ರಾಜ್ಯ ಸುದ್ದಿ

ವಿದೇಶಿ ಪ್ರಜೆಗಳೆಂಬ ಶಂಕೆಯಲ್ಲಿ ಮತದಾರರ ಪಟ್ಟಿ ಸೇರ್ಪಡೆಯ ಅರ್ಜಿಗಳ ತಿರಸ್ಕಾರ ಆಘಾತಕಾರಿ: ಪಾಪ್ಯುಲರ್ ಫ್ರಂಟ್

ನಾಗರಿಕರ ಮತದಾನದ ಹಕ್ಕನ್ನು ಖಾತರಿಪಡಿಸಲು ಪಾಪ್ಯುಲರ್ ಫ್ರಂಟ್ ಆಗ್ರಹ

ವರದಿಗಾರ (ನ.22): ರಾಜ್ಯದ 2017-18ರಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆಗಾಗಿ ಸಲ್ಲಿಸಲಾದ 2.8 ಲಕ್ಷ ಅರ್ಜಿಗಳ ಪೈಕಿ ಶೇ.62ರಷ್ಟು ಅರ್ಜಿಗಳು ತಿರಸ್ಕೃತಗೊಂಡಿದ್ದು, ಇದರಲ್ಲಿ ಸುಮಾರು ಶೇ.20ರಷ್ಟು ಅರ್ಜಿಗಳನ್ನು ವಿದೇಶೀ ಪೌರರೆಂದು ಆರೋಪಿಸಿ ಮತ್ತು ಶೇ.24ರಷ್ಟು ಅರ್ಜಿಗಳನ್ನು ಅನಿರ್ದಿಷ್ಟ ಕಾರಣಗಳಿಗಾಗಿ ಕೈಬಿಡಲಾಗಿದೆ ಎಂದು ಅಧ್ಯಯನವೊಂದರಲ್ಲಿ ಬಹಿರಂಗಗೊಂಡಿರುವ ವಿಚಾರವು ತೀರಾ ಆಘಾತಕಾರಿಯಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಮುಹಮ್ಮದ್ ಶಾಕಿಬ್ ಹೇಳಿದ್ದಾರೆ.

