ಅಭಿಪ್ರಾಯ

ಖಾಸಗಿ ಬಸ್ಸುಗಳ ಬಿಜೆಪಿ ನಿಷ್ಟೆ ಮತ್ತು ಜನಸಾಮಾನ್ಯರ ಬವಣೆಗಳು

ಸಂಘಪರಿವಾರದ ಕಾರ್ಯಕ್ರಮಕ್ಕೆ ದ. ಕ. ಖಾಸಗಿ ಬಸ್ ಮಾಲಕರ ಪರೋಕ್ಷ ಬೆಂಬಲಕ್ಕೆ ವ್ಯಾಪಕ ಆಕ್ರೋಶ

-ಇಸ್ಮತ್ ಪಜೀರ್

ವರದಿಗಾರ (ನ.22): ಮುಂದಿನ ಭಾನುವಾರ ಅಂದರೆ ನವೆಂಬರ್ ಇಪ್ಪತ್ತೈದರಂದು ಮಂಗಳೂರು ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಕರೆದಿರುವ “ರಾಮಮಂದಿರ ನಿರ್ಮಾಣ ಕುರಿತ ಜನಾಗ್ರಹ” ಸಭೆಗೆ ಮಂಗಳೂರಿಗೆ ತೆರಳುವ ಬಿಜೆಪಿ ಮತ್ತಿತರ ಸಂಘ ಪರಿವಾರ ಕಾರ್ಯಕರ್ತರಿಗೆ ಬಸ್ಸಿನಲ್ಲಿ ಉಚಿತ ಪ್ರಯಾಣದ ಸೌಲಭ್ಯ ನೀಡಲು ದ.ಕ.ಜಿಲ್ಲಾ ಬಸ್ಸು ಮಾಲಕರ ಸಂಘವು ಬಸ್ಸು ಮಾಲಕರಿಗೆ ಸುತ್ತೋಲೆ ಕಳುಹಿಸಿದ್ದು ಇದೀಗ ವೈರಲ್‌ ಆಗಿದೆ.

