ರಾಜ್ಯ ಸುದ್ದಿ

ಬಳ್ಳಾರಿಯ ಜನರನ್ನು ಭಯಮುಕ್ತರನ್ನಾಗಿಸಬೇಕೆಂಬ ಛಲದಿಂದಲೇ ಬಿಜೆಪಿ ವಿರುದ್ಧ ತೊಡೆ ತಟ್ಟಿದ್ದೆ: ಸಿದ್ದರಾಮಯ್ಯ

ವರದಿಗಾರ (ಅ 31): ‘ಬಳ್ಳಾರಿಯಲ್ಲಿ ರೆಡ್ಡಿ ಬಳಗ ಭಯದ ವಾತಾವರಣ ಸೃಷ್ಟಿಸಿತ್ತು. ಈ ಭಯದ ವಾತಾವರಣ ಮೂಡಿಸಿದ್ದ ರೆಡ್ಡಿಗಳ ಸೊಕ್ಕು ಮುರಿಯಲೆಂದೇ ನಾನು ಬಿಜೆಪಿ ವಿರುದ್ಧ ವಿಧಾನಸೌಧದಲ್ಲಿ ತೊಡೆ ತಟ್ಟಿದ್ದೆ. ಬೆಂಗಳೂರಿನಿಂದ ಬಳ್ಳಾರಿವರೆಗೆ 16 ದಿನ ಪಾದಯಾತ್ರೆ ನಡೆಸಲಾಯಿತು. ನಾನು ಪಾದಯಾತ್ರೆ ನಡೆಸದಿದ್ದರೆ ರೆಡ್ಡಿ ಜೈಲಿಗೆ ಹೋಗುತ್ತಿರಲಿಲ್ಲ’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಇತ್ತೀಚೆಗೆ ಜಮಖಂಡಿಯಲ್ಲಿ ಕುರುಬ ಸಮುದಾಯದ ಸಭೆಯೊಂದರಲ್ಲಿ ಸಿದ್ದರಾಮಯ್ಯರು ಇದನ್ನು ಬಹಿರಂಗಪಡಿಸಿದ್ದಾರೆ. ಅಚ್ಚರಿಯೆಂಬಂತೆ ಈ ಕಾರ್ಯಕ್ರಮಕ್ಕೆ ಮಾಧ್ಯಮ ಪ್ರತಿನಿಧಿಗಳ ಪ್ರವೇಶ ನಿರ್ಬಂಧಿಸಲಾಗಿತ್ತು. ಹೀಗಾಗಿ ಸಿದ್ದರಾಮಯ್ಯ ಮಾಡಿದ್ದ ಭಾಷಣದ ಮಾಹಿತಿ ಯಾರಿಗೂ ಇರಲಿಲ್ಲ. ಈಗ ಭಾಷಣದ ವೀಡಿಯೋ ಹೊರಬಂದಿದ್ದು, ಅದರಲ್ಲಿ ಸಿದ್ದರಾಮಯ 2013ರ ವಿಧಾನಸಭಾ ಚುನಾವಣೆಗಿಂತ ಮೊದಲಿನ ಬಳ್ಳಾರಿಯ ಬಗ್ಗೆ ಕುತೂಹಲಕಾರಿ ಅಂಶಗಳ ಕುರಿತು ಮಾಹಿತಿ ನೀಡಿದ್ದಾರೆ. ಈ ಸಭೆಯ ನಂತರದ ಬೆಳವಣಿಗೆಯಲ್ಲಿ ಸಿದ್ದರಾಮಯ್ಯ, ಟ್ವಿಟ್ಟರ್ ಮೂಲಕ ಬಹಿರಂಗ ಚರ್ಚೆಗೆ ಬರುವಂತೆ ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಸವಾಲೆಸೆದಿದ್ದರು.

ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ `ನಾನು ಪಾದಯಾತ್ರೆ ಮಾಡುವುದಕ್ಕಿಂತ ಮೊದಲು ಬಳ್ಳಾರಿಯಲ್ಲಿ ಯಾವುದೇ ಕಾನೂನು, ಕಟ್ಟಳೆಗಳು ಕೆಲಸ ಮಾಡುತ್ತಿರಲಿಲ್ಲ. ನ್ಯಾ.ಸಂತೋಷ ಹೆಗ್ಡೆ ನೀಡಿದ ವರದಿಯಲ್ಲಿ ‘ರಿಪಬ್ಲಿಕ್ ಆಫ್ ಬಳ್ಳಾರಿ’ ಎಂದು ಬರೆದಿದ್ದರು. ನಾವು ಚುನಾವಣಾ ಪ್ರಚಾರಕ್ಕೆಂದು ಹೋದಾಗ ಇಡೀ ಬಳ್ಳಾರಿ ನಗರದಲ್ಲಿ ಶಾಮಿಯಾನ ಹಾಕಲು ಅನುಮತಿ ದೊರೆಯಲಿಲ್ಲ ಎಂದರು. ಜಿಲ್ಲಾಧಿಕಾರಿ ರೆಡ್ಡಿಗೆ ಹೆದರಿ ಸಭೆಗೆ ಅನುಮತಿ ನೀಡಲಿಲ್ಲ. ಕೊನೆಗೆ ಬೀರೇಶ್ವರ ದೇವಸ್ಥಾನದ ಆವರಣದಲ್ಲಿ ಸಭೆ ನಡೆಸಲು ನಿರ್ಧರಿಸಲಾಯಿತು. ಮನೆಯೊಂದರಿಂದ ಎರಡು ಕುರ್ಚಿ, ಒಂದು ಟೇಬಲ್ ತಂದು ಹಾಕಿದರು. ರೆಡ್ಡಿಗಳ ಭಯದಿಂದ ಜನರು ಭಾಷಣ ಕೇಳಲು ಮನೆಯಿಂದ ಹೊರಗೆ ಬರಲಿಲ್ಲ’ ಎಂದು ವಿವರಿಸಿದ್ದಾರೆ.

‘ನಿರ್ಜನವಾಗಿದ್ದ ಪ್ರದೇಶದಲ್ಲೇ ಅಂದು ಸಿ ಎಂ ಇಬ್ರಾಹಿಂ ಭಾಷಣ ಆರಂಭಿಸಿದ್ದರು. ಮನೆಯೊಳಗಿರುವ ಅಕ್ಕ, ತಂಗಿಯರೇ, ಅಣ್ಣ, ತಮ್ಮಂದಿರೇ ಹಾಗೂ ಗಿಡಮರಗಳೇ’ ಎಂದು ಇಬ್ರಾಹಿಂ ಮಾರ್ಮಿಕವಾಗಿ ತನ್ನ ಭಾಷಣ ಆರಂಭಿಸಿದ್ದರು. ನಂತರ ಕೊನೆಗೆ ಜನರು ಮನೆಗಳಿಂದ ಹೊರ ಬಂದರು. ಆಗ ಅಂದಾಜು 500 ಜನರೆದುರು ಭಾಷಣ ಮಾಡಬೇಕಾಯಿತು ಎಂದು ಮಾಜಿ ