ರಾಷ್ಟ್ರೀಯ ಸುದ್ದಿ

‘ಬಿಜೆಪಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದೆ’: ರಾಜೀನಾಮೆ ನೀಡಿದ ಬಿಜೆಪಿ ಸಂಸದೆ ಸಾವಿತ್ರಿಬಾಯಿ ಫುಲೆ !

ವರದಿಗಾರ (ಡಿ 06) :  ಹೆಸರು ಬದಲಾವಣೆಯನ್ನೇ ಅಭಿವೃದ್ಧಿ ಎಂದು ನಂಬಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ರಾಜ್ಯದಲ್ಲಿ ಬಿಜೆಪಿಗೆ ಮರ್ಮಾಘಾತವಾಗಿದೆ.  ಪಕ್ಷದ ಬಹರೈಚ್ ನ ಸಂಸದೆಯಾಗಿರುವ ಸಾವಿತ್ರಿ ಬಾಯಿ ಫುಲೆ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಲ್ಲದೆ, ಬಿಜೆಪಿಯ ತನ್ನ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಿ ಹೊರಬಂದಿದ್ದಾರೆ. ಸಂಸದೆಯ ಈ ನಡೆಯು ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿಗೆ ಭಾರೀ ನಷ್ಟವನ್ನು ತಂದೊಡ್ಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎನ್ನಲಾಗಿದೆ.

ರಾಜೀನಾಮೆ ನೀಡಿದ ಸಾವಿತ್ರಿ ಬಾಯಿ, “ಬಿಜೆಪಿಯು ಸಮಾಜವನ್ನು ಒಡೆಯುವ ಕೆಲಸವನ್ನು ಮಾಡುತ್ತಿದೆ. ಆದ್ದರಿಂದ ನಾನು ಆ ಪಕ್ಷದಲ್ಲಿ ಮುಂದುವರಿಯಲು ಇಷ್ಟಪಡುವುದಿಲ್ಲ” ಎಂದು ಹೇಳಿದ್ದಾರೆ.

ಬಿ ಎ ಪದವೀಧರೆಯಾಗಿರುವ ಸಾವಿತ್ರಿ ಬಾಯಿ ಫುಲೆ, ತನ್ನ ಹದಿನಾಲ್ಕನೆಯ ವಯಸ್ಸಿನಲ್ಲಿಯೇ ಸಾರ್ವಜನಿಕ ರಂಗದ ಕುರಿತು ಆಸಕ್ತರಾಗಿದ್ದರು. 1995 ರಲ್ಲಿ  ಆಗಿನ ಮುಖ್ಯಮಂತ್ರಿಯಾಗಿದ್ದ ಮಾಯಾವತಿಯವರು ಬಹರೈಚ್ ನ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಾಗ 14 ರ ಹರೆಯದ ಸಾವಿತ್ರಿ ಬಾಯಿಯವರು ಅಂಬೇಡ್ಕರ್ ಮತ್ತು ಸಂವಿಧಾನದ ಕುರಿತು ಭಾಷಣ ಮಾಡಿದ್ದಲ್ಲದೆ, ಮಾಯಾವತಿಯವರಿಂದ ಬೆನ್ನು ತಟ್ಟಿಸಿಕೊಂಡಿದ್ದರು. ಹದಿಹರೆಯದಲ್ಲಿ ಬಿಎಸ್ಪಿ ಜೊತೆಗೆ ತನ್ನ ರಾಜಕೀಯ ಜೀವನ ಪ್ರಾರಂಭಿಸಿದ್ದ ಸಾವಿತ್ರಿ ಬಾಯಿಯವರು, ತದ ನಂತರ ಬಿಜೆಪಿಗೆ ಸೇರಿದ್ದರು. 2012 ರಿಂದ 2014 ರ ವರೆಗೆ ಉತ್ತರಪ್ರದೇಶದ ಬಲ್ಹಾ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಅವರು, 2014 ರ ಲೋಕಸಭಾ ಚುನಾವಣೆಯಲ್ಲಿ ಬಹರೈಚ್ ಮೀಸಲು ಕ್ಷೇತ್ರದಂದ ಸ್ಪರ್ಧಿಸಿ ಬಿಜೆಪಿಯ ಸಂಸದೆಯಾಗಿ ಆಯ್ಕೆಯಾಗಿದ್ದರು.

ಸಾವಿತ್ರಿ ಬಾಯಿಯವರು ಬಿಜೆಪಿ ಪಕ್ಷದಲ್ಲಿದ್ದರೂ ಕೂಡಾ ಸಂವಿಧಾನ ಮತ್ತು ಅಂಬೇಡ್ಕರ್ ಕುರಿತಾಗಿನ ವಿಷಯಗಳಲ್ಲಿ ಯಾವುದೇ ರಾಜಿ ಮಾಡಿಕೊಂಡಿರಲಿಲ್ಲ. ಕಳೆದ ಎಪ್ರಿಲ್ ನಲ್ಲಿ ರಾಲಿಯೊಂದನ್ನು ಉದ್ದೇಶಿಸಿ ಮಾತನಾಡಿದ್ದ ಸಾವಿತ್ರಿ ಬಾಯಿ ಫುಲೆಯವರು, ಕೆಲವರು ಮೀಸಲಾತಿ ರದ್ದತಿ ಬಗ್ಗೆ ಮಾತನಾಡುತ್ತಾರೆ, ಇನ್ನು ಕೆಲವರು ಸಂವಿಧಾನವನ್ನು ಬದಲಿಸುವ ಕುರಿತು ಮಾತನಾಡುತ್ತಾರೆ. ನಾನು ಸಂಸದೆಯಾಗಿ ಉಳಿಯುತ್ತೇನೋ ಇಲ್ಲವೋ ಗೊತ್ತಿಲ್ಲ. ಆದರೆ ಈ ದೇಶದ ಬಹುಜನರ ಹಕ್ಕು ಮತ್ತು ಸಂವಿದಾನದ ರಕ್ಷಣೆಗಾಗಿ ಹೋರಾಡುತ್ತಲೇ ಇರುತ್ತೇನೆ” ಎಂದು ಹೇಳಿಕೆ ನೀಡಿದ್ದರು. ಉತ್ತರ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಹದೆಗೆಟ್ಟಿರುವ ನಡುವೆಯೇ ಪಕ್ಷದ ಸಂಸದೆಯ ರಾಜೀನಾಮೆಯು ಪಕ್ಷಕ್ಕೆ ಬಹುದೊಡ್ಡ ಹಿನ್ನೆಡೆಯೆಂದೇ ವ್ಯಾಖ್ಯಾನಿಸಲಾಗಿದೆ.

To Top
error: Content is protected !!
WhatsApp chat Join our WhatsApp group