ರಾಷ್ಟ್ರೀಯ ಸುದ್ದಿ

ಲಾತೇಹಾರ್ ಗುಂಪು ಹತ್ಯೆ : ಎಲ್ಲಾ 8 ಗೋರಕ್ಷಕ ಗೂಂಡಾಗಳ ಆರೋಪ ಸಾಬೀತು

ಲಾತೇಹಾರ್ ಡಿ 19 : ಜಾರ್ಖಂಡ್ ರಾಜ್ಯದಲ್ಲಿ ದಾಖಲಾದ ಪ್ರಥಮ ಗುಂಪು ಹತ್ಯೆಯ 8 ಮಂದಿ ಗೋರಕ್ಷಕ ಗೂಂಡಾಗಳು ದೋಷಿಗಳೆಂದು ಇಲ್ಲಿನ ಸ್ಥಳೀಯ ನ್ಯಾಯಾಲಯ ತೀರ್ಪಿತ್ತಿದೆ. ಶಿಕ್ಷೆಯ ಪ್ರಮಾಣವನ್ನು ಡಿಸಂಬರ್ 20ಕ್ಕೆ ಜಿಲ್ಲಾ ನ್ಯಾಯಾಲಯದಲ್ಲಿ ಘೋಷಿಸಲಾಗುತ್ತದೆ.

ಜಾರ್ಖಂಡ್ ರಾಜ್ಯದ ಲಾತೇಹಾರ್ ಜಿಲ್ಲೆಯಲ್ಲಿ 2016 ರಲ್ಲಿ ಇಬ್ಬರು ಜಾನುವಾರು ವ್ಯಾಪಾರಿಗಳನ್ನು ಅತಿ ಭೀಕರವಾಗಿ ಹೊಡೆದು ಹಿಂಸಿಸಿ ಕೊಂದು ನಂತರ ಅವರ ದೇಹಗಳನ್ನು ಕಾಡಿನಲ್ಲಿ ಮರವೊಂದಕ್ಕೆ ನೇತು ಹಾಕಿ ಗೋ ಭಯೋತ್ಪಾದಕರು ತಮ್ಮ ವಿಕೃತಿ ಮೆರೆದಿದ್ದರು. ಈ ಪ್ರಕರಣದಲ್ಲಿ 8 ಮಂದಿಯ ಆರೋಪ ಇದೀಗ ಸಾಬೀತಾಗಿದ್ದು, ಸಂತ್ರಸ್ತರ ಕುಟುಂಬ ವರ್ಗ ಗೋ ರಕ್ಷಕ ಗೂಂಡಾಗಳಿಗೆ ಗರಿಷ್ಟ ಮಟ್ಟದ ಶಿಕ್ಷೆಯ ನಿರೀಕ್ಷೆಯಲ್ಲಿದ್ದಾರೆ.

ಘಟನಾ ಸ್ಥಳ

ಏನಿದು ಘಟನೆ ?

ಜಾರ್ಖಂಡ್ ರಾಜ್ಯದ ಪ್ರಪ್ರಥಮ ಗುಂಪು ಹತ್ಯೆಯೆಂದೇ ಹೇಳಲಾದ ಈ ಪ್ರಕರಣ 2016 ಮಾರ್ಚ್ 18 ರಂದು ರಾಜ್ಯದ ಲಾತೇಹಾರ್ ಜಿಲ್ಲೆಯಲ್ಲಿ ನಡೆದಿತ್ತು. ದೂರದ ಪ್ರದೇಶಗಳಿಂದ ಗೋವುಗಳನ್ನು ತಂದು ಅವುಗಳನ್ನು ಜಾನುವಾರು ಮಾರುಕಟ್ಟೆಯಲ್ಲಿ ಮಾರಿ ಜೀವನ ಸಾಗಿಸುತ್ತಿದ್ದ ಮಝ್ಲೂಮ್ ಅನ್ಸಾರಿ (34) ಹಾಗೂ ಅವರ ಅಣ್ಣ ಮಗನಾದ ಇಮ್ತಿಯಾಝ್ (15) ಇವರು ಜಾನುವಾರು ಮಾರಾಟಕ್ಕೆಂದು ಮಾರುಕಟ್ಟೆಗೆ ಹೋಗುತ್ತಿದ್ದಾಗ ತಡೆದಿದ್ದ ಗೋ ರಕ್ಷಕ ಗೂಂಡಾಗಳು ಅವರನ್ನು ಅಮಾನುಷವಾಗಿ ಮರ್ದಿಸಿ ಅವರ ಕೈಗಳನ್ನು ಹಿಂದಕ್ಕೆ ಕಟ್ಟಿ ಹಾಕಿ ಬಾಲುಮಠ್ ಎನ್ನುವ ಪ್ರದೇಶದ ಕಾಡಿನಲ್ಲಿ ಮರವೊಂದಕ್ಕೆ ನೇತು ಹಾಕಿಸಿ ಕೊಲ್ಲಲಾಗಿತ್ತು. ಘಟನೆ ನಡೆದ ಕೆಲವೇ ದಿನಗಳಲ್ಲಿ ಎಲ್ಲಾ ಗೋ ರಕ್ಷಕ ಗೂಂಡಾಗಳನ್ನು ಪೊಲೀಸರು ಬಂಧಿಸಿದ್ದರು. ಮಝ್ಲೂಮ್ ಅನ್ಸಾರಿಯನ್ನು ಕೊಂದದ್ದಕ್ಕೆ ಸಾಕ್ಷಿಯಾಗಿದ್ದ ಹದಿಹರೆಯದ ಇಮ್ತಿಯಾಝ್ ಖಾನ್ ತಮ್ಮನ್ನು ಗುರುತಿಸಬಹುದೆಂದು ಭಾವಿಸಿ ಆತನನ್ನೂ ಗೂಂಡಾಗಳು ಅಮಾನುಷವಾಗಿ ಕೊಂದು ಹಾಕಿದ್ದರು.

ಕುಟುಂಬಸ್ಥರು ಹಾಗೂ ನೇತು ಹಾಕಿದ ಮರ

ಇದೀಗ ಈ ಗೋರಕ್ಷಕ ಗೂಂಡಾಗಳ ಭಯೋತ್ಪಾದನಾ ಕೃತ್ಯ ಸಾಬೀತಾಗಿದ್ದು, ಜಾನುವಾರು ಸಾಗಾಟಗಾರರನ್ನು ನೇತು ಹಾಕಿಸಿದ ಮಾದರಿಯಲ್ಲೇ ಆರೋಪಿಗಳಿಗೂ ನೇಣು ಕುಣಿಕೆಯ ಶಿಕ್ಷೆ ಘೋಷಣೆಯಾದಲ್ಲಿ ಇತರೆ ಗೋ ರಕ್ಷಕ ಗೂಂಡಾಗಳಿಗೆ ಇದೊಂದು ಎಚ್ಚರಿಕೆಯ ಗಂಟೆಯಾಗಬಹುದಾಗಿದೆ.

ಮೃತ ಇಮ್ತಿಯಾಜ್
To Top
error: Content is protected !!
WhatsApp chat Join our WhatsApp group