ರಾಷ್ಟ್ರೀಯ ಸುದ್ದಿ

ಹಾದಿಯಾಳನ್ನು ಕೊಲ್ಲುವೆನೆಂದಿದ್ದ ಹಿಂದುತ್ವ ಮುಖಂಡ ಸಿ ಪಿ ಸುಗಥನನ್ನು ಮಹಿಳಾ ರಕ್ಷಣಾ ವಿಭಾಗದ ಮುಖ್ಯಸ್ಥನನ್ನಾಗಿಸಿದ ಪಿಣರಾಯಿ ವಿಜಯನ್ !

➤ ಕಮ್ಯುನಿಸ್ಟರ ಈ ‘ಸಂಘ’ ಪ್ರೇಮಕ್ಕೆ ಕೇರಳದಲ್ಲಿ ವ್ಯಾಪಕ ವಿರೋಧ !

➤ಶಬರಿಮಲೆಯಲ್ಲಿ ಮಹಿಳಾ ಪತ್ರಕರ್ತೆಯನ್ನು ಎಳೆದಾಡಿದ್ದ ಈ “ಮಹಿಳಾ ರಕ್ಷಕ” !

 ವರದಿಗಾರ (ಡಿ 03) :  ಹಾದಿಯಾ ನನ್ನ ಮಗಳಾಗಿದ್ದಿದ್ದರೆ ಆಕೆಯ ತಲೆವಸ್ತ್ರವನ್ನು ಹಿಡಿದೆಳೆದು, ಆಕೆಯ ರುಂಡದಿಂದ ಮುಂಡವನ್ನು ಬೇರ್ಪಡಿಸಿ ಜೈಲಿಗೆ ಹೋಗುತ್ತಿದ್ದೆ ಎಂದು ಸಾಮಾಜಿಕ ತಾಣಗಳಲ್ಲಿ ಘೋಷಿಸಿದ್ದ ಸಿ ಪಿ ಸುಗಥನ್ ಎನ್ನುವ ಹಿಂದೂ ಮತಾಂಧ ಸಂಘಟನೆಯೊಂದರ ಕಾರ್ಯದರ್ಶಿಯನ್ನು ಕೇರಳದ ಕಮ್ಯುನಿಸ್ಟ್ ಸರಕಾರದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ‘ಮಹಿಳಾ ಗೋಡೆ’  ಎನ್ನುವ ಮಹಿಳಾ ರಕ್ಷಣಾ ವಿಭಾಗದ ಸಹ ಸಂಚಾಲಕನನ್ನಾಗಿ ಆಯ್ಕೆ ಮಾಡಿದ್ದಾರೆ. ಇದು ಕೇರಳ ರಾಜ್ಯದಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಕಮ್ಯುನಿಸ್ಟ್ ಸರಕಾರದ ಆರೆಸ್ಸೆಸ್ ಪ್ರೇಮವನ್ನು ಜನರು ಸಾಮಾಜಿಕ ತಾಣಗಳಲ್ಲಿ ಪ್ರಶ್ನಿಸುತ್ತಿದ್ದಾರೆ. ಈ ಸಿ ಪಿ ಸುಗಥನ್,  ಹಿಂದೂ ಪಾರ್ಲಿಮೆಂಟ್ ಎನ್ನುವ ಸಂಘಟನೆಯೊಂದರ ರಾಜ್ಯ ಕಾರ್ಯದರ್ಶಿ ಕೂಡಾ ಆಗಿದ್ದು, ಕಳೆದ ಬಾರಿಯ ಶಬರಿಮಲೆಯ ವಿವಾದದ ಸಮಯದಲ್ಲಿ NDTV ಪತ್ರಕರ್ತೆ ಸ್ನೇಹಾ ಕೋಶಿಯವರನ್ನು ಎಳೆದಾಡಿದ್ದಾಗಿ ಖುದ್ದು ಸ್ನೇಹಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ ಮತ್ತು ಆ ಕುರಿತಾಗಿನ ಒಂದು ಫೋಟೋವನ್ನು ಟ್ವೀಟ್ ಮಾಡಿದ್ದಾರೆ.

