ರಾಜ್ಯ ಸುದ್ದಿ

ಸಹೋದರತೆ-ಶಾಂತಿಯ ಮತ್ತೊಂದು ಹೆಸರೇ ಇಸ್ಲಾಮ್: ದಿನೇಶ್ ಗುಂಡೂರಾವ್

‘ರಾಜಕೀಯ ಕಾರಣಗಳಿಗಾಗಿ ದೇಶದಲ್ಲಿ ದ್ವೇಷ ಹೆಚ್ಚುತ್ತಿದೆ’

ವರದಿಗಾರ (ನ.22): ಭ್ರಾತೃತ್ವ, ಸಹೋದರತೆ, ಕರುಣೆ ಹಾಗೂ ಶಾಂತಿಯ ಇನ್ನೊಂದು ಹೆಸರೇ ಇಸ್ಲಾಮ್ ಧರ್ಮ. ಪ್ರವಾದಿ ಮುಹಮ್ಮದ್(ಸ) ಬೋಧಿಸಿದ ತತ್ವ, ಸಂದೇಶಗಳು ಮಾನವ ಕುಲಕ್ಕೆ ಮಾರ್ಗದರ್ಶಕ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್ ಹೇಳಿದ್ದಾರೆ.

ಅವರು ಬುಧವಾರ ಬೆಂಗಳೂರಿನ ವೈಎಂಸಿಎ ಮೈದಾನದಲ್ಲಿ ಜುಲೂಸೆ ಮುಹಮ್ಮದೀಯ ಸಂಘಟನೆ ವತಿಯಿಂದ ಆಯೋಜಿಸಲಾಗಿದ್ದ ‘ಮೀಲಾದುನ್ನಬಿ’ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಪ್ರವಾದಿ ಮುಹಮ್ಮದ್(ಸ) ಜನ್ಮದಿನವನ್ನು ವಿಶ್ವದೆಲ್ಲೆಡೆ ಶ್ರದ್ಧೆ, ಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಲಾಗುತ್ತದೆ ಎಂದು ಹೇಳಿದ್ದಾರೆ.

ಬಹು ಧರ್ಮ, ಬಹು ಭಾಷೆ ಹಾಗೂ ಬಹು ಸಂಸ್ಕೃತಿಗಳನ್ನು ಹೊಂದಿರುವ ನಮ್ಮ ದೇಶದಲ್ಲಿ ನೂರಾರು ವರ್ಷಗಳಿಂದ ಸರ್ವ ಧರ್ಮೀಯರು ಪರಸ್ಪರ ಸೌಹಾರ್ದತೆ, ಪ್ರೀತಿ, ವಿಶ್ವಾಸದಿಂದ ಬಾಳುತ್ತಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಸಮಾಜವನ್ನು ಒಡೆಯುವಂತಹ ಶಕ್ತಿಗಳು ಪ್ರಬಲವಾಗಿ ಬೆಳೆಯುತ್ತಿವೆ. ಅವರ ವಿರುದ್ಧ ನಾವೆಲ್ಲ ಸಂಘಟಿತರಾಗಿ ಹೋರಾಡಬೇಕಾದ ಅಗತ್ಯವಿದೆ ಎಂದು ದಿನೇಶ್‌ ಗುಂಡೂರಾವ್ ಹೇಳಿದರು.

ಒಂದು ಧರ್ಮವನ್ನು ಅನುಸರಿಸುವವರು ಮತ್ತೊಂದು ಧರ್ಮದ ಸಂಸ್ಕೃತಿ, ಆಚಾರ, ವಿಚಾರ, ಆಹಾರ ಸಂಸ್ಕೃತಿಯನ್ನು ಗೌರವಿಸಬೇಕು. ಒಂದು ಧರ್ಮದ ಸಂಸ್ಕೃತಿಯನ್ನು ಮತ್ತೊಬ್ಬರ ಮೇಲೆ ಬಲವಂತವಾಗಿ ಹೇರಲು ಪ್ರಯತ್ನಿಸಿದರೆ, ಸಮಾಜದಲ್ಲಿ ಸಂಘರ್ಷ ಉಂಟಾಗುತ್ತದೆ ಎಂದು ಅವರು ತಿಳಿಸಿದರು.

ಯಾವ ಧರ್ಮವೂ ಹಿಂಸೆ, ಅಶಾಂತಿಯನ್ನು ಬೋಧಿಸುವುದಿಲ್ಲ. ಆದರೂ, ವಿಶ್ವದೆಲ್ಲೆಡೆ ರಾಜಕೀಯ ಸೇರಿದಂತೆ ಅನೇಕ ಕಾರಣಗಳಿಗಾಗಿ ದ್ವೇಷ ಹೆಚ್ಚುತ್ತಿದೆ. ಸಮಾಜವನ್ನು ಬೇರ್ಪಡಿಸುವ ಪ್ರಯತ್ನಗಳು ನಡೆಯುತ್ತಿವೆ. ಈ ಬಗ್ಗೆ ನಾವೆಲ್ಲ ಎಚ್ಚರಿಕೆಯಿಂದ ಇರಬೇಕಿದೆ ಎಂದು ದಿನೇಶ್‌ ಗುಂಡೂರಾವ್ ಹೇಳಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ಆರ್.ರೋಷನ್‌ ಬೇಗ್, ಎನ್.ಹಾರೀಸ್, ಜುಲೂಸೆ ಮುಹಮ್ಮದೀಯ ಕಾರ್ಯದರ್ಶಿ ಅಫ್ಸರ್‌ ಬೇಗ್, ಏಜಾಝ್ ಅಹ್ಮದ್ ಖುರೇಷಿ, ಜಾಮೀಯಾ ಬಿಲಾಲ್ ಅಧ್ಯಕ್ಷ ಅಮೀರ್‌ ಜಾನ್‌ ಖಾನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

To Top
error: Content is protected !!
WhatsApp chat Join our WhatsApp group