ರಾಜ್ಯ ಸುದ್ದಿ

ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಸಾಧ್ಯವೇ ಇಲ್ಲ : ಭವಿಷ್ಯ ನುಡಿದ ಸಿದ್ದರಾಮಯ್ಯ

‘ಮುಖ್ಯಮಂತ್ರಿಯಾಗಬೇಕೆಂಬ ಯಡಿಯೂರಪ್ಪರ ಹಗಲು ಕನಸು ಯಾವುದೇ ಕಾರಣಕ್ಕೂ ಈಡೇರುವುದಿಲ್ಲ’

ವರದಿಗಾರ (ಡಿ.8): ಪಂಚರಾಜ್ಯಗಳಿಗೆ ನಡೆದ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿ ಕಾಂಗ್ರೆಸ್ ಗೆಲ್ಲುವ ನಿರೀಕ್ಷೆ ಇದ್ದು ಈ ಚುನಾವಣೆಯು ಮುಂದಿನ ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದ್ದು, 2019ರ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಸಾಧ್ಯವೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಭವಿಷ್ಯ ಹೇಳಿದ್ದಾರೆ.

ಮೈಸೂರಿನ ಟಿ.ಕೆ.ಲೇ ಔಟ್‍ ನಲ್ಲಿರುವ ತಮ್ಮ ನಿವಾಸದಲ್ಲಿ ಇಂದು ವರದಿಗಾರರೊಂದಿಗೆ ಮಾತನಾಡುತ್ತಾ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸಮ್ಮಿಶ್ರ ಸರ್ಕಾರ ಯಾವುದೇ ಕಾರಣಕ್ಕೂ ಬೀಳುವುದಿಲ್ಲ. ಯಾವೊಬ್ಬ ಶಾಸಕರೂ ಬಿಜೆಪಿ ಸಂಪರ್ಕದಲ್ಲಿಲ್ಲ. ಮುಖ್ಯಮಂತ್ರಿಯಾಗಬೇಕು ಎಂಬ ಯಡಿಯೂರಪ್ಪ ಅವರ ಹಗಲು ಕನಸು ಯಾವುದೇ ಕಾರಣಕ್ಕೂ ಈಡೇರುವುದಿಲ್ಲ ಎಂದು ಹೇಳಿದ್ದಾರೆ.

ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಸರ್ಕಾರ ಬೀಳುತ್ತದೆ ಎಂದು ಯಡಿಯೂರಪ್ಪ ಮತ್ತು ಬಿಜೆಪಿಯ ನಾಯಕರು  ಹೇಳುತ್ತಿದ್ದಾರೆ. ನಮ್ಮ ಸರ್ಕಾರ ಯಾವುದೇ ಕಾರಣಕ್ಕೂ ಬೀಳುವುದಿಲ್ಲ. ಯಡಿಯೂರಪ್ಪನವರಿಗೆ ವಯಸ್ಸಾಗಿದೆ. ಲೋಕಸಭೆ ಚುನಾವಣೆಗೂ ಮುನ್ನ ಮುಖ್ಯಮಂತ್ರಿ ಆಗುವ ಬಯಕೆ ಇಟ್ಟುಕೊಂಡಿದ್ದಾರೆ. ಅದು ಯಾವುದೇ  ಕಾರಣಕ್ಕೂ ಸಾಧ್ಯವಿಲ್ಲ. ನಮ್ಮ ಮೈತ್ರಿ ಸರ್ಕಾರ  ಸುಭದ್ರವಾಗಿದೆ ಎಂದು ಮೈತ್ರಿ ಸರಕಾರದ ವಿರುದ್ಧವಿರುವ ಅಪಪ್ರಚಾರವನ್ನು ತಳ್ಳಿ ಹಾಕಿದ್ದು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ನಮ್ಮ ಸರ್ಕಾರದ ಅವಧಿಯಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ. ನಮ್ಮ ಸರಕಾರದ ಅವಧಿಯಲ್ಲಿ ಆರ್ಥಿಕ ಸಮತೋಲನ ಕಾಪಾಡಿಕೊಂಡು ಬಂದಿದ್ದೇವೆ. ಬಿಜೆಪಿಯವರು ಅಧಿಕಾರದಲ್ಲಿ ಇದ್ದಾಗ ಆರ್ಥಿಕ ಸಮತೋಲನ ಇರಲಿಲ್ಲ. ಇದೆಲ್ಲಾ ಗೊತ್ತಿದ್ದರೂ ಬಿಜೆಪಿ ನಾಯಕರು ಸುಮ್ಮನೆ ಆರೋಪ ಮಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

 

To Top
error: Content is protected !!
WhatsApp chat Join our WhatsApp group