ಈ ಹಿಂದೆಯೂ ಮಂಗಳೂರಿನ ಖಾಸಗಿ ಬಸ್ ಮಾಲಕರ ಸಂಘವು ಬಿಜೆಪಿ ಪರ ಬ್ಯಾಟಿಂಗ್ ಮಾಡಿದ್ದು ಗುಟ್ಟಾಗೇನೂ ಉಳಿದಿಲ್ಲ. ಮಂಗಳೂರಿನಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದೀಚೆಗೆ ಬಿಜೆಪಿ ಮತ್ತು ಸಂಘಪರಿವಾರ ಕರೆ ಕೊಟ್ಟ ಬಂದ್ ಗಳು ವಿಫಲವಾಗಿದ್ದು ತೀರಾ ವಿರಳ. ಇದರ ಹಿಂದೆ ಬಸ್ಸು ಮಾಲಕರ ಕಾಣದ ಕೈಗಳು ಕೆಲಸ ಮಾಡಿದ್ದವು. ದಕ್ಷಿಣ ಕನ್ನಡ ಜಿಲ್ಲೆಯ ಜನಸಾಮಾನ್ಯರ ಪ್ರಮುಖ ಸಾರಿಗೆ ವಾಹನ ಖಾಸಗಿ ಬಸ್ಸುಗಳು. ಆದುದರಿಂದ ಬಸ್ಸುಗಳು ರಸ್ತೆಗೆ ಇಳಿಯದಿದ್ದರೆ ಬಂದ್ ಖಂಡಿತಾ ಯಶಸ್ವಿಯಾಗುತ್ತದೆ. ಇದೇ ಬಸ್ಸು ಮಾಲಕರ ಸಂಘವು ಬಿಜೆಪಿಯೇತರ ಪಕ್ಷ ಅಥವಾ ಸಂಘಟನೆಗಳು ಬಂದ್ ಗೆ ಕರೆ ಕೊಟ್ಟಾಗ ಬಸ್ಸುಗಳನ್ನು ರಸ್ತೆಗೆ ಇಳಿಸದೇ ಇದ್ದುದೇ ತೀರಾ ವಿರಳ. ಬಿಜೆಪಿಯೇತರರ ಬಂದ್ ಗಳನ್ನು ವಿಫಲಗೊಳಿಸುವಲ್ಲಿಯೂ ಖಾಸಗಿ ಬಸ್ಸುಗಳ ಪಾತ್ರ ನಿಚ್ಚಳವಾಗಿದೆ. ನೀವ್ಯಾಕೆ ಬಿಜೆಪಿಯವರು ಬಂದ್ ಕರೆ ಕೊಟ್ಟಾಗೆಲ್ಲಾ ಬಸ್ಸನ್ನು ರಸ್ತೆಗಿಳಿಸದಿರುವುದು ಎಂದು ಕೇಳಿದರೆ “ನಮ್ಮ ಗಾಜಿಗೆ ಕಲ್ಲು ಹೊಡೆದರೆ ನೀವು ಕೊಡುತ್ತೀರಾ…, ಮುಂಭಾಗದ ಗಾಜಿಗೆ ಹದಿನೈದು ಸಾವಿರವಿದೆ. ನಾವು ಒಂದು ದಿನ ಬಸ್ ಓಡಿಸಿ ಒಂದು ಗಾಜು ಒಡೆದರೆ ಅದರ ದುಡ್ಡು ಭರಿಸಲು ಹತ್ತು ದಿನ ಬಸ್ಸು ಓಡಿಸಬೇಕು.‌ಅಂದರೆ ಹತ್ತು ದಿನಗಳ ಲಾಭವನ್ನು ಗಾಜಿಗೆ ಇಡಬೇಕು.ಗಾಜಿಗೆ ಇಂಶ್ಯೂರೆನ್ಸ್ ಇಲ್ಲ” ಈ ರೀತಿಯ ಸಮಜಾಯಿಷಿ ಕೊಡುತ್ತಾರೆ.ಹಾಗಾದ್ರೆ ಬಿಜೆಪಿಯೇತರರು ಬಂದ್ ಗೆ ಕರೆ ಕೊಟ್ಟರೆ ಇವರಿಗ್ಯಾಕೆ ಗಾಜಿನ ಭಯವಿರುವುದಿಲ್ಲ.? ಇವರ ಬಸ್ಸಲ್ಲಿ ಪ್ರಯಾಣಿಸುವವರು ಕೇವಲ ಬಿಜೆಪಿ ಬೆಂಬಲಿಗರು ಮಾತ್ರವೇ..?

ನಾಳೆ ಬೇರೆ ಪಕ್ಷದವರು ಅವರ ಸಭೆಗೆ ಬರುವ ಕಾರ್ಯಕರ್ತರಿಗೆ ಉಚಿತ ಪ್ರಯಾಣದ ವ್ಯವಸ್ಥೆ ಕಲ್ಪಿಸಬೇಕೆಂದರೆ ಇವರು‌ ಕೊಡುತ್ತಾರಾ?

ಇದೇ ಬಸ್ಸು ಮಾಲಕರಲ್ಲಿ ವಿದ್ಯಾರ್ಥಿಗಳಿಗೆ, ಅಂಗವಿಕಲರಿಗೆ, ಹಿರಿಯ ನಾಗರಿಕರಿಗೆ ರಿಯಾಯಿತಿ ಕೊಡಲು ಸರಕಾರ ಕೋರಿದರೆ ಪೈಸೆಗೆ ಪೈಸೆ ಲೆಕ್ಕ ಹಾಕಿ ನಷ್ಟ ತೋರಿಸುತ್ತಾರೆ. ಪಾಸ್ ಹೊಂದಿರುವವರು ಯಾರೂ ಬಸ್ಸಲ್ಲಿ ಉಚಿತವಾಗಿ ಪ್ರಯಾಣಿಸುವುದಲ್ಲ. ಸರಕಾರ ಬಸ್ ಪಾಸ್ ನ ಮೊತ್ತವನ್ನು ನೀಡುತ್ತದೆ. ಬಸ್ಸುಗಳು ಇವರ ಸ್ವಂತದ್ದಿರಬಹುದು. ರಸ್ತೆ ಬಸ್ಸು ಮಾಲಕರ ಪಿತ್ರಾರ್ಜಿತ ಸ್ವತ್ತಲ್ಲ. ಅದರಲ್ಲಿ ಈ ದೇಶದ ಪ್ರತೀಯೋರ್ವ ನಾಗರಿಕನ ಬೆವರಿನ ಹನಿಯಿದೆ. ನೀವು ಲಾಭ ಗಳಿಸುತ್ತೀರಿ. ಅದಕ್ಕಾಗಿ ನಿಮಗೆ ಹೆಚ್ಚು ತೆರಿಗೆಯಿರಬಹುದಷ್ಟೇ. ನಮ್ಮ ತೆರಿಗೆಯ ಪಾಲೂ ರಸ್ತೆಗಳಲ್ಲಿದೆ.

