ರಾಜ್ಯ ಸುದ್ದಿ

ಟಿಪ್ಪು ಸುಲ್ತಾನ್ ತತ್ವಾದರ್ಶಗಳು ಎಂದೆಂದಿಗೂ ಆದರ್ಶ: ಸಚಿವೆ ಜಯಮಾಲಾ

ಕೋಮು ಸೌಹಾರ್ದತೆ, ಪರಧರ್ಮ ಸಹಿಷ್ಣುತೆ, ತನ್ನ ಜನೋಪಕಾರಿ ಕಾರ್ಯಕ್ರಮಗಳಿಂದ ಟಿಪ್ಪು ಸುಲ್ತಾನ್ ಜಗತ್ತಿಗೆ ಮಾದರಿ

ಟಿಪ್ಪು ಆಡಳಿತದಲ್ಲಿ ಮಹಿಳೆಯರು ನಿರ್ಭೀತಿಯಿಂದ ಬದುಕುವಂತಹ ವಾತಾವರಣ ನಿರ್ಮಾಣ ಮಾಡಿದ್ದರು: ಡಾ.ಕೆ.ಸದಾಶಿವ

ವರದಿಗಾರ (ನ.10): ತನ್ನ ಜನೋಪಕಾರಿ ಕಾರ್ಯಕ್ರಮಗಳಿಂದ ಜಗತ್ತಿಗೆ ಮಾದರಿಯಾದ ವೀರ ಯೋಧ ಟಿಪ್ಪು ಸುಲ್ತಾನ್ ತತ್ವಾದರ್ಶಗಳು ಎಂದೆಂದಿಗೂ ಆದರ್ಶವೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಜಯಮಾಲಾ ಹೇಳಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಆಯೋಜಿಸಿದ್ದ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ದೇಶದಲ್ಲಿ ಧರ್ಮದ ಹೆಸರಿನಲ್ಲಿ ಮನಸ್ತಾಪಗಳು ಉಂಟಾಗುತ್ತಿರುವ ಇಂದಿನ ಸಂದರ್ಭದಲ್ಲಿ ಕೋಮು ಸೌಹಾರ್ದತೆ, ಪರಧರ್ಮ ಸಹಿಷ್ಣುತೆ, ತನ್ನ ಜನೋಪಕಾರಿ ಕಾರ್ಯಕ್ರಮಗಳಿಂದ ಜಗತ್ತಿಗೆ ಮಾದರಿಯಾಗಿದ್ದರು. ವೀರ ಯೋಧ ಟಿಪ್ಪು ಸುಲ್ತಾನ್ ತತ್ವಾದರ್ಶಗಳು ಎಂದೆಂದಿಗೂ ಆದರ್ಶವೆಂದು ಅವರು ಹೇಳಿದ್ದಾರೆ.

ಮೈಸೂರು ವಿಶ್ವವಿದ್ಯಾಲಯದ ಇತಿಹಾಸ ಪ್ರಾಧ್ಯಾಪಕ ಡಾ.ಕೆ.ಸದಾಶಿವ ಮಾತನಾಡಿ, ರಾಜರ ಆಳ್ವಿಕೆಯೊಂದರಲ್ಲಿ ಶೋಷಿತರು ಒಳಗೊಂಡಂತೆ ಜನ ಸಾಮಾನ್ಯರಿಗೆ ಭೂಮಿಯನ್ನು ಹಂಚಿ, ಕೆರೆ, ಕುಂಟೆಗಳನ್ನು ಕಟ್ಟಿ ಕೃಷಿಯಲ್ಲಿ ತೊಡಗಿಸುವ ಮೂಲಕ ಮೈಸೂರು ರಾಜ್ಯವನ್ನು ಕಲ್ಯಾಣ ರಾಜ್ಯವನ್ನಾಗಿ ಕಟ್ಟಿದವರು ವೀರ ಯೋಧ ಟಿಪ್ಪು ಸುಲ್ತಾನ್ ಎಂದಿದ್ದಾರೆ.

ಟಿಪ್ಪು ಸುಲ್ತಾನ್ ತನ್ನ ಸೈನ್ಯದಲ್ಲಿ ಹಿಂದುಳಿದವರು, ದಲಿತರು ಸೇರಿದಂತೆ ಜಾತಿ, ಮತ, ಭೇದವಿಲ್ಲದೆ ಅರ್ಹತೆಯಿರುವ ಪ್ರತಿಯೊಬ್ಬರಿಗೂ ಅವಕಾಶ ಮಾಡಿಕೊಟ್ಟಿದ್ದರು. ಸೈನಿಕರಿಗೆ ತಿಂಗಳಿಗೆ ನಿರ್ದಿಷ್ಟ ಸಂಬಳ ನಿಗದಿಪಡಿಸಿ, ಸೈನಿಕರ ಕುಟುಂಬಗಳಿಗೆ ಆರ್ಥಿಕವಾಗಿ ನೆರವಾಗಿದ್ದರು. ಟಿಪ್ಪು ಆಡಳಿತದಲ್ಲಿ ಮಹಿಳೆಯರು ನಿರ್ಭೀತಿಯಿಂದ ಬದುಕುವಂತಹ ವಾತಾವರಣ ನಿರ್ಮಾಣ ಮಾಡಿದ್ದರು ಎಂದು ಅವರು ಸ್ಮರಿಸಿದರು.

ಶಾಸಕ ಆರ್.ರೋಷನ್ ಬೇಗ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಶಾಂತಿನಗರ ಶಾಸಕ ಎನ್.ಎ.ಹಾರೀಸ್, ವಿಧಾನಪರಿಷತ್ ಸದಸ್ಯ ರಿಝ್ವನ್ ಅರ್ಷದ್, ಕರ್ನಾಟಕ ಉರ್ದು ಅಕಾಡೆಮಿಯ ಅಧ್ಯಕ್ಷ ಮುಬೀನ್ ಮುನಾವರ್, ಆಮೀರ್-ಎ-ಷರಿಯತ್‌ನ ಹಝ್ರತ್ ಮೌಲಾನ ಸಗೀರ್‌, ಅಹ್ಮದ್‌ ಖಾನ್ ಸಾಹೇಬ್ ರಷಾದಿ ಹಾಗೂ ಇನ್ನಿತರ ನಾಯಕರು ಉಪಸ್ಥಿತರಿದ್ದರು. ಪತ್ರಕರ್ತೆ ನಾಝಿಯಾ ಕೌಸರ್ ಕಾರ್ಯಕ್ರಮ ನಿರೂಪಿಸಿದರು.

To Top
error: Content is protected !!
WhatsApp chat Join our WhatsApp group