ಸಾಮಾಜಿಕ ತಾಣ

ಕೊಡಗಿಗೆ ರೈಲು ತರದೇ ಹೋದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದಿದ್ದ ಸಂಸದ ಪ್ರತಾಪ್ ಸಿಂಹರ ಮುಂದಿನ ನಡೆಯೇನು?

ಇನ್ನೂ ಹಳಿಯನ್ನು ಕಾಣದ ಪ್ರತಾಪ ಸಿಂಹರ ‘ಕೊಡಗು ರೈಲು’

ವರದಿಗಾರ (ನ.13): ‘ಕೊಡಗಿಗೆ ಮುಂದಿನ ಐದು ವರ್ಷಗಳೊಳಗಾಗಿ ರೈಲು ತರದೇ ಇದ್ದಲ್ಲಿ ನಾನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ’ ಎಂದು ಕೊಡಗು-ಮೈಸೂರು ಸಂಸದ 2014 ರಲ್ಲಿ ಸಂಸದನಾಗಿ ಆಯ್ಕೆಯಾದ ಸಂದರ್ಭ ಟಿವಿ ಚಾನೆಲ್ ಒಂದರ ಸಂದರ್ಶನದಲ್ಲಿ ಜಂಭ ಕೊಚ್ಚಿ ಕೊಂಡಿದ್ದರು. ಇನ್ನೇನು ಐದಾರು ತಿಂಗಳುಗಳಲ್ಲಿ ಲೋಕಸಭೆಯ ಅವಧಿ ಮುಗಿಯಲಿದ್ದು, ಸಂಸದ ಪ್ರತಾಪ್ ಸಿಂಹರ ‘ಕೊಡಗು ರೈಲು’ ಇನ್ನೂ ಹಳಿಗೆ ಬಂದಿಲ್ಲ. ಜನರೀಗ ಪ್ರತಾಪ್ ಸಿಂಹರ ಮಾತುಗಳನ್ನು ಅವರಿಗೇ ನೆನಪಿಸುತ್ತಿದ್ದಾರೆ. 2014ರ ಟಿವಿ ಸಂದರ್ಶನದ ತುಣುಕೊಂದು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದ್ದು, ಪ್ರತಾಪ್ ಸಿಂಹರ ರೈಲು ಬರುವ ಸಾಧ್ಯತೆ ಇಲ್ಲ, ಹೀಗಿರುವಾಗ ಲೋಕಸಭೆಗೆ ಪರ್ಯಾಯ ಅಭ್ಯರ್ಥಿಗೆ ಅವಕಾಶ ಮಾಡಿಕೊಡಿ ಎಂದು ಸಂಸದರನ್ನೇ ಒತ್ತಾಯಿಸುತ್ತಿದ್ದಾರೆ.

ಸಂದರ್ಶನದಲ್ಲಿ ಪ್ರತಾಪ್ ಸಿಂಹ ಹೇಳಿದ್ದೇನು ?

‘ಸಮಯ’ ಟಿವಿ ಪತ್ರಕರ್ತರಾಗಿದ್ದ ರಂಗನಾಥ್ ಭಾರಧ್ವಾಜ್ , ಪ್ರತಾಪ್ ಸಿಂಹರಲ್ಲಿ ‘ ಸದಾನಂದ ಗೌಡರು ಇನ್ನೂ ರೈಲ್ವೇ ಮಂತ್ರಿಯಾಗಿಲ್ಲ. ಆದರೂ ನೀವು ಕೊಡಗಿಗೆ ರೈಲು ತರುವ ಮಾತನ್ನು ಆಡುತ್ತಿದ್ದೀರಿ’ ಎಂದು ಪ್ರಶ್ನಿಸಿದಾಗ ಪ್ರತಾಪ್ ಸಿಂಹ, ‘ ನನಗಿನ್ನೂ 5 ವರ್ಷ ಕಾಲಾವಕಾಶವಿದೆ. ನಾನು ಕೊಡಗಿಗೆ ರೈಲು ತರದಿದ್ದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ’ ಎಂದು ಅತಿ ಆತ್ಮವಿಶ್ವಾಸದಿಂದ ಉತ್ತರಿಸುವುದು ವೀಡಿಯೋದಲ್ಲಿದೆ.

