ರಾಷ್ಟ್ರೀಯ ಸುದ್ದಿ

ಛತ್ತೀಸ್’ಗಡ ಫಲಿತಾಂಶ :  ಬಿಜೆಪಿ ಗಡ ಗಡ, ಕಾಂಗ್ರೆಸ್ ಕಿಲ ಕಿಲ !

➤ ರಾಜ್ಯದ ಇತಿಹಾಸದಲ್ಲಿಯೇ ಎರಡನೆಯ ಸ್ಥಾನ ಪಡೆದ ಪಕ್ಷವೊಂದರ ಅತಿ ಕಳಪೆ ಸಾಧನೆಗೆ ಬಿಜೆಪಿ ಸಾಕ್ಷಿ !

ವರದಿಗಾರ (ಡಿ 11) :  ಛತ್ತೀಸ್’ಗಡ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ನೆಲಕಚ್ಚಿದೆ. ಪಕ್ಷದ ರಾಷ್ಟ್ರೀಯ ನಾಯಕರು ಹಲವಾರು ಬಾರಿ ರಾಜ್ಯದಲ್ಲಿ  ಬಂದು ಪ್ರಚಾರ ಕಾರ್ಯಕೈಗೊಂಡಿದ್ದರೂ ಮತದಾರ ಮಾತ್ರ ಬಿಜೆಪಿಯ ಕೋಮುವಾದಿ ಅಜೆಂಡಾಕ್ಕೆ ವಿದಾಯ ಹಾಡಿದ್ದಾನೆ. ಮತದಾರನ ತೀರ್ಮಾನದ ಮುಂದೆ ಬಿಜೆಪಿ ಗಡ ಗಡ ನಡುಗಿದರೆ ಕಾಂಗ್ರೆಸ್ ಮಾತ್ರ ಕಿಲಕಿಲನೆ ನಕ್ಕಿದೆ. ಬಿಜೆಪಿಯ ರಮಣ್ ಸಿಂಗ್ ರಾಜ್ಯದಲ್ಲಿ ನಾಲ್ಕನೆ ಅವಧಿಗೆ ಮುಖ್ಯಮಂತ್ರಿಯಾಗುವುದನ್ನು ಮತದಾರರು ನಿರಾಕರಿಸಿದ್ದಾರೆ.

90 ವಿಧಾನಸಭಾ ಕ್ಷೇತ್ರಗಳಲ್ಲಿ ಅಧಿಕಾರಕ್ಕಾಗಿ 46 ಮ್ಯಾಜಿಕ್ ಸಂಖ್ಯೆಯಾಗಿದ್ದು ಕಾಂಗ್ರೆಸ್ 68 ಸ್ಥಾನಗಳ ನಿಚ್ಚಳ ಬಹುಮತದೊಂದಿಗೆ ಅಧಿಕಾರಕ್ಕೇರಿದೆ. ಕಾಂಗ್ರೆಸ್ 55ಕ್ಕೂ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿದರೆ ಬಿಜೆಪಿ 15 ಜುಜುಬಿ ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ.   ಇದು ಎರಡನೇ ಸ್ಥಾನ ಗಳಿಸಿದ ಪಕ್ಷವೊಂದರ ಅತಿ ಕಳಪೆ ಸಾಧನೆಯಾಗಿದೆ. ಈ ಮೊದಲು ಎರಡನೆ ಸ್ಥಾನ ಪಡೆದ ಪಕ್ಷ 38 ರ ಆಸುಪಾಸಿನಲ್ಲಿ ಸ್ಥಾನಗಳನ್ನು ಗಳಿಸುತ್ತಿತ್ತು. ಆದರೆ ಈ ಬಾರಿ ಬಿಜೆಪಿಯ ಅತಿ ಕಳಪೆ ಸಾಧನೆ ರಾಜ್ಯದ ಜನರು ಬಿಜೆಪಿಯನ್ನು ನಿರಾಕರಿಸಿರುವುದನ್ನು ಸ್ಪಷ್ಟವಾಗಿ ತೋರಿಸುತ್ತಿದೆ.

2000 ದಲ್ಲಿ ಯುಪಿಎ ಅವಧಿಯಲ್ಲಿ ರಾಜ್ಯ ರಚನೆಯಾದಾಗ ಕಾಂಗ್ರೆಸ್ಸಿನ ಅಜಿತ್ ಜೋಗಿ ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು. 2003 ರ ನಂತರ ಮೂರು ಅವಧಿಯ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿ ರಮಣ್ ಸಿಂಗ್ ರಾಜ್ಯದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತಿದ್ದರು. ಈ ಬಾರಿಯ ಚುನಾವಣೆಯಲ್ಲಿನ ಕಾಂಗ್ರೆಸ್ಸಿನ ಗೆಲುವಿನ ಅಂತರ ಮತ್ತು ಸೀಟು ಗಳಿಕೆಯು ರಾಜ್ಯ ರಚನೆಯಾದ ನಂತರ ಪಕ್ಷವೊಂದರ ಐತಿಹಾಸಿಕ ಸಾಧನೆಯಾಗಿದೆ ಮತ್ತು ಎರಡನೇ ಸ್ಥಾನದಲ್ಲಿರುವ ಪಕ್ಷವೊಂದರ ಅತಿ ಕಳಪೆ ಸಾಧನೆಯೂ ಕೂಡಾ ಆಗಿದೆಯೆನ್ನುವುದು ಗಮನಾರ್ಹ ಅಂಶವಾಗಿದೆ.

To Top
error: Content is protected !!
WhatsApp chat Join our WhatsApp group