ರಾಷ್ಟ್ರೀಯ ಸುದ್ದಿ

ಬಿಜೆಪಿಯು ಹಿಂದೂಗಳ ಹೆಸರಿನಲ್ಲಿ ಸುಳ್ಳು ಹೇಳುತ್ತಿರುವ ಪಕ್ಷ: ಮಮತಾ ಬ್ಯಾನರ್ಜಿ ಗಂಭೀರ ಆರೋಪ

ಎನ್‌ಆರ್‌ಸಿ ವಿರುದ್ಧ ಚಳುವಳಿ ಮುಂದುವರಿಸುವಂತೆ ಅಸ್ಸಾಂ ಜನರಿಗೆ ಕರೆ ನೀಡಿದ ಬ್ಯಾನರ್ಜಿ

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಎಲ್ಲ ವಿರೋಧ ಪಕ್ಷಗಳು ಒಂದಾಗುವಂತೆ ಕರೆ

ವರದಿಗಾರ (ಡಿ.06): ಬಿಜೆಪಿಯು ಹಿಂದೂಗಳ ಹೆಸರಿನಲ್ಲಿ ಸುಳ್ಳು ಹೇಳುತ್ತಿರುವ ಪಕ್ಷವೆಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ತೃಣ ಮೂಲ ಕಾಂಗ್ರೆಸ್‌(ಟಿಎಂಸಿ) ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

ಅವರು ಪುರ್ಬಾ ಮೇದಿನಿಪುರ್‌ ಜಿಲ್ಲೆಯಲ್ಲಿ ಬುಧವಾರ ನಡೆದ ಸಾರ್ವಜನಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ‘ಅಸ್ಸಾಂನಲ್ಲಿ 40 ಲಕ್ಷ ಜನರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆಯಲಾಗಿದೆ. ಅದರಲ್ಲಿದ್ದ 23 ಲಕ್ಷ ಹಿಂದೂಗಳು ಬೆಂಗಾಳಿಗಳು. ಹಿಂದೂಗಳ ಹೆಸರಲ್ಲಿ ಸುಳ್ಳು ಹೇಳುತ್ತಿರುವವರು ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು’ ಎಂದು ಅವರು ಎಚ್ಚರಿಸಿದ್ದಾರೆ.

ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ) ಅಂತಿಮ ಪಟ್ಟಿಯ ವಿರುದ್ಧ ನವೆಂಬರ್‌ 16ರಂದು ಮಾತನಾಡಿದ್ದ ಅವರು, ಎನ್‌ಆರ್‌ಸಿ ವಿರುದ್ಧ ಚಳುವಳಿ ಮುಂದುವರಿಸುವಂತೆ ಅಸ್ಸಾಂ ಜನರಿಗೆ ಕರೆ ನೀಡಿದ್ದಾರೆ. ಜೊತೆಗೆ ಟಿಎಂಸಿ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ‘ಎನ್‌ಆರ್‌ಸಿ ಪಟ್ಟಿಯಿಂದ ನಿಜವಾದ ನಾಗರಿಕರ ಹೆಸರುಗಳನ್ನು ಕೈಬಿಡಲಾಗಿದೆ. ಅಸ್ಸಾಂ, ಬಿಹಾರ ಹಾಗೂ ಬಂಗಾಳಿಗಳನ್ನು ಬಲವಂತವಾಗಿ ಪಟ್ಟಿಯಿಂದ ಹೊರಹಾಕಲಾಗಿದೆ. ಪಟ್ಟಿಯಲ್ಲಿ ನಿಮ್ಮ ತಾಯಿಯ ಹೆಸರಿದೆ. ಆದರೆ, ತಂದೆಯ ಹೆಸರಿಲ್ಲ ಎಂಬುದನ್ನು ಸುಮ್ಮನೆ ಕಲ್ಪಿಸಿಕೊಳ್ಳಿ. ನಿಮ್ಮ ಮಗನ ಹೆಸರನ್ನು ಉಲ್ಲೇಖಿಸಲಾಗಿದೆ. ಆದರೆ, ಮಗಳ ಹೆಸರನ್ನು ಕೈಬಿಡಲಾಗಿದೆ ಎಂಬುದನ್ನು ಊಹಿಸಿ. ಪಟ್ಟಿಯ ನಿಜಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ’ ಎಂದು ಹೇಳಿ ಎನ್‌ಆರ್‌ಸಿ ಪಟ್ಟಿಯ ಗಂಭೀರತೆಯನ್ನು ಹೇಳಿದ್ದಾರೆ.

‘ಬಿಜೆಪಿಯು ಇತಿಹಾಸ ತಿರುಚಬಹುದು. ಹೆಸರಿಗಳನ್ನು ಬದಲಿಸಬಹುದು. ಆದರೆ ಗೇಮ್‌ ಚೇಂಜರ್‌ ಆಗಲು ಸಾಧ್ಯವಿಲ್ಲ. ಸದ್ಯ ದೇಶದ ಸ್ಥಿತಿ ಅಪಾಯದಲ್ಲಿದೆ’ ಎಂದು ಹೇಳಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಎಲ್ಲ ವಿರೋಧ ಪಕ್ಷಗಳು ಒಂದಾಗಬೇಕು ಎಂದು ಮಮತಾ ಬ್ಯಾನರ್ಜಿ ರಾಜಕೀಯ ಪಕ್ಷಗಳಿಗೆ ಕರೆ ನೀಡಿದ್ದಾರೆ.

 

To Top
error: Content is protected !!
WhatsApp chat Join our WhatsApp group