ನಿಮ್ಮ ಬರಹ

ಬೀಫ್ ಹೆಸರಲ್ಲಿ ಕಚ್ಚಾಡುವವರ ಗಮನಕ್ಕೆ

-ಇಸ್ಮತ್ ಪಜೀರ್

ವರದಿಗಾರ (ಡಿ.07): ಮೊನ್ನೆ ಕುಟುಂಬ ಸಮೇತ ಪಿಲಿಕುಳ ಬಯೋಲಾಜಿಕಲ್ ಪಾರ್ಕ್ ಗೆ ಹೋಗಿದ್ದೆ. ಪುಟ್ಟ ಮಗಳಿಗೆ ಪ್ರಾಣಿಗಳನ್ನು ತೋರಿಸಲು ಎರಡೂವರೆ ಕಿಲೋ ಮೀಟರ್ ನಡೆಯುವುದು ಕಷ್ಟವಾದೀತೆಂದು ಬ್ಯಾಟರಿ ಚಾಲಿತ ವಾಹನವೇರಿದೆವು. ಆ ವಾಹನದ ಚಾಲಕರಾಗಿದ್ದ ವೃದ್ಧರು ನಮಗೆ ಗೈಡ್ ನಂತೆಯೇ ಎಲ್ಲವನ್ನೂ ವಿವರಿಸುತ್ತಿದ್ದರು. ಅಲ್ಲಿದ್ದ ಮಾಂಸಾಹಾರಿ ಕಾಡುಪ್ರಾಣಿಗಳಾಗಿದ್ದ ಹುಲಿ, ಸಿಂಹ, ಚಿರತೆ ಮುಂತಾದವುಗಳಿಗೆ ಏನು ಆಹಾರ ಹಾಕುತ್ತಾರೆಂದು ಪ್ರಶ್ನಿಸಿದೆ. ಬೀಫ್ ಎಂದರು. ದಿನಕ್ಕೆ ಎಷ್ಟು ಬಾರಿ ? ಒಮ್ಮೆ ಎಂದರು..
ಒಂದೊಂದು ಪ್ರಾಣಿಗೆ ಎಷ್ಟು ಬೇಕಾಗುತ್ತದೆ? ಅವುಗಳ ಗಾತ್ರದ ಅನುಸಾರ ಸರಾಸರಿ ಐದು ಕಿಲೋ ಎಂದರು.

ಇದರಲ್ಲಿ ತಪ್ಪೇನೂ ಇಲ್ಲ. ಇದು ಸಹಜ ಕೂಡಾ.ಯಾಕೆಂದರೆ ಅವು ಬೇಟೆಯಾಡಿ ತಮ್ಮ ಆಹಾರ ಗಳಿಸುವ ಮಾಂಸಾಹಾರಿ ಪ್ರಾಣಿಗಳು.ಕಾಡಲ್ಲಿದ್ದರೆ ಅವು ವೈವಿಧ್ಯಮಯವಾದ ಆಹಾರವನ್ನು ಬೇಟೆಯಾಡಿ ಸೇವಿಸುತ್ತಿತ್ತು. ಇಲ್ಲಿ ಅವಕ್ಕೆ ಬೀಫ್ ಮಾತ್ರ ಕೊಡುತ್ತಾರೆ. ಅವೇ ಬೇಟೆಯಾಡಿ ದನವನ್ನು ತಿಂದರೆ ಅದು ಬೇರೆ ಪ್ರಶ್ನೆ. ಅವಕ್ಕೆ ನಮ್ಮ ಪಾವಿತ್ರ್ಯತೆಯ ಪಾಠ ಬೋಧಿಸಲಾಗದು. ಆದರೆ ಇಲ್ಲಿ ನಾವೇ ಅದಕ್ಕಾಗಿ ಕನಿಷ್ಠ ಒಂದು ದಿನಕ್ಕೆ ಒಂದು ಹಸುವನ್ನಾದರೂ ಕೊಲ್ಲಬೇಕು ತಾನೆ? ಆಗ ಯಾರಿಗೂ ಪಾವಿತ್ರ್ಯತೆ, ಭಾವನೆಗಳು ಅಡ್ಡ ಬರುವುದಿಲ್ಲವೇ..? ಈ ದೇಶದ ಉದ್ದಗಲಕ್ಕೂ ಎಷ್ಟು ಮೃಗಾಲಯಗಳಿಲ್ಲ… ಹೀಗೆ ಒಂದೊಂದು ಮೃಗಾಲಯಕ್ಕೆ ಸರಾಸರಿ ಐವತ್ತು ಕಿಲೋದಷ್ಟು ದನದ ಮಾಂಸವನ್ನು ಹಾಕಬೇಕಾದರೆ ಅದೆಷ್ಟು ದನಗಳನ್ನು ಕಡಿಯಬೇಕು… ಯಾಕೆ ಅವುಗಳಿಗೆ ಅವುಗಳದ್ದೇ ಸಹಜ ಆಹಾರ ವೈವಿಧ್ಯತೆಯ ಪ್ರಕಾರ ಒಂದು ದಿನ ಕುರಿ, ಇನ್ನೊಂದು ದಿನ ಕತ್ತೆ, ಮತ್ತೊಂದು ದಿನ ಜಿಂಕೆ , ಮಗುದೊಂದು ದಿನ ಹಸು, ಕಾಡುಕೋಣ ಇಂತವುಗಳನ್ನೆಲ್ಲಾ ಹಾಕಬಾರದು? ಯಾಕೆಂದರೆ ಕೆಲವು ಸಂರಕ್ಷಿತ ಪ್ರಾಣಿಗಳು, ಮತ್ತೆ ಕೆಲವಕ್ಕೆ ದುಬಾರಿ ಬೆಲೆ ಅಲ್ವಾ? ಮೃಗಾಲಯದ ಪ್ರಾಣಿಗಳಿಗೆ ಯಾಕೆ ಸದ್ಯ ಪಾವಿತ್ರ್ಯತೆಯ ಹಣೆಪಟ್ಟಿ ಬೀಳದಿರುವ ಆಡು ಕುರಿಗಳನ್ನೇ ಹಾಕಬಾರದು?

