ಸಾಮಾಜಿಕ ತಾಣ

ಸಿಯೋಲ್ ನದಿ ಪ್ರದೇಶದ ಫೋಟೋಗಳನ್ನು ಗುಜರಾತಿನದ್ದೆಂದು ಟ್ವೀಟ್ ಮಾಡಿ ಮುಖಭಂಗಕ್ಕೀಡಾದ ಅಹ್ಮದಾಬಾದ್ ಮೇಯರ್ !

► ಮತ್ತೊಮ್ಮೆ ಬಹಿರಂಗಗೊಂಡ ನಕಲಿ ಅಭಿವೃದ್ಧಿ ಮಂತ್ರದ ಅಸಲಿಯತ್ತು !

ವರದಿಗಾರ (ನ 11) : ಚಿತ್ರಗಳನ್ನು ಹಾಗೂ ವೀಡೀಯೋಗಳನ್ನು ತಮ್ಮ ರಾಜಕೀಯ ಲಾಭಕ್ಕೆ ಬೇಕಾಗುವ ಹಾಗೆ ತಿರುಚುವ ಕಲೆ ಬಿಜೆಪಿಗರಿಗೆ ಹೊಸತೇನಲ್ಲ. ಅದೇ ರೀತಿ ಯಾವುದೋ ದೇಶದ ಬಸ್ ನಿಲ್ದಾಣ ಗುಜರಾತಿನದ್ದೆಂದೋ, ಮೋದಿಯ ಕೊಡುಗೆಯೆಂದೋ ಹೀಗೆ ಹಲವಾರು ರೀತಿಗಳಲ್ಲಿ ಸುಳ್ಳುಗಳ ಮೂಲಕ, ತಿರುಚುವಿಕೆಯ ಮೂಲಕ ಜನರನ್ನು ವಂಚಿಸುವ ಪ್ರಕ್ರಿಯೆ ನಿರಂತರವಾಗಿ ಸಾಮಾಜಿಕ ಜಾಲ ತಾಣಗಳಲ್ಲಿ ಕಂಡು ಬರುತ್ತಿದೆ. ಇದರಲ್ಲಿ ಬಿಜೆಪಿಯ ಅಗ್ರಶ್ರೇಣಿಯ ನೇತಾರರೇ ಮುಂಚೂಣಿಯಲ್ಲಿರುತ್ತಾರೆ ಎನ್ನುವುದು ಆತಂಕಕಾರಿ ವಿಚಾರವಾಗಿದೆ. ಅದಕ್ಕೆ ತೀರಾ ಇತ್ತೀಚೆಗಿನ ಸೇರ್ಪಡೆಯೇ ಅಹ್ಮದಾಬಾದ್ ಮೇಯರ್ ಬಿಜಾಲ್ ಪಟೇಲರ ಟ್ವೀಟ್. ದಕ್ಷಿಣ ಕೊರಿಯಾದ ಸಿಯೋಲ್ ನಗರದ ನದಿ ತೀರದ ಪ್ರದೇಶದ ರಾತ್ರಿ ವೇಳೆಯ ಚಿತ್ರವೊಂದನ್ನು ಟ್ವೀಟ್ ಮಾಡಿದ್ದ ಬಿಜಾಲ್ ಪಟೇಲ್, ‘ಇದು ಸಿಂಗಾಪುರವೋ, ಮಲೇಷ್ಯಾವೋ ಅಥವಾ ದುಬಾಯಿಯೋ ಅಲ್ಲ, ಇದು ನಮ್ಮ ಅಹ್ಮದಾಬಾದ್ ನಗರದ ರಾತ್ರಿ ವೇಳೆಯ ದೃಶ್ಯ ಎಂದು ಒಕ್ಕಣೆ ಬರೆದಿದ್ದರು.

ಮೇಯರ್ ರವರ ಟ್ವೀಟನ್ನು ಮೊದಲಿಗೆ ರಿಟ್ವೀಟ್ ಮಾಡಿರುವ ಮನೀಷ್ ತಿಲ್ವಾನಿ ಎನ್ನುವ ವ್ಯಕ್ತಿ ಟ್ವಿಟ್ಟರಿನಲ್ಲಿ ತನನ್ನು ITSM ಸಬರ್ಮತಿ ಎಂದು ಗುರುತಿಸಿಕೊಂಡಿದ್ದು, ಕೇಂದ್ರ ಸಚಿವ ಪಿಯೂಶ್ ಗೋಯಲ್ ಸೇರಿದಂತೆ ಹಲವಾರು ಬಿಜೆಪಿಯ ರಾಷ್ಟ್ರೀಯ ನಾಯಕರು ಈತನನ್ನು ಟ್ವಿಟ್ಟರಿನಲ್ಲಿ ಫಾಲೋ ಮಾಡುತ್ತಿದ್ದಾರೆ. 

