ನಾಕಾಬಂದಿ

ಸುಳ್ಳು ಮಾಹಿತಿಗಾಗಿ ಮತ್ತೊಮ್ಮೆ ಬೆತ್ತಲಾದ ‘ಪೋಸ್ಟ್ ಕಾರ್ಡ್’! ಮಕ್ಕಾದ ಫೋಟೊವನ್ನು ಅಲಹಾಬಾದಿನ ಕುಂಭಮೇಳದ್ದೆಂದು ಸುಳ್ಳು ಪೋಸ್ಟ್ !

ವರದಿಗಾರ (ನ 19) :  ಸಾಮಾಜಿಕ ತಾಣಗಳಲ್ಲಿ ನಕಲಿ ಸುದ್ದಿಗಳ ರಾಜನೆಂದೇ ಅಪಖ್ಯಾತಿ ಹೊಂದಿರುವ ‘ಪೋಸ್ಟ್ ಕಾರ್ಡ್’ ನ ಕನ್ನಡ ಜಾಲತಾಣದ ಸುಳ್ಳುಗಳ ಕಿರೀಟಕ್ಕೆ ಮತ್ತೊಂದು ಗರಿಯ ಸೇರ್ಪಡೆಯಾಗಿದೆ. ಅದೆಂದರೆ ಉತ್ತರಪ್ರದೇಶದ ಅಲಹಾಬಾದಿನಲ್ಲಿ (ಪ್ರಯಾಗ್ ರಾಜ್) ನಡೆಯಲಿರುವ ಕುಂಭಮೇಳಕ್ಕೋಸ್ಕರ ಅಲಹಾಬಾದ್ ಯಾವ ರೀತಿಯಲ್ಲಿ ಸಜ್ಜುಗೊಂಡಿದೆ ಎಂಬುವುದನ್ನು ತೋರಿಸಲು ಮುಸ್ಲಿಮರ ಪವಿತ್ರ ಮಕ್ಕಾ ನಗರದ ಮಿನಾ ಡೇರೆಗಳ ಚಿತ್ರವನ್ನು ಹಾಕಿ, ಹೌದು ಇದು ಸ್ವರ್ಗವೇ, ಉತ್ತರಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯಲಿರುವ ಕುಂಭಮೇಳಕ್ಕೆ ನಡೆಸಿದ ಸಿದ್ಧತೆ… ಶೃಂಗಾರಗೊಂಡಿರುವ ಪ್ರಯಾಗ್ ರಾಜ್… ಎಂದು ಪೋಸ್ಟ್ ಮಾಡಲಾಗಿತ್ತು. ಆದರೆ ಹಲವಾರು ಹಿಂದೂ ಫೇಸ್ಬುಕ್ ಬಳಕೆದಾರರೇ,  ಇದು ಪ್ರಯಾಗ್ ರಾಜ್ ಅಲ್ಲ, ಇದು ಮುಸ್ಲಿಮರ ಪವಿತ್ರ ಹಜ್ ಕರ್ಮ ನಿರ್ವಹಿಸುವಾಗ ತಂಗುವ ಮಿನಾದ ಡೇರೆಗಳ ರಾತ್ರಿ ವೇಳೆಯ ದೃಶ್ಯಗಳು ಎಂದು ‘ಪೋಸ್ಟ್ ಕಾರ್ಡ್’ನ ನಕಲಿಯ ನಿಜಬಣ್ಣವನ್ನು ಬಯಲಿಗೆಳೆದಿದ್ದಾರೆ. ಮುಖವುಳಿಸುವ ಪ್ರಯತ್ನವಾಗಿ ‘ಪೋಸ್ಟ್ ಕಾರ್ಡ್’ ತನ್ನ ಪೋಸ್ಟನ್ನು ಫೇಸ್ಬುಕ್ಕಿನಿಂದ ಅಳಿಸಿ ಹಾಕಿದೆ.

‘ಪೋಸ್ಟ್ ಕಾರ್ಡ್’ ತನ್ನ ಸುಳ್ಳು ಸುದ್ದಿ, ನಕಲಿ ಚಿತ್ರಗಳ ಪೋಸ್ಟ್ ಹಾಗೂ ಕೋಮು ಪ್ರಚೋದನಕಾರಿ ಸುದ್ದಿಗಳಿಗಾಗಿ ಕುಖ್ಯಾತಿ ಹೊಂದಿರುವ ಸುದ್ದಿ ಜಾಲತಾಣವಾಗಿದ್ದು, ಇಂತಹಾ ಕೋಮುಪ್ರಚೋದನಕಾರಿ ಸುಳ್ಳು ಸುದ್ದಿಗಾಗಿ ಇದರ ಸ್ಥಾಪಕ ಮಹೇಶ್ ವಿಕ್ರಂ ಹೆಗ್ಡೆಯನ್ನು ಕಳೆದ ವರ್ಷ ಜೈಲಿಗಟ್ಟಲಾಗಿತ್ತು.

ಈ ಸುಳ್ಳು ಮಾಹಿತಿಯ ಪೋಸ್ಟನ್ನು ‘ಪೋಸ್ಟ್ ಕಾರ್ಡ್’ ಮಾತ್ರವಲ್ಲದೆ ಇತರೆ ಹಲವಾರು ಮಂದಿ ಫೇಸ್ಬುಕ್ ನಲ್ಲಿ ಶೇರ್ ಮಾಡಿದ್ದು, ತಮ್ಮದೇ ರೀತಿಯಲ್ಲಿ ಒಕ್ಕಣೆಗಳನ್ನು ಬರೆಯಲಾಗಿದೆ. ಆದರೆ ಇನ್ನು ಕೆಲವರು ಈ ಚಿತ್ರ ಎಲ್ಲಿಯದ್ದು ಎಂಬ ನಿಜವಾದ ಮಾಹಿತಿಯುಳ್ಳ ಪೋಸ್ಟ್ ಗಳನ್ನು ಕೂಡಾ ಹಾಕಿದ್ದಾರೆ. ಒಟ್ಟಿನಲ್ಲಿ ಸುಳ್ಳು ಸುದ್ದಿಗಳಿಗೆ ಸೀಮಿತವಾಗಿರುವ ‘ಪೋಸ್ಟ್ ಕಾರ್ಡ್’ ಮತ್ತೊಮ್ಮೆ ತನ್ನ ಅಪಖ್ಯಾತಿಗೋಸ್ಕರನೇ ಸುದ್ದಿಯಲ್ಲಿರುವುದು ವಿಪರ್ಯಾಸ.

To Top
error: Content is protected !!
WhatsApp chat Join our WhatsApp group