ಈ ‘ಮಹಿಳಾ ಗೋಡೆ’ ಯನ್ನು ಜನವರಿ ಒಂದರ ನಂತರ ಅಸ್ತಿತ್ವಕ್ಕೆ ತರಲು ರಾಜ್ಯ ಸರಕಾರ ಉದ್ದೇಶಿಸಿದ್ದು, ಶಬರಿಮಲೆಯಲ್ಲಿ ಮಹಿಳೆಯರಿಗೆ ಪ್ರಾರ್ಥನೆಗೆ ಅವಕಾಶ ಕಲ್ಪಿಸಿದ ಸುಪ್ರೀಂ ಕೋರ್ಟಿನ ತೀರ್ಪನ್ನು ಪಾಲಿಸಲು ಇದನ್ನು ಸ್ಥಾಪಿಸಲಾಗಿದೆ ಎಂಬುವುದು ಸರಕಾರದ ಹೇಳಿಕೆಯಾಗಿದೆ. ಆದರೆ ಕೇರಳದ ತಿರುತ್ತಲ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿ ಟಿ ಬಲರಾಮ್ ತಮ್ಮ ಫೇಸ್ಬುಕ್ ಖಾತೆಯಲ್ಲಿ ಈ ಕುರಿತು ಪೋಸ್ಟ್ ಒಂದನ್ನು ಹಾಕಿದ್ದು, ”ಸಿ ಪಿ ಸುಗಥನ್ ರೀತಿಯ ಮತಾಂಧರನ್ನು ಮುಂದಿರಿಸಿಕೊಂಡು ನವೋತ್ಥಾನ ಚಳವಳಿಯ ನಾಟಕ ಮಾಡುತ್ತಿರುವವರ ವಿರುದ್ಧ ಮಾತನಾಡಲು ಯಾರೊಬ್ಬರ ನಾಲಗೆಯೂ ಅಲುಗಾಡುತ್ತಿಲ್ಲ. ಸುಗಥನ್ ರಂತಹಾ ಮತಾಂಧ ಕೋಮುವಾದಿಯೊಬ್ಬನನ್ನು ಸಂಚಾಲಕರನ್ನಾಗಿಸಿರುವ ಪಿಣರಾಯಿ ವಿಜಯನ್ ಅವರ ಈ ಮಹಿಳಾ ಗೋಡೆಯ ಸ್ಥಾಪನೆ ಯಾರಿಗೆಲ್ಲಾ ಸಹಾಯ ಮಾಡಲು ಮತ್ತು ಯಾರನ್ನೆಲ್ಲಾ ವಿರೋಧಿಸಲು ಎಂಬ ಸತ್ಯವನ್ನು ಅರಿತುಕೊಳ್ಳಲು ಜಾತ್ಯತೀತ ಕೇರಳದ ಪ್ರಜ್ಞಾವಂತ ಜನರಿಗೆ ಸಾಧ್ಯವಿದೆ ಎಂದು ಪೋಸ್ಟ್ ಮಾಡಿದ್ದಾರೆ. ಅವರು ತನ್ನ ಪೋಸ್ಟಿನಲ್ಲಿ ಸಿ ಪಿ ಸುಗಥನ್ ಈ ಹಿಂದೆ ಹಾದಿಯಾ ವಿರುದ್ದ ಹಾಕಿದ್ದ ಪ್ರಚೋದನಕಾರಿ ಪೋಸ್ಟ್ ಗಳ ಚಿತ್ರಗಳನ್ನು ಕೂಡಾ ಹಾಕಿದ್ದಾರೆ.