ದೊಡ್ಡಮಟ್ಟದಲ್ಲಿ ತಿರಸ್ಕೃತಗೊಂಡಿರುವ ಅರ್ಜಿದಾರರಲ್ಲಿ ಮುಸ್ಲಿಮರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಇದು ಮುಸ್ಲಿಮರನ್ನು ಚುನಾವಣಾ ಪ್ರಕ್ರಿಯೆಯಿಂದ ಹೊರಗಿಡುವ ದುರುದ್ದೇಶಪೂರಿತ ಪ್ರಯತ್ನದಂತೆ ಮೇಲ್ನೊಟಕ್ಕೆ ಕಂಡು ಬರುತ್ತಿದೆ. ಅರ್ಜಿದಾರ ಕುಟುಂಬಗಳಿಗೆ ತಮ್ಮ ಅರ್ಜಿ ತಿರಸ್ಕರಿಸಲ್ಪಟ್ಟ ಕುರಿತಾಗಲೀ, ಯಾವ ಕಾರಣಕ್ಕಾಗಿ ಅರ್ಜಿ ತಿರಸ್ಕರಿಸಲಾಗಿದೆ ಎಂಬ ಮಾಹಿತಿಯಿಲ್ಲ. ಅನರ್ಹತೆಯನ್ನು ಪ್ರಶ್ನಿಸಲು ಅವರಿಗೆ ಅವಕಾಶವನ್ನೇ ನೀಡಲಾಗಿಲ್ಲ. ಆಧಾರ್, ವಿದ್ಯುತ್ ಬಿಲ್, ಶಾಲಾ ಪ್ರಮಾಣ ಪತ್ರಗಳಿದ್ದ ಹೊರತಾಗಿಯೂ ವಿದೇಶೀ ಪ್ರಜೆಗಳೆಂಬ ಶಂಕೆಯಲ್ಲಿ ಅವರನ್ನು ಮತದಾರರ ಪಟ್ಟಿಯಲ್ಲಿ ಅವಕಾಶ ಕಲ್ಪಿಸಲಾಗಿಲ್ಲ ಎಂಬ ಮಾಹಿತಿಯನ್ನೂ ಸಂಶೋಧನೆ ಬಹಿರಂಗಪಡಿಸಿದೆ. ಅಗತ್ಯ ದಾಖಲೆಗಳಿದ್ದು ಕೂಡ ಅವರಿಗೆ ವಿದೇಶೀ ಪ್ರಜೆಗಳೆಂದು ಸುಳ್ಳು ಹಣೆಪಟ್ಟಿ ಕಟ್ಟಿರುವುದು ಮೇಲ್ನೋಟಕ್ಕೆ ಸಾಬೀತಾಗುತ್ತದೆ. ಈ ಹಿಂದೆ ಅಸ್ಸಾಂನಲ್ಲಿಯೂ 40 ಲಕ್ಷ ಮಂದಿ ಬಂಗಾಳಿ ಭಾಷಿಕರನ್ನು ರಾಷ್ಟ್ರೀಯ ಪೌರತ್ವ ನೋಂದಣಿಯ ಅಂತಿಮ ಕರಡಿನಿಂದ ಹೊರಗಿಡಲಾಗಿತ್ತು. ಗಮನಾರ್ಹವೆಂದರೆ, ಕರಡಿನಿಂದ ಹೊರಗಿಡಲಾಗಿದ್ದವರ ಪೈಕಿ ದೊಡ್ಡಪಾಲು ಮುಸ್ಲಿಮರದ್ದಾಗಿತ್ತು. ಈ ಬೆಳವಣಿಗೆಯ ನಂತರ ಕುತ್ಸಿತ ಶಕ್ತಿಗಳು ಅಗತ್ಯ ದಾಖಲೆಗಳನ್ನು ಹೊಂದಿಯೂ ಎನ್‌ಆರ್‌ಸಿಯಲ್ಲಿ ಹೆಸರು ಕೈಬಿಟ್ಟುಹೋಗಿರುವವರನ್ನು ಬಾಂಗ್ಲಾದೇಶಿ ನುಸುಳುಕೋರರು ಎಂದು ವ್ಯಾಪಕ ಅಪಪ್ರಚಾರದಲ್ಲಿ ತೊಡಗಿ ರಾಜಕೀಯ ಲಾಭ ಪಡೆಯಲು ಹವಣಿಸಿದ್ದವು. ಇದೀಗ ರಾಜ್ಯದಲ್ಲೂ, ಅಗತ್ಯ ದಾಖಲೆಗಳನ್ನು ಸಲ್ಲಿಸಿರುವ ಹೊರತಾಗಿಯೂ ವಿದೇಶೀ ಪೌರರೆಂದು ಜರೆದು ನಾಗರಿಕರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಿರುವುದು ಸಂಶಯದ ವಾತಾವರಣವನ್ನು ಸಷ್ಟಿಸಿದೆ ಎಂದು ಮುಹಮ್ಮದ್ ಶಾಬಿದ್ ಪ್ರತಿಕ್ರಿಯಿಸಿದ್ದಾರೆ.

ಆಡಳಿತ ವ್ಯವಸ್ಥೆಯು ಕೂಡಲೇ ಮಧ್ಯ ಪ್ರವೇಶಿಸಿ, 1960 ಮತದಾರರ ನಿಯಮಾವಳಿಗಳ ನೋಂದಣಿಯಡಿ ಒದಗಿಸಲಾದ ವ್ಯಾಪಕ ಪ್ರಕ್ರಿಯೆಗೆ ಅವಕಾಶ ಕಲ್ಪಿಸಿ ನಾಗರಿಕರ ಮತದಾನದ ಹಕ್ಕನ್ನು ಖಾತರಿಪಡಿಸಬೇಕು ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಚುನಾವಣಾ ಆಯೋಗ ಬಲಪಡಿಸಬೇಕು ಎಂದು  ಮುಹಮ್ಮದ್ ಶಾಕಿಬ್ ಪ್ರಕಟಣೆಯಲ್ಲಿ ಸರಕಾರವನ್ನು ಆಗ್ರಹಿಸಿದ್ದಾರೆ.

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group