ನನಗೆ ತಿಳಿದಿರುವ ಹಾಗೆ ಅದೆಷ್ಟೋ ಮಂದಿ ತಮ್ಮ ಸಾಕು ನಾಯಿಗಳಿಗೆ ವಾರಕ್ಕೊಂದು ಬಾರಿಯಾದರೂ ಬೀಫ್ ಹಾಕುತ್ತಾರೆ. ಅವರಲ್ಲಿ ಗೋವು ಪವಿತ್ರ ಎನ್ನುವವರೂ ಇದ್ದಾರೆ. ಅವರೆಲ್ಲಾ ಸದ್ಯ ಪವಿತ್ರವಲ್ಲದ ಆಡಿನ ಮಾಂಸ ಹಾಕಬಹುದಲ್ಲಾ? ಯಾರೂ ತಮ್ಮ ಪ್ರೀತಿ ಪಾತ್ರ ಸಾಕು ಪ್ರಾಣಿಗಳಿಗೆ ಆಡು ಕುರಿಯಂತಹ ದುಬಾರಿ ಮಾಂಸಗಳನ್ನು ಯಾಕೆ ಹಾಕುವುದಿಲ್ಲ? ಗೋವಿನ ವಿಚಾರದಲ್ಲಿ ಜಗಳಾಡುವವರಿಗೆ ಪಾವಿತ್ರ್ಯತೆಗಿಂತ ದುಡ್ಡು ಮೇಲೇ…?
ಸರಿಯಪ್ಪಾ ನೀವೆಲ್ಲಾ ಗಲಾಟೆ ಮಾಡಿ ಸಂಪೂರ್ಣ ಗೋ ಹತ್ಯೆ ನಿಷೇಧ ಮಾಡಿಸಿದ್ರೆ ಮೃಗಾಲಯದ ಪ್ರಾಣಿಗಳಿಗೆ, ನಿಮ್ಮ ಪ್ರೀತಿಯ ನಾಯಿಗಳಿಗೆ ದನದ ಮಾಂಸ ತರಲು ಎಲ್ಲಿಗೆ ಹೋಗುತ್ತೀರಿ? ಇಲ್ಲಿ ಆಡು ಕುರಿಗಿಂತ ಅಗ್ಗದ ಬೆಲೆಗೆ ಸಿಗುವ ಉತ್ತಮ ಪೌಷ್ಟಿಕಾಂಶಯುಕ್ತ ಆಹಾರವೆಂಬ ಕಾರಣಕ್ಕೆ ಮನುಷ್ಯರು ತಿನ್ನುವಾಗ ಮಾತ್ರ ನಿಮಗೆ ಪಾವಿತ್ರ್ಯತೆ ನೆನಪಾಗುವುದೇ…? ನಿಮಗೆ ಸಂಪೂರ್ಣ ಗೋ ಹತ್ಯೆ ನಿಷೇಧ ಬೇಕು ತಾನೆ? ನಿಮ್ಮದೇ ದೈವ ಸ್ವರೂಪಿ ಮೋದಿಯವರಿಗೆ ಫುಲ್ ಮೆಜಾರಿಟಿ ಇದೆ ತಾನೆ? ಗೋ ಮಾಂಸ ರಫ್ತಿನಲ್ಲಿ ಭಾರತಕ್ಕೆ ಮೊದಲ ಸ್ಥಾನವಿದೆ. ಬಡಪಾಯಿಗಳನ್ನು ಹೊಡೆಯುವ ಬಡಿಯುವ ಕೊಲ್ಲುವ ನಿಮಗ್ಯಾಕೆ ಸಂಪೂರ್ಣ ಗೋ ಹತ್ಯೆ ನಿಷೇಧ ಮಾಡಿಸಲು ಸಾಧ್ಯವಿಲ್ಲ. ಒಂದು ವಿಷಯ ನೆನಪಿಟ್ಟುಕೊಳ್ಳಿ… ಇಲ್ಲಿ ಯಾರೇ ಅಧಿಕಾರಕ್ಕೆ ಬಂದರೂ ಬೀಫ್ ನಿಷೇಧ ಬಿಲ್ ಕುಲ್ ಮಾಡುವುದಿಲ್ಲ. ಅದು ನಮ್ಮ ದೇಶದ ಅರ್ಥ ವ್ಯವಸ್ಥೆಯ ಅವಿಭಾಜ್ಯ ಅಂಗ..

