ ಮಝ್ಲೂಮ್ ಅನ್ಸಾರಿಯ ತಮ್ಮ  ಮುನವ್ವರ್ ಅನ್ಸಾರಿ, ‘ನನ್ನ ಅಣ್ಣ ಮಝ್ಲೂಮ್ ಅನ್ಸಾರಿ ಹಾಗೂ 15ರ ಹರೆಯದ ಬಾಲಕ ಇಮ್ತಿಯಾಝ್ ನನ್ನು ಕೊಂದು ನೇತು ಹಾಕಿದ ಎಲ್ಲಾ ಕೊಲೆಗಡುಕರು ನೇಣುಗಂಬದಲ್ಲಿ ನೇತಾಡುವುದನ್ನು ನೋಡಲು ನಾನಿಚ್ಚಿಸುತ್ತೇನೆ’ ಎಂದು ಹೇಳಿದ್ದಾರೆ.

ಮಝ್ಲೂಮ್ ಅನ್ಸಾರಿಯ ತಮ್ಮ ಮುನವ್ವರ್ ಅನ್ಸಾರಿ

ಲಾತೇಹಾರ್ ಗುಂಪು ಹತ್ಯೆ ಜಾರ್ಖಂಡಿನ ಪ್ರಥಮ ಗುಂಪು ಹತ್ಯೆ ಪ್ರಕರಣವಾಗಿ ದಾಖಲಾಗಿತ್ತು. ಜಾನುವಾರು ವ್ಯಾಪಾರ ಮಾಡಿಕೊಂಡಿದ್ದ ಮಝ್ಲೂಮ್ ಅನ್ಸಾರಿ ಹಾಗೂ ಅವರ ಅಣ್ಣನ ಮಗ ಇಮ್ತಿಯಾಝ್ ಖಾನ್ ನನ್ನು ಗೋರಕ್ಷಕ ಗೂಂಡಾಗಳು ಅಪಹರಿಸಿ ಕೊಂದು ಹಾಕಿ ಮೃತದೇಹವನ್ನು ಮರವೊಂದಕ್ಕೆ ನೇತು ಹಾಕಿದ್ದರು. ಮೃತ ಮಝ್ಲೂಮ್ ಅನ್ಸಾರಿಯ ಪತ್ನಿ  ಸಾಯಿರಾ ಬೀಬಿಯ ಪ್ರಕಾರ ಈ ಹತ್ಯೆ ಪೂರ್ವನೀಯೋಜಿತ ಕೃತ್ಯವಾಗಿದ್ದು, ಘಟನೆ ನಡೆಯುವ ಹದಿನೈದು ದಿನಗಳ ಹಿಂದೆಯೇ ಗೂಂಡಾಗಳಲ್ಲಿ ಇಬ್ಬರಾದ ಅರುಣ್ ಸಾಹು ಹಾಗೂ ಬಂಟಿ ಅಲಿಯಾಸ್ ಮನೋಜ್ ಸಾಹು ನಮ್ಮ ಮನೆಗೆ ಬಂದು ನನ್ನ ಪತಿ ಜಾನುವಾರು ಸಾಗಾಟ ವ್ಯಾಪಾರವನ್ನು ನಿಲ್ಲಿಸಬೇಕು, ಇಲ್ಲದಿದ್ದರೆ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು ಎಂದು ‘ನ್ಯೂಸ್ ರೂಮ್’  ಗೆ ನೀಡಿದ್ದ ಹೇಳಿಕೆಯಲ್ಲಿ ತಿಳಿಸಿದ್ದರು.

ಪತ್ನಿ ಸಾಯಿರ ಬೀಬಿ

ಪ್ರಕರಣದ ವಕೀಲರಾಗಿರುವ ಅಬ್ದುಲ್ ಸಲಾಂ ಹೇಳುವ ಪ್ರಕಾರ, ಪ್ರಕರಣದಲ್ಲಿ ಒಟ್ಟು 11 ಸಾಕ್ಷಿಗಳು ಕೋರ್ಟಿನಲ್ಲಿ ಸಾಕ್ಷ್ಯ ನುಡಿದಿದ್ದಾರೆ ಮತ್ತು ಅವೆಲ್ಲವೂ ಅತ್ಯಂತ ಪ್ರಬಲ ಸಾಕ್ಷಿಗಳಾಗಿದ್ದವು. .ಅಪರಾಧಿಗಳಲ್ಲಿ ಇಬ್ಬರಾದ ಅರುಣ್ ಹಾಗೂ ಬಂಟಿ ಸಾಹೂಗೆ ಮರಣದಂಡನೆಯಾಗುವ ಸಾಧ್ಯತೆಗಳಿದ್ದು, ಅವರ ವಿರುದ್ಧ ಇತರೆ ಕ್ರಿಮಿನಲ್ ಪ್ರಕರಣಗಳೂ ದಾಖಲಾಗಿವೆ’  ಎಂದಿದ್ದಾರೆ. ಇಂದು ಕೋರ್ಟ್ ಕೊಲೆಗಡುಕ ಗೋರಕ್ಷಕರ ವಿಧಿ ಬರೆಯಲಿದ್ದು, ಈ ತೀರ್ಪು ಲಾತೇಹಾರ್ ಗುಂಪು ಹತ್ಯೆಯ ನಂತರ ಜಾರ್ಖಂಡಿನಲ್ಲಿ ನಡೆದಿದ್ದ ಇತರ 12 ಮಂದಿಯ ಗುಂಪು ಹತ್ಯೆಯ ಪ್ರಕರಣಗಳ ಮೇಲೂ ಪ್ರಭಾವ ಬೀರುವ ಸಾಧ್ಯತೆಗಳು ಇದೆಯೆನ್ನಲಾಗಿದೆ

ಇಮ್ತಿಯಾಝ್ ಖಾನನ ತಂದೆ ಹಾಗೂ ಮಝ್ಲೂಮ್ ಕುಟುಂಬದವರ ನ್ಯಾಯಕ್ಕಾಗಿನ ಹೋರಾಟ
To Top
error: Content is protected !!
WhatsApp chat Join our WhatsApp group