ನಿಮ್ಮ ಬರಹ

ದನದ ಹಾಲು ಮೇಲೋ….ಮೂತ್ರ ಮೇಲೋ…?

-ಇಸ್ಮತ್ ಪಜೀರ್ ‌

ವರದಿಗಾರ(ನ.03): ಜಗತ್ತಿನ ಹೆಚ್ಚಿನೆಲ್ಲಾ ವೈದ್ಯ ಗ್ರಂಥಗಳಲ್ಲಿ ದನದ ಹಾಲು ‌ಶ್ರೇಷ್ಟ ಪಾನೀಯವೆಂದು ಪ್ರತಿಪಾದಿಸಲಾಗಿದೆ. ಯಾವೊಂದು ಗ್ರಂಥವೂ ದನದ ಮೂತ್ರ ಶ್ರೇಷ್ಠ ಪಾನೀಯವೆಂದೋ , ಔಷಧಿಯೆಂದೋ ಪ್ರತಿಪಾದಿಸಿಲ್ಲ.‌ ಎಲ್ಲಿಯವರೆಗೆಂದರೆ ಭಾರತೀಯ ವೈದ್ಯ ಶಾಸ್ತ್ರದ ಆಚಾರ್ಯತ್ರಯರಾದ ಚರಕ ಶುಶ್ರುತ ವಾಗ್ಭಟರೂ ದನದ ಮೂತ್ರವನ್ನು ಪಾನೀಯವೆಂದೋ, ಔಷಧಿಯೆಂದೋ ಎಲ್ಲೂ ದಾಖಲಿಸಿಲ್ಲ.

ಆದರೆ ಇಂದು ದನದ ಹಾಲಿಗೆ ಲೀಟರಿಗೆ ನಲ್ವತ್ತು ರೂಪಾಯಿ ಮತ್ತು ದನದ ಮೂತ್ರಕ್ಕೆ ಅರ್ಧ ಲೀಟರಿಗೆ ಒಂಬೈನೂರು ರೂಪಾಯಿ. ಇದು ವಿಚಿತ್ರವಾದರೂ ಸತ್ಯ.
ವಾಸ್ತವದಲ್ಲಿ ದನದ ಮೂತ್ರ ಪಾನೀಯ ಮತ್ತು ಔಷಧಿಯಾಗಿದ್ದು ದನ ಧ್ವೇಷ ರಾಜಕೀಯದ ಅಸ್ತ್ರವಾದ ಬಳಿಕವಷ್ಟೆ. ರಾಜಕೀಯ ಲಾಭದ ಉದ್ದೇಶಕ್ಕಾಗಿ ಪಾವಿತ್ರ್ಯತೆಯ ಲೇಬಲ್ ಹಚ್ಚಿ ಜನರ ಭಾವನೆಗಳನ್ನು ದುರುಪಯೋಗಪಡಿಸಿಕೊಂಡು ಮೂತ್ರವನ್ನೂ ನಮ್ಮ ದೇಶದಲ್ಲಿ ದುಬಾರಿ ಬೆಲೆಗೆ ಮಾರಲಾಗುತ್ತಿದೆ. ಒಂದೊಮ್ಮೆ ಅದು ನಿರ್ದಿಷ್ಟವಾಗಿ ಒಂದು ಸಿದ್ದಾಂತಿಗರ ಕೆಲಸ ಮಾತ್ರವಾಗಿತ್ತು. ಯಾವಾಗ ಮೂತ್ರ ವ್ಯವಹಾರ ಲಾಭದಾಯಕವಾಗತೊಡಗಿತೋ ಅಂದಿನಿಂದ ಬಹುರಾಷ್ಟ್ರೀಯ ಬಂಡವಾಳಶಾಹಿಗಳೂ ಮೂತ್ರ ವ್ಯವಹಾರಕ್ಕಿಳಿದು ಅದಕ್ಕೂ ಒಂದು ಖದರ್ ತಂದುಕೊಟ್ಟರು.

ಮೂತ್ರ ಎಂದರೇನು?

ಯಾವುದೇ ಜೀವಿಯು ಸೇವಿಸಿದ ದ್ರವಾಹಾರವು ಶಕ್ತಿ ಉತ್ಪಾದನೆ ಮತ್ತು ದೇಹದ ಆಂತರಿಕ ಪ್ರಕ್ರಿಯೆಗೆ ವಿನಿಯೋಗವಾದ ಬಳಿಕ ಶರೀರವೇ ಮೂತ್ರದ್ವಾರದ ಮೂಲಕ ಹೊರಹಾಕುವ ದ್ರವ ರೂಪದ ಕಲ್ಮಶ ಪದಾರ್ಥವೇ ಮೂತ್ರ.