ನಿಮ್ಮ ಮತವನ್ನು ಅವರೆಡೆಗೆ ಖಾತರಿಪಡಿಸಲು ಈ ವಿವಾದವನ್ನು ಅವರು ಸದಾ ಜೀವಂತವಿಡುತ್ತಾರಷ್ಟೆ. ಬೀದಿಯಲ್ಲಿ ಗೋ ಮಾಂಸದ ವಿಷಯದಲ್ಲಿ ಜಗಳಾಡುವವರನ್ನು ರಾಜಕೀಯ ಲಾಭಕ್ಕಾಗಿ ಬಳಸಲಾಗುತ್ತಿದೆ. ಮುಝಪ್ಫರ್ ನಗರ ಗಲಭೆಯ ರೂವಾರಿ ಪ್ರಖರ ಹಿಂದೂತ್ವವಾದಿ ಶಾಸಕ ಸಂಗೀತ್ ಸೋಮ್ ಗೋ ಹತ್ಯೆ ನಿಷೇಧದ ಇಶ್ಯೂವನ್ನು ಇಟ್ಟುಕೊಂಡು ಅದೆಷ್ಟೋ ಅಮಾಯಕರ ಜೀವ ಬಲಿಯಾಗಲು ಕಾರಣಕರ್ತನಾಗಿದ್ದಾನೆ. ಅದೇ ಸಂಗೀತ್ ಸೋಮ್ ನಿಗೆ ಬೀಫ್ ರಫ್ತು ಕಂಪೆನಿಯೂ ಇದೆ. ನಿಮ್ಮ ನಿಮ್ಮ ಓರಗೆಯ ಅಮಾಯಕರನ್ನು ಗೋ ಮಾಂಸದ ಹೆಸರಲ್ಲಿ ಹೊಡೆಯುವ, ಬಡಿಯುವ ಮತ್ತು ಕೊಲ್ಲುವ ಮಂದಿ ಈ ದಿಸೆಯಲ್ಲಿ ಒಂದು ಗಂಟೆ ಏಕಾಂಗಿಯಾಗಿ ಕೂತು ಯೋಚಿಸಿ. ನಿಮ್ಮ ಮನಸ್ಸು ಆಗ ಈ ಸತ್ಯದ ದರ್ಶನ ನಿಮಗೆ ಖಂಡಿತಾ ಮಾಡುತ್ತದೆ.

To Top
error: Content is protected !!
WhatsApp chat Join our WhatsApp group