ಬಿ.ಸಿ.ರೋಡಿನಿಂದ ತೊಕ್ಕೊಟ್ಟು ಮಾರ್ಗವಾಗಿ ಮಂಗಳೂರಿಗೆ ಸಂಚರಿಸುವ ಕೆಲವು ಬಸ್ಸುಗಳು ನಮ್ಮ ಗ್ರಾಮೀಣ ಜನತೆಗೆ ಕೊಡುವ ಕಿರುಕುಳ ಅಷ್ಟಿಷ್ಟಲ್ಲ. ಪರ್ಮಿಟ್ ಕಂಕನಾಡಿವರೆಗಾದರೂ ಸ್ಟೇಟ್ ಬ್ಯಾಂಕ್ ಎಂದು ಪ್ರಯಾಣಿಕರನ್ನು ಏರಿಸಿ ಪಂಪ್ ವೆಲ್ ನಲ್ಲಿ ಇಳಿಸಿ ಇನ್ನೊಂದು ಬಸ್ಸಿಗೆ ಕ್ರಾಸಿಂಗ್ ಕೊಡಿಸುತ್ತಾರೆ. ಮಕ್ಕಳನ್ನು ಹಿಡಿದು ಬಸ್ಸು ಹತ್ತಿ ಇಳಿಯುವ ಸಂಕಷ್ಟ ಅನುಭವಿಸಿದವನಿಗೇ ಗೊತ್ತು. ಗ್ರಾಮೀಣ ರೈತಾಪಿಗಳು ತಮ್ಮ ಸರಕನ್ನು ಇಳಿಸಿ ಮತ್ತೆ ಇನ್ನೊಂದು ಬಸ್ಸಿಗೆ ಏರುವ ಕಷ್ಟ ಅನುಭವಿಸಿದವರಿಗೇ ಗೊತ್ತು.
ಇವರು ಒಂದು ಬಸ್ಸಿಗೆ ಕ್ರಾಸಿಂಗ್ ಕೊಟ್ಟು ಇಳಿಸಿ ಆ ಬಸ್ಸಿನಲ್ಲಿ ಹೋಗಿ ಎನ್ನುವುದು. ಆತ ಟೈಮಿಂಗ್ ಸಮಸ್ಯೆ ಎಂದು ಅರ್ಧಂಬರ್ಧ ಪ್ರಯಾಣಿಕನ್ನು ಏರಿಸಿ ಹೋಗುವುದು. ಅವನ ಗಡಿಬಿಡಿಗೆ ವೃದ್ಧರಿಗೆ, ಸರಕುಗಳ ಮೂಟೆ ಹೊತ್ತವರಿಗೆ,ಮಕ್ಕಳನ್ನು ಹೊತ್ತ ತಾಯಂದಿರಿಗೆ ಬಸ್ಸು ಏರವಷ್ಟು ಸಮಯ ಸಿಗುವುದಿಲ್ಲ. ಅವರು‌ ಪುನಃ ಸ್ಟೇಟ್ ಬ್ಯಾಂಕಿಗೆ ಹೋಗಲು‌‌‌‌‌ ಹೊಸದಾಗಿ ಟಿಕೆಟ್ ಮಾಡಬೇಕು.‌ಜನತೆಗಾಗುವ ಈ ನಷ್ಟ ಯಾರು ಭರಿಸುತ್ತಾರೆ..?