ಇದೀಗ ಮೂತ್ರ ವ್ಯವಹಾರಕ್ಕೆ ವೈಜ್ಞಾನಿಕ ಸ್ಪರ್ಶ ಕೊಡುವ ಸಲುವಾಗಿ ಮೂತ್ರದ ಬಾಟಲಿಯ ಹೊರಗಡೆ ಅವುಗಳಲ್ಲಿ ಅಡಕವಾಗಿರುವ ಕಂಟೆಂಟ್ ಗಳ ಪಟ್ಟಿಯನ್ನೂ ಹಾಕಲಾಗುತ್ತಿದೆ. ಅವು ಹೀಗಿವೆ
– ಯೂರಿಯಾ
-ಕ್ರಿಯಾಟಿನಿನ್
-ಯೂರಿಕ್ ಆಸಿಡ್
-ಸೋಡಿಯಂ
– ಪ್ರೋಟೀನ್
-ಪೊಟ್ಯಾಸಿಯಮ್‌
-ಕ್ಯಾಲ್ಸಿಯಂ…….

ಹೌದು ಇದು ಸತ್ಯವೂ ಹೌದು. ಈ ಅಂಶಗಳು ಕೇವಲ ದನದ ಮೂತ್ರದಲ್ಲಿ ಮಾತ್ರವಿರುವುದಲ್ಲ. ಎಲ್ಲಾ ಸಸ್ತನಿಗಳ ಮೂತ್ರದಲ್ಲೂ ಇವೆ. ಹಾಗಿರುವಾಗ ಕೇವಲ ದನದ ಮೂತ್ರಕ್ಕೆ ಮಾತ್ರ ಯಾಕೆ ಈ ಪ್ರಾಧಾನ್ಯತೆ?
ದನದ ಹಾಲು ಕ್ಯಾಲ್ಸಿಯಂ ಶ್ರೀಮಂತವಾಗಿರುವ ದ್ರವಾಹಾರ. ಮತ್ತು ದನದ ಮಾಂಸ ಪ್ರೋಟೀನ್ ಶ್ರೀಮಂತವಾಗಿರುವ ಆಹಾರ. ಪ್ರೋಟೀನ್ ಮತ್ತು ಕ್ಯಾಲ್ಸಿಯಂಗಾಗಿ ದನ ವಿಸರ್ಜಿಸುವ ಕಲ್ಮಶವಾದ ಮೂತ್ರ ಸೇವಿಸುವುದಕ್ಕಿಂತ ಸಹಜ ಆಹಾರಗಳಾದ ಹಾಲು ಮತ್ತು ಮಾಂಸ ಸೇವಿಸುವುದು ಉತ್ತಮವಲ್ಲವೇ…?
ಸೆಗಣಿಯಲ್ಲಿ, ಮಲದಲ್ಲಿ ಕಾರ್ಬೋಹೈಡ್ರೇಟ್, ಪ್ರೋಟೀನ್ ಮುಂತಾದ ಅಂಶಗಳಿವೆ.ಆ ಕಾರಣಕ್ಕೆ ಅವನ್ನೂ ತಿನ್ನಲಾದೀತೆ?

ಆಶ್ಚರ್ಯದ ಸಂಗತಿಯೇನೆಂದರೆ ಅಲೋಪತಿ ಔಷಧಿಗಳ ಆನ್ಲೈನ್ ಮಾರಾಟ ಮಾಡುವ ಅನೇಕ ಕಂಪೆನಿಗಳೂ ಮೂತ್ರ ವ್ಯವಹಾರವೆಂಬ ಲಾಭದಾಯಕ ಉದ್ಯಮದಲ್ಲಿ ತೊಡಗಿಸಿಕೊಂಡಿವೆ.

ಮೂತ್ರ ವ್ಯವಹಾರದ ಪ್ರವರ್ತಕರು ದನದ ಮೂತ್ರ ನಾಲ್ಕು ನೂರ ನಲ್ವತ್ತು ಖಾಯಿಲೆಗಳಿಗೆ ರಾಮಬಾಣವೆಂದು ಪ್ರಚಾರ ಮಾಡುತ್ತಾ ಬಂದಿದ್ದಾರೆ. ಇದು ಸತ್ಯವಾದರೆ ಮೂತ್ರ ಪರ ಇರುವವರೆಲ್ಲಾ ತಮಗೆ ಖಾಯಿಲೆ ಬಂದಾಗೆಲ್ಲಾ ವೈದ್ಯರ ಬಳಿ ಹೋಗುವುದೇಕೆ? ಆಸ್ಪತ್ರೆಗಳಲ್ಲಿ ಅಡ್ಮಿಟ್ ಆಗುವುದೇಕೆ?

ಮಧುಮೇಹಕ್ಕೆ ರಾಮಬಾಣ!!