ಈ ಚಿತ್ರದ ಕುರಿತು ಗೂಗಲ್ ಶೋಧ ನಡೆಸಿದ ‘ಆಲ್ಟ್ ನ್ಯೂಸ್’, ಅದರ ಸತ್ಯಾಸತ್ಯತೆಯನ್ನು ಬಯಲಿಗೆಳೆದು ಅಹ್ಮದಾಬಾದ್ ಮೇಯರ್ ರ ಸುಳ್ಳು ಪೋಸ್ಟನ್ನು ಬಹಿರಂಗಪಡಿಸಿದ್ದಾರೆ. ಪ್ರವಾಸದ ಕುರಿತು ಮಾಹಿತಿ ನೀಡುವ ವೆಬ್ ಸೈಟ್ ಆದಂತಹಾ ಟ್ರಿಪ್ ಅಡ್ವೈಸರ್ ನಲ್ಲಿ ಇದೇ ಚಿತ್ರ ಕಂಡುಬಂದಿದ್ದು, “ಇದು ದಕ್ಷಿಣ ಕೊರಿಯಾದ ಸಿಯೋಲ್ ನಗರದ ಹಾನ್ ನದಿ ತೀರದಲ್ಲಿರುವ ‘ವಾಕಿಂಗ್ ಆನ್ ದಿ ಕ್ಲೌಡ್ಸ್’  ಎಂಬ ಹೋಟೆಲಿನಿಂದ ಸೆರೆ ಹಿಡಿದ ಚಿತ್ರ” ಎಂದು ಬರೆಯಲಾಗಿದೆ.

 

ಇದನ್ನು ದೃಢೀಕರಿಸಲು ‘ಆಲ್ಟ್ ನ್ಯೂಸ್’ ತಂಡ ಆ ಹೋಟೆಲಿನ ವಿವರಗಳನ್ನು ಗೂಗಲ್ ಮ್ಯಾಪ್ ಮುಖಾಂತರ ಪರಿಶೀಲಿಸಲಾಗಿ, ಅದೇ ಸ್ಥಳದ ಹಗಲು ವೇಳೆಯ ಚಿತ್ರವೊಂದನ್ನು ಕೂಡಾ ನೇರವಾಗಿ ಪಡೆದುಕೊಂಡಿತು. ಇದು ಮಾಹಿತಿಗಳ ಖಣಜ ‘ವಿಕಿಪೀಡಿಯಾ’ ದಲ್ಲೂ ಲಭ್ಯವಿದೆ ಎನ್ನಲಾಗಿದೆ.

ಒಟ್ಟಿನಲ್ಲಿ ಅಹ್ಮದಾಬಾದ್ ನಗರಪಾಲಿಕೆಗೆ ಮುಜುಗರವಾಗುವಂತಹಾ ಕೆಲಸವನ್ನು ಮೇಯರ್ ಬಿಜಾಲ್ ಪಟೇಲ್ ಟ್ವೀಟ್ ಮಾಡಿದ್ದರು. ಸ್ವತಃ ನಗರದ ಮೇಯರ್ ಆಗಿರುವಂತಹಾ ವ್ಯಕ್ತಿಯೊಬ್ಬರು ಚಿತ್ರದ ಹಿಂದು ಮುಂದು ನೋಡದೆ ಅದನ್ನು ನಮ್ಮದೇ ನಗರದ್ದು ಎಂದು ಟ್ವೀಟ್ ಮಾಡಿ ಒಕ್ಕಣೆ ಹಾಕಿದ್ದು ಅರಿವಿಲ್ಲದೆ ಎಂದು ಜನರು ಭಾವಿಸುವುದು ಕಷ್ಟ ಸಾಧ್ಯ. ಏಕೆಂದರೆ ಟ್ವೀಟ್ ಮಾಡಿರುವ ವ್ಯಕ್ತಿ ಸಾಮಾನ್ಯ ನಾಗರಿಕನಲ್ಲ, ಬದಲು ತಮ್ಮ ನಗರದ ಒಳ ಹೊರಗನ್ನು ಅರಿತಿರಬೇಕಾದಂತಹಾ ಪ್ರಥಮ ಪ್ರಜೆಯಾಗಿದ್ದಾರೆ. ಕಳೆದ ಅಕ್ಟೋಬರ್ ನಲ್ಲಿ ಚತ್ತೀಸ್ಗಢ ರಾಜ್ಯ ಬಿಜೆಪಿಯು, ಕೆನಡಾದ ರಸ್ತೆಗಳ ಚಿತ್ರವನ್ನು ಬಳಸಿಕೊಂಡು ಇದು ತಮ್ಮ ರಾಜ್ಯದಲ್ಲಿ ಅಭಿವೃದ್ಧಿಗೊಂಡ ರಸ್ತೆಗಳು ಎಂದು ಬಿಂಬಿಸಲಾಗಿತ್ತು. ಛತ್ತೀಸ್ಗಢದಲ್ಲಿ ಶೀಘ್ರವೇ ವಿಧಾನಸಭಾ ಚುನಾವಣೆ ನಡೆಯಲಿಕ್ಕಿರುವುದು ಗಮನಾರ್ಹವಾಗಿದೆ.

To Top
error: Content is protected !!
WhatsApp chat Join our WhatsApp group