ರಾಷ್ಟ್ರೀಯ ಸುದ್ದಿ

2004ರಲ್ಲಿ ವಾಜಪೇಯಿ ಸೋತಂತೆ, 2019ರಲ್ಲಿ ಮೋದಿಗೂ ಸೋಲು: ಸೀತಾರಾಮ್ ಯೆಚೂರಿ

‘ರಾಜ್ಯಗಳಲ್ಲಿ ಚುನಾವಣಾ ಪೂರ್ವ ಮೈತ್ರಿ, ಕೇಂದ್ರದಲ್ಲಿ ಚುನಾವಣೋತ್ತರ ಮೈತ್ರಿ ಮಾಡಿ’

ವರದಿಗಾರ (ಡಿ.17): ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ 2004ರ ಲೋಕಸಭೆ ಚುನಾವಣೆಯಲ್ಲಿ ಸೋಲನುಭವಿಸಿದಂತೆಯೇ 2019ರಲ್ಲಿ ನರೇಂದ್ರ ಮೋದಿ ಸರ್ಕಾರಕ್ಕೂ ಸೋಲಾಗಲಿದೆ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಭವಿಷ್ಯ ನುಡಿದಿದ್ದಾರೆ.

ಖಾಸಗಿ ಚಾನೆಲ್ ನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ‘ಚುನಾವಣೆಯ ನಂತರವಷ್ಟೇ ಪ್ರತಿಪಕ್ಷಗಳು ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸಲಿವೆ’ ಎಂದು ಹೇಳಿದ್ದಾರೆ.

‘ಈಗ ಮೋದಿ ಎದುರು ಪ್ರತಿಪಕ್ಷಗಳ ಪ್ರಧಾನಿ ಅಭ್ಯರ್ಥಿ ಯಾರೆಂದು ಘೋಷಣೆಯಾಗಿಲ್ಲ. 2004ರಲ್ಲಿಯೂ ವಾಜಪೇಯಿ ಎದುರು ಪ್ರಧಾನಿ ಅಭ್ಯರ್ಥಿಯಾಗಿ ಯಾರೂ ಇರಲಿಲ್ಲ. ಆದರೆ ಫಲಿತಾಂಶ ಏನಾಯಿತೆಂಬುದು ನಮಗೆಲ್ಲ ತಿಳಿದಿದೆ. ನಂತರ ಪ್ರಧಾನಿಯಾದ ಮನಮೋಹನ್ ಸಿಂಗ್ ಅವರು ನಿರಂತರ 10 ವರ್ಷ ಆಡಳಿತ ನಡೆಸಿದರು. 2019ರಲ್ಲೂ ಹೀಗೆಯೇ ಆಗಲಿದೆ’ ಎಂದು ಹೇಳಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಪ್ರತಿಪಕ್ಷಗಳ ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಬೇಕು ಎಂಬ ಡಿಎಂಕೆ ಅಧ್ಯಕ್ಷ ಸ್ಟಾಲಿನ್ ಹೇಳಿಕೆ ಬಗ್ಗೆ ಕೇಳಲಾದ ಪ್ರಶ್ನೆಗೆ, ‘ಸ್ಟಾಲಿನ್ ಅವರ ಅಭಿಪ್ರಾಯ ಹೇಳಿದ್ದಾರೆ. ಚುನಾವಣೆಯ ನಂತರವೇ ಪ್ರತಿಪಕ್ಷಗಳು ಪ್ರಧಾನಿ ಅಭ್ಯರ್ಥಿ ಘೋಷಣೆ ಮಾಡಲಿವೆ’ ಎಂದು ಉತ್ತರಿಸಿರು.

ರಾಜ್ಯಗಳಲ್ಲಿ ಪ್ರತಿಪಕ್ಷಗಳು ಚುನಾವಣಾಪೂರ್ವ ಮೈತ್ರಿ ಮಾಡಿಕೊಂಡಿವೆ. ಆದರೆ, ಕೇಂದ್ರದಲ್ಲಿ ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳಲಿವೆ. ಸದ್ಯ ರಾಜ್ಯಗಳಲ್ಲಿ ಬಿಜೆಪಿ ವಿರೋಧಿ ಮತಗಳನ್ನು ಹೇಗೆ ಒಗ್ಗೂಡಿಸಬಹುದು ಎಂಬುದರತ್ತ ಪ್ರತಿಪಕ್ಷಗಳು ಚಿತ್ತನೆಟ್ಟಿವೆ ಎಂದು ಹೇಳಿದ್ದಾರೆ.

 

 

To Top
error: Content is protected !!
WhatsApp chat Join our WhatsApp group