ಕೆಲವು ಗ್ರಾಮೀಣ ಪ್ರದೇಶಗಳಿಗೆ ಒಂದೋ ಎರಡೋ ಬಸ್ಸುಗಳಿರುತ್ತವೆ.ಕೆಲವು ಬಸ್ಸು ಮಾಲಕರು ಯಾವುದಾದರೂ ಮದುವೆ ಮತ್ತಿತರ ಕಾರ್ಯಕ್ರಮದ ಬಾಡಿಗೆ ಸಿಕ್ಕರೆ ಏಕಾಏಕಿ ಟ್ರಿಪ್ ರದ್ದು ಮಾಡಿ ಖಾಸಗಿ ಬಾಡಿಗೆ ವಹಿಸಕೊಳ್ಳುವುದಿದೆ.ಆ ಪ್ರದೇಶಗಳಲ್ಲಿ ಅವೇ ಬಸ್ಸುಗಳನ್ನು ನಂಬಿದ ಜನರ ಉದ್ಯೋಗ ಮತ್ತಿತರ ಕೆಲಸಗಳಿಗೆ ತೆರಳಲು ಅವೇ ಬಸ್ಸುಗಳನ್ನು ಅವಲಂಭಿಸುರುವುದರಿಂದ ಇಂತಹ ಸಂದರ್ಭಗಳಲ್ಲಿ ಜನ ಬವಣೆಪಡಬೇಕಾಗುತ್ತದೆ.
ಇಂತಹ ಹತ್ತಾರು ಉಪಟಳಗಳನ್ನು ಕೆಲವು ಖಾಸಗಿ ಬಸ್ಸುಗಳು ನೀಡುತ್ತವೆ.ಬಸ್ಸು ಅವರ ಸ್ವಂತದ್ದೇ ಇರಬಹುದು.‌ಆದರೆ ನಮ್ಮಂತಹ ಜನ ಸಂಚರಿಸದಿದ್ದರೆ ಇವರು ಯಾವ ಸೀಮೆಯ ಬಸ್ಸು ಧಣಿಗಳು ? ಇದೇ ಬಿಜೆಪಿಯ ಕೇಂದ್ರ ಸರಕಾರ ಮನಸೋ ಇಚ್ಚೆ ತೈಲ ಬೆಲೆಯೇರಿಸುವಾಗ ಅದರ ವಿರುದ್ಧ ಎಡಪಕ್ಷಗಳು, ಕಾಂಗ್ರೆಸ್, ಎಸ್ಡಿಪಿಐ,ಜನತಾದಳ, ಪ್ರಗತಿಪರ ಸಂಘಟನೆಗಳು ಪ್ರತಿಭಟಿಸುತ್ತವೆಯೇ ಹೊರತು ಬಿಜೆಪಿ ಸಂಘಪರಿವಾರವಲ್ಲ. ಈ ಸುತ್ತೋಲೆಯನ್ನು ತಕ್ಷಣ ಹಿಂದೆಗೆದು ಪ್ರಕಟಣೆ ಕೊಡದಿದ್ದರೆ ಇತರರ ಪ್ರತಿರೋಧ ಎದುರಿಸಲೇಬೇಕಾಗುತ್ತದೆ. ಸರಕಾರ ಬಸ್ಸು ಮಾಲಕರ ಈ ನೀಚ ರಾಜಕೀಯ ನಡೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ರಾಜ್ಯ ಸರಕಾರ ಖಾಸಗಿ ಬಸ್ಸು ಮಾಲಕರ ರಾಜಕೀಯ ಪಕ್ಷಪಾತೀಯ ನಿಲುವಿಗೆ ಕಡಿವಾಣ ಹಾಕಿ, ಬಂದ್ ಗಳಿಂದಾಗುವ ನಷ್ಟವನ್ನು ತಡೆಯಬೇಕಾದರೆ, ಮತ್ತು ಖಾಸಗಿ ಬಸ್ಸುಗಳಿಂದ ಜನತೆಗೆ ಆಗುವ ತೊಂದರೆಗೆ ಕಡಿವಾಣ ಹಾಕಬೇಕಾದರೆ ಅವಳಿ ಜಿಲ್ಲೆಯ (ದ.ಕ.ಮತ್ತು ಉಡುಪಿ) ಎಲ್ಲೆಡೆಗೂ ಸರಕಾರಿ ಬಸ್ಸುಗಳ ಸೌಲಭ್ಯ ಕಲ್ಪಿಸಬೇಕಾಗಿದೆ.
ಒಳ್ಳೆಯವರ ಕ್ಷಮೆ ಕೋರುತ್ತೇನೆ

 

To Top
error: Content is protected !!
WhatsApp chat Join our WhatsApp group