ರಾಷ್ಟ್ರೀಯ ಸುದ್ದಿ

ಲೋಕಸಭಾ ಚುನಾವಣೆಗಾಗಿ ಆರೆಸ್ಸೆಸ್ ರಾಮಮಂದಿರ ವಿವಾದವನ್ನು ಎತ್ತಿ ಹಿಡಿದಿದೆ: ಮಲ್ಲಿಕಾರ್ಜುನ ಖರ್ಗೆ

ವರದಿಗಾರ (ಡಿ.02): ‘ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿಗೆ ಅನುಕೂಲವಾಗಲೆಂದು ರಾಮ ಮಂದಿರ ವಿಷಯವನ್ನು ಎತ್ತುವುದು ಆರೆಸ್ಸೆಸ್ (ರಾಷ್ಟ್ರೀಯ ಸ್ವಯಂ ಸೇವಕ ಸಂಘ)ನ ಉದ್ಯೋಗವಾಗಿದೆ’ ಎಂದು ಲೋಕಸಭೆಯ ಕಾಂಗ್ರೆಸ್‌ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಶನಿವಾರ ಟೀಕಿಸಿದರು.

ವಿವಾದಿತ ರಾಮ ಮಂದಿರ ನಿರ್ಮಾಣಕ್ಕಾಗಿ ಆರೆಸ್ಸೆಸ್ ಹಮ್ಮಿಕೊಂಡಿರುವ ಸಂಕಲ್ಪ ಯಾತ್ರೆ ಬಗ್ಗೆ ಪ್ರತಿಕ್ರಿಯಿಸಿರುವ ಖರ್ಗೆ, ‘ಮತಗಳ ಧ್ರುವೀಕರಣಕ್ಕೆ ಇಂತಹ ವಿಷಯಗಳನ್ನು ಎತ್ತುವುದು ಅವರಿಗೆ ಸಾಮಾನ್ಯವಾಗಿದೆ. ಲೋಕಸಭೆ ಚುನಾವಣೆಗೆ ಮೂರು ತಿಂಗಳು ಇದೆ. ಈ ಸಮಯದಲ್ಲಿಯೇ ಇಂತಹ ವಿಷಯವನ್ನು ಮುಂದೆ ತರುವುದು ಅವರ ಕೆಲಸ’ ಎಂದು ಹೇಳಿದ್ದಾರೆ.

‘ಸಾಂಸ್ಕೃತಿಕ ಮತ್ತು ತಟಸ್ಥ ನಿಲುವು ಹೊಂದಿದ ಸಂಘಟನೆ ಎಂದು ಆರೆಸ್ಸೆಸ್ ಹೇಳಿಕೊಳ್ಳುತ್ತದೆ. ಆದರೆ, ತಟಸ್ಥ ಸಂಘಟನೆಯಾಗಿ ಅದು ಉಳಿದಿಲ್ಲ. ಬಿಜೆಪಿಗೆ ಸಹಾಯ ಮಾಡುವುದೇ ಅದರ ಉದ್ದೇಶವಾಗಿದೆ’ ಎಂದಿದ್ದಾರೆ.

ಇದಕ್ಕೂ ಮುನ್ನ, ಯುನೈಟೆಡ್ ಕ್ರಿಶ್ಚಿಯನ್ ಕಾಂಗ್ರೆಸ್‌ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಖರ್ಗೆ, ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದಲ್ಲಿ ಕ್ರಿಶ್ಚಿಯನ್‌ರ ಕೊಡುಗೆ ಏನೂ ಇಲ್ಲ ಎಂದು ಬಿಜೆಪಿ ಶಾಸಕ ಗೋಪಾಲ್‌ ಶೆಟ್ಟಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಸ್ವಾತಂತ್ರ್ಯಕ್ಕಾಗಿ ಆರೆಸ್ಸೆಸ್ ಮತ್ತು ಬಿಜೆಪಿಯವರು ಎಷ್ಟು ತ್ಯಾಗ ಮಾಡಿದ್ದಾರೆ ಎಂದು ಕೇಳುವುದಿಲ್ಲ. ಆದರೆ, ಸಮಾಜದ ಎಲ್ಲ ವರ್ಗದವರು ಮೂಲಭೂತ ಹಕ್ಕುಗಳನ್ನು ಕಾಪಾಡಲು ಸಂವಿಧಾನ ರಕ್ಷಣೆಗೆ ಮುಂದಾಗಬೇಕು’ ಎಂದು ಹೇಳಿದರು.

‘ಹಿಂದೂ ಧರ್ಮವು ಎಲ್ಲರಿಗೂ ಸೇರಿದ್ದು, ಆದರೆ, ಬಿಜೆಪಿಯ ಹೊಸ ಹಿಂದೂ ತತ್ವವು ಸಮಾಜವನ್ನು ಒಡೆಯುವ ಮತ್ತು ಧ್ವೇಷಮಯ ವಾತಾವರಣ ಸೃಷ್ಟಿಸುವ ಕೆಲಸ ಮಾಡುತ್ತಿದೆ’ ಎಂದು ಹೇಳಿದ್ದಾರೆ. ಶಿಕ್ಷಣ ಮತ್ತು ಆರೋಗ್ಯ ಸೇವೆಗಳ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ಕ್ರಿಶ್ಚಿಯನ್‌ರ ಕೊಡುಗೆ ಅಪಾರವಿದೆ ಎಂದು ಅವರನ್ನು ಸ್ಮರಿಸಿದ್ದಾರೆ.

 

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group