ರಾಷ್ಟ್ರೀಯ ಸುದ್ದಿ

ಶಬರಿಮಲೆಯಲ್ಲಿ ಸಂಪ್ರದಾಯ ಮುರಿದ RSS; ಇಡುಮುಡಿ ಇಲ್ಲದೆ 18 ಮೆಟ್ಟಿಲು ತುಳಿದು ‘ಅಪಚಾರ’

ಸುದ್ದಿ ಕೃಪೆ : samachara.com

ವರದಿಗಾರ (ನ 6) :  ಇಡುಮುಡಿ ಇಲ್ಲದೆ 18 ಪವಿತ್ರ ಮೆಟ್ಟಿಲುಗಳ ತುಳಿಯಬಾರದೆಂಬ ಸಂಪ್ರದಾಯವನ್ನು ಆರೆಸ್ಸೆಸ್ ಮುರಿದು ಹಾಕಿದೆ. ಈ ಮೂಲಕ ಸಂಪ್ರದಾಯ ಪಾಲಿಸಬೇಕೆಂದು ಹೇಳುವ ನೈತಿಕತೆಯನ್ನೇ ಕಳೆದುಕೊಂಡಿದೆ.

ಎಲ್ಲಾ ವಯೋಮಾನದ ಮಹಿಳೆಯರು ಶಬರಿಮಲೆ ಪ್ರವೇಶಿಸಿದರೆ ಸಂಪ್ರದಾಯ ಉಲ್ಲಂಘನೆಯಾಗುತ್ತದೆ ಎಂಬ ಮೊಂಡುವಾದವನ್ನೇ ಮುಂದಿಟ್ಟುಕೊಂಡು ಕೇರಳದಲ್ಲಿ ಗದ್ದಲ ಎಬ್ಬಿಸಿದ್ದ ಆರೆಸ್ಸೆಸ್ ಈಗ ತಾನೇ ಸಂಪ್ರದಾಯ ಮುರಿದ ಆರೋಪ ಕೇಳಿಬಂದಿದೆ. ಮಹಿಳೆಯರಿಗೆ ಶಬರಿಮಲೆಗೆ ಪ್ರವೇಶ ನಿಷೇಧಿಸಬೇಕು ಎಂದು ನಡೆದ ಪ್ರತಿಭಟನೆ ವೇಳೆ ಅಯ್ಯಪ್ಪ ದೇಗುಲದ ಮುಂಭಾಗದ 18 ಪವಿತ್ರ ಮೆಟ್ಟಿಲುಗಳನ್ನು ಪ್ರತಿಭಟನಾಕಾರರು ಇಡುಮುಡಿ ಇಲ್ಲದೆ ಏರಿದ್ದಾರೆ ಎಂದು ಆರೋಪಿಸಲಾಗಿದೆ. ಆರೆಸ್ಸೆಸ್ ಮುಖಂಡ ವಲ್ಸನ್ ಥಿಲ್ಲನ್ಕೆರಿ ಮತ್ತು ಆತನೊಂದಿಗೆ ಇನ್ನಿತರ ಪ್ರತಿಭಟನಾಕಾರರು ಇಡುಮುಡಿ ಇಲ್ಲದೆ 18 ಮೆಟ್ಟಿಲುಗಳನ್ನು ಏರಿರುವ ಫೋಟೊ ಮತ್ತು ವೀಡಿಯೊ  ವೈರಲ್ ಆಗಿದೆ.