‘ಸ್ತ್ರೀಯರಿಗೆ ಲಿಂಗ ಸಮಾನತೆಯನ್ನು ಪಾಲಿಸುವ ಪಿಣರಾಯಿಯ ನವೋತ್ಥಾನ ಹೋರಾಟ ಈ ಶತಮಾನದ ಬಹುದೊಡ್ಡ ತಮಾಶೆ’ ಎಂದು ಕಾಂಗ್ರೆಸ್ ನಾಯಕ ಜ್ಯೋತಿಕುಮಾರ್ ಚಮಕ್ಕಳ ಹಾಸ್ಯಗೈದಿದ್ದಾರೆ. ಮುಖ್ಯಮಂತ್ರಿಗೆ ನೈತಿಕತೆ ಏನಾದರೂ ಇದ್ದರೆ ಇಂತಹಾ ನಿರ್ಧಾರಗಳಿಂದ ಹಿಂದೆ ಸರಿಯಬೇಕೆಂದು ಅವರು ಕರೆ ನೀಡಿದ್ದಾರೆ.

ಇದೇ ವೇಳೆ ಎನ್ ಡಿ ಟಿ ವಿ ಯ ಮಹಿಳಾ ಪತ್ರಕರ್ತೆ ಸ್ನೇಹಾ ಕೋಶಿ ಟ್ವೀಟ್ ಒಂದನ್ನು ಮಾಡಿದ್ದು,   ಶಬರಿಮಲೆಯಲ್ಲಿ ನಮ್ಮ NDTVಯ ತಂಡವನ್ನು ಎಳೆದಾಡಿದ ವ್ಯಕ್ತಿ ಸಿ ಪಿ ಸುಗಥನನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕಾಸರಗೋಡಿನಿಂದ ತಿರುವನಂತಪುರದವರೆಗೆ ಶಬರಿಮಲೆಯ ಮಹಿಳಾ ಯಾತ್ರಿಗಳಿಗೆ ರಕ್ಷಣೆ ಒದಗಿಸುವ ‘ಮಹಿಳಾ ಗೋಡೆ’ ಸಮಿತಿಯ ಸಹಸಂಚಾಲಕನನ್ನಾಗಿ ಆಯ್ಕೆ ಮಾಡಿದ್ದಾರೆ. ಕೇಸರಿ ಶಾಲು ಹಾಕಿಕೊಂಡು ನನ್ನ ಹಿಂಬದಿಯಲ್ಲಿರುವವನೇ ಸುಗಥನ್ ಎಂದು ಬರೆದುಕೊಂಡು ಪಂದು ಫೋಟೋವನ್ನು ಕೂಡಾ ಪೋಸ್ಟ್ ಮಾಡಿದ್ದಾರೆ.

ಒಟ್ಟಿನಲ್ಲಿ ಕೇರಳದ ಕಮ್ಯುನಿಸ್ಟ್ ಸರಕಾರ ಶಬರಿಮಲೆಗೆ ಸ್ತ್ರೀ ಪ್ರವೇಶವನ್ನು ತಮ್ಮ ರಾಜಕೀಯ ಲಾಭಕ್ಕೋಸ್ಕರ ವಿರೋಧಿಸುತ್ತಿರುವ ಸಂಘಪರಿವಾರದ್ದೇ ಮೂಲದ ವ್ಯಕ್ತಿಯೋರ್ವನನ್ನು ಮಹಿಳಾ ರಕ್ಷಣಾ ಸಮಿತಿಗೆ ಆಯ್ಕೆ ಮಾಡಿ ನಗೆಪಾಟಲಿಗೀಡಾಗಿದ್ದಾರೆ. ಶಬರಿಮಲೆಯಲ್ಲಿ ಸುಪ್ರೀಮ್ ಕೋರ್ಟಿನ ತೀರ್ಪನ್ನು ಪಾಲಿಸುವಲ್ಲಿನ ಸರಕಾರದ ಬದ್ಧತೆಯನ್ನು ಜನ ಸಂಶಯದಿಂದ ನೋಡುವಂತಾಗಿದೆ.

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group