ವೀಡಿಯೋ ವೀಕ್ಷಿಸಿ: 

ಹೇಳಿ ಕೇಳಿ ಇದು ಸ್ಮಾರ್ಟ್ ಯುಗ. ತಂತ್ರಜ್ಞಾನ ಮುಂದುವರೆದಿರುವ ಈ ಕಾಲದಲ್ಲಿ ರಾಜಕಾರಣಿಗಳು ಬಹಳ ಎಚ್ಚರಿಕೆಯಿಂದ ಆಶ್ವಾಸನೆಗಳನ್ನು ಕೊಡಬೇಕಾಗುತ್ತದೆ. ಸ್ವಲ್ಪ ಎಡವಟ್ಟಾದರೂ ಮುಂದೆ ಅದಕ್ಕೆ ದುಬಾರಿ ಬೆಲೆ ತೆರಬೇಕಾಗುತ್ತದೆ ಎಂಬುವುದಕ್ಕೆ ಪ್ರತಾಪ್ ಸಿಂಹರ ಸಂದರ್ಶನವೇ ಸಾಕ್ಷಿ. ಕ್ಷೇತ್ರದ ಜನರೀಗ ಪ್ರತಾಪ್ ಸಿಂಹರಲ್ಲಿ, ಬೇರೆ ಅಭ್ಯರ್ಥಿಗೆ ಅವಕಾಶ ಮಾಡಿಕೊಟ್ಟು ತಾವು ಕೊಟ್ಟ ಮಾತನ್ನು ಉಳಿಸುವಂತೆ ಒತ್ತಾಯಿಸುತ್ತಿದ್ದಾರೆ.

ಕ್ಷೇತ್ರದಲ್ಲಿ ಅಭಿವೃದ್ಧಿಯ ಕಡೆಗೆ ನಿರ್ಲಕ್ಷ್ಯ, ಕೊಡಗಿನಲ್ಲಿರುವ ಪಕ್ಷದ ಹಿರಿಯ ನಾಯಕರೊಂದಿಗಿನ ಭಿನ್ನಮತ ಹಾಗೂ ಪಕ್ಷದ ಮುಂಚೂಣಿಯ ಕಾರ್ಯಕರ್ತರನ್ನು ಅವಗಣಿಸಿದ ಆರೋಪ ಇವೆಲ್ಲವೂ ಪ್ರತಾಪ್ ಸಿಂಹರನ್ನು ಚುನಾವಣಾ ಕಣದಿಂದ ದೂರ ಸರಿಸುವ ಪ್ರಯತ್ನವೊಂದರ ಭಾಗವಾಗಿ ಈ ಹಳೆಯ ವೀಡಿಯೋವನ್ನು ಪಕ್ಷದ ಕೆಲ ಕಾರ್ಯಕರ್ತರೇ ಮತ್ತೆ ಕೆದಕಿದ್ದಾರೆ ಎಂಬ ಆರೋಪವೂ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ. ಪ್ರತಾಪ್ ಸಿಂಹ ತನ್ನ ಅಭಿವೃದ್ಧಿ ಕೆಲಸಗಳಿಂದ ಸುದ್ದಿಯಾಗಿದ್ದಕ್ಕಿಂತಲೂ ಹೆಚ್ಚು ವಿವಾದಗಳ ಮೂಲಕವೇ ಸುದ್ದಿಯಾಗಿದ್ದರು. ಇದೀಗ ಪ್ರತಾಪ್ ಸಿಂಹ 2014 ರಲ್ಲಿ ಕೊಟ್ಟ ತನ್ನ ಮಾತನ್ನು ಉಳಿಸಿಕೊಳ್ಳುತ್ತಾರೆಯೇ, ಹೌದೆಂದಾದರೆ ಅದು ಕೊಡಗಿಗೆ ರೈಲು ತರುವುದರ ಮೂಲಕವೇ ಅಥವಾ ಚುನಾವಣಾ ನಿವೃತ್ತಿಯ ಮೂಲಕವೇ ಎಂಬ ಜಿಜ್ಞಾಸೆ ಕ್ಷೇತ್ರದ ಜನರಲ್ಲಿ ಮೂಡಿದೆ.

ಟ್ವಿಟ್ಟರ್ ಚರ್ಚೆ

To Top
error: Content is protected !!
WhatsApp chat Join our WhatsApp group