ಸುಮಾರು ಏಳೆಂಟು ವರ್ಷಗಳ ಹಿಂದಿನ ಮಾತು.ನನ್ನ ವೈದ್ಯಕೀಯ ಪ್ರಯೋಗಾಲಯಕ್ಕೆ ಮಧುಮೇಹ ತಪಾಸಣೆಗೆ ಬರುತ್ತಿದ್ದ ನನ್ನ ಪರಿಚಯದ ಮಹಿಳೆಯೊಬ್ಬರು ನನ್ನಲ್ಲಿ ಮಧುಮೇಹಕ್ಕೆ ದನದ ಮೂತ್ರ ರಾಮಬಾಣ ಎಂದು ಪ್ರಾರಂಭಿಸಿ ಅದರ ಮಹತ್ವದ ಬಗ್ಗೆ ವಿವರಿಸಲಾರಂಭಿಸಿದರು.
ಅವರು ಅದೇ ಚಿಕಿತ್ಸೆ ಪ್ರಾರಂಬಿಸಿದ್ದರು. ಸಾಮಾನ್ಯವಾಗಿ 200 ರಿಂದ 250 mg/dl ಇರುತ್ತಿದ್ದ ಅವರ ರಕ್ತದ ಸಕ್ಕರೆ ಅಂಶ ಮೂತ್ರ ಚಿಕಿತ್ಸೆ ಪ್ರಾರಂಬಿಸಿದ ಬಳಿಕ ಏರುಹಾದಿ ಹಿಡಿಯಿತು. ಆ ಬಗ್ಗೆ ನಾನವರಿಗೆ ಪ್ರತೀ ಬಾರಿಯೂ ಎಚ್ಚರಿಸುತ್ತಿದ್ದೆ. ಅದಕ್ಕವರು ಅದು ಪ್ರಾರಂಬಿಕ ಹಂತದಲ್ಲಿ ಜಾಸ್ತಿಯಾಗುತ್ತದಂತೆ ಮತ್ತೆ ಅದು ಇಳಿಮುಖವಾಗುತ್ತಾ ಬರುತ್ತದಂತೆ ಎಂದು ಸಮಜಾಯಿಷಿ ಕೊಡುತ್ತಿದ್ದರು. ಹಾಗೆ ಏರುಮುಖವಾಗತೊಡಗಿದ
ಅವರ ರಕ್ತದ ಸಕ್ಕರೆ ಅಂಶ ಐನೂರರ ಗಡಿ ದಾಟಿ ಆ ಮಹಿಳೆ ವಿಪರೀತ ನಿತ್ರಾಣವಾಗತೊಡಗಿದರು. ಮತ್ತೆ ಅನ್ಯದಾರಿ ತೋಚದೇ ಇನ್ಸುಲಿನ್‌ ಪ್ರಾರಂಭಿಸಿ ಮತ್ತೆ ಅದನ್ನು ನಿಯಂತ್ರಣಕ್ಕೆ ತಂದರು. ಆ ಬಳಿಕ ಮೂತ್ರ ಚಿಕಿತ್ಸಕರಿಗೆ ಹಿಗ್ಗಾ‌ ಮುಗ್ಗಾ ಬೈಯುತ್ತಿದ್ದರು.

ಸಂತಾನೋತ್ಪತ್ತಿಗೆ ರಾಮಬಾಣ!!!

ನನ್ನ ಸ್ನೇಹಿತ ಇಲೆಕ್ಟ್ರಾನಿಕ್ ಇಂಜಿನಿಯರ್ ಒಬ್ಬರಿಗೆ ಮದುವೆಯಾಗಿ ಅನೇಕ ವರ್ಷಗಳ ಕಾಲ ಮಕ್ಕಳಾಗಿರಲಿಲ್ಲ. ಅದಕ್ಕಾಗಿ ಶಸ್ತ್ರಕ್ರಿಯೆ ಮಾಡಿದ ಬಳಿಕ ಅವರಿಗೆ ಮಕ್ಕಳಾಗಿತ್ತು. ಅವರು ದನದ ಮೂತ್ರದ ಬಗ್ಗೆ ಸದಾ ನನ್ನ ಬಳಿ ಕೊಚ್ಚಿಕೊಳ್ಳುತ್ತಿದ್ದರು. ಒಮ್ಮೆ ಸಂತಾನೋತ್ಪತ್ತಿಗೆ ದನದ ಮೂತ್ರ ಬಹಳ ಪರಿಣಾಮಕಾರಿ. ನನ್ನ ಪರಿಚಯದ ಕೆಲವರಿಗೆ ಮೂತ್ರ ಚಿಕಿತ್ಸೆಯಿಂದ ಮಕ್ಕಳಾದ ಉದಾಹರಣೆ ಗಳಿವೆ ಎಂದರು. ನನಗೆ ತಡೆಯಲಾಗದೇ ಕೇಳಿಯೇ ಬಿಟ್ಟೆ… ಹಾಗಾದ್ರೆ ನೀವ್ಯಾಕೆ ಶಸ್ತ್ರಚಿಕಿತ್ಸೆ ಮಾಡಿದಿರಿ?
ನನಗೆ ಸ್ವಲ್ಪ ಅರ್ಜೆಂಟ್ ಕೆಲಸ ಇದೆ, ಇನ್ನೊಮ್ಮೆ ಮಾತನಾಡುವ ಎಂದು ಅಲ್ಲಿಂದ ಕಾಲು ‌ಕಿತ್ತರು. ಆ ನಂತರ ಮುಂದೆಂದೂ ಅವರು ನನ್ನಲ್ಲಿ ಮೂತ್ರ ಮಹಾತ್ಮೆಯ ಬಗ್ಗೆ ಮಾತನಾಡಲಿಲ್ಲ.

To Top
error: Content is protected !!
WhatsApp chat Join our WhatsApp group