ಇಡುಮುಡಿಯನ್ನು ತಲೆಯ ಮೇಲೆ ಹೊತ್ತಿರುವ ಭಕ್ತರು ಮಾತ್ರ ಈ ಮೆಟ್ಟಿಲುಗಳನ್ನು ಏರಬೇಕು ಎಂಬ ಸಂಪ್ರದಾಯ ಶಬರಿಮಲೆಯಲ್ಲಿದೆ. ಅಯ್ಯಪ್ಪ ದೇಗುಲದ ಅರ್ಚಕರು ಹಾಗೂ ಇಲ್ಲಿ ಭಕ್ತರನ್ನು ನಿಯಂತ್ರಿಸುವ ಭದ್ರತಾ ಸಿಬ್ಬಂದಿಗೆ ಮಾತ್ರ ಈ ನಿಯಮದಿಂದ ವಿನಾಯಿತಿ ಇದೆ. ಆದರೆ, ಪ್ರತಿಭಟನೆ ನಡೆಸುತ್ತಿದ್ದ ಆರೆಸ್ಸೆಸ್ ಮುಖಂಡ ಹಾಗೂ ಕಾರ್ಯಕರ್ತರು ಇಡುಮುಡಿ ತಲೆಯ ಮೇಲಿಲ್ಲದೆ 18 ಪವಿತ್ರ ಮೆಟ್ಟಿಗಳನ್ನು ತುಳಿದು ನಿಂತಿದ್ದಾರೆ.

52 ವರ್ಷದ ಲಲಿತಾ ಎಂಬುವರು ತಮ್ಮ ಮಗನೊಂದಿಗೆ ಮಂಗಳವಾರ ಶಬರಿಮಲೆಗೆ ಬಂದಿದ್ದರು. ಆದರೆ, ಅವರ ಪ್ರವೇಶಕ್ಕೂ ನಿರಾಕರಿಸಿದ್ದ ಹಿಂದುತ್ವ ಗೂಂಡಾಗಳು ಅವರನ್ನು ಸುತ್ತುವರಿದು ಗದ್ದಲ ಶುರು ಮಾಡಿದ್ದರು. ಇದೇ ಸಂದರ್ಭದಲ್ಲಿ ದೇಗುಲದ ಆವರಣದಲ್ಲಿ ಪ್ರತಿಭಟನೆ ಶುರು ಮಾಡಿದ ಆರೆಸ್ಸೆಸ್ ಕಾರ್ಯಕರ್ತರು 18 ಪವಿತ್ರ ಮೆಟ್ಟಿಲುಗಳನ್ನು ಏರಿ ಸರಕಾರ ಹಾಗೂ ಸುಪ್ರೀಂಕೋರ್ಟ್ ವಿರುದ್ಧ ಘೋಷಣೆ ಕೂಗಿದ್ದಾರೆ. ಪೊಲೀಸರು ಮಧ್ಯಪ್ರವೇಶಿಸಿ ಲಲಿತಾ ಅವರಿಗೆ 52 ವರ್ಷ ವಯಸ್ಸಾಗಿದೆ ಎಂಬುದನ್ನು ಮನವರಿಕೆ ಮಾಡಿಕೊಟ್ಟ ಮೇಲೆ ಈ ಗದ್ದಲ ಕಡಿಮೆಯಾಗಿತ್ತು.

ಆದರೆ, ಆ ಹೊತ್ತಿಗೆ ಆರೆಸ್ಸೆಸ್ ಮುಖಂಡರು, ಕಾರ್ಯಕರ್ತರು ಶಬರಿಮಲೆಯ ಸಂಪ್ರದಾಯವನ್ನು ತುಳಿದು ಹಾಕಿದ್ದರು. ಈ ಮೂಲಕ ಇಡುಮುಡಿ ಇಲ್ಲದೆ 18 ಪವಿತ್ರ ಮೆಟ್ಟಿಲುಗಳ ತುಳಿಯಬಾರದೆಂಬ ಸಂಪ್ರದಾಯವನ್ನು ಆರೆಸ್ಸೆಸ್ ಮುರಿದು ಹಾಕಿದೆ. ಈ ಮೂಲಕ ಸಂಪ್ರದಾಯ ಪಾಲಿಸಬೇಕೆಂದು ಹೇಳುವ ನೈತಿಕತೆಯನ್ನೇ ಆರೆಸ್ಸೆಸ್ ಕಳೆದುಕೊಂಡಿದೆ.

To Top
error: Content is protected !!
WhatsApp chat Join our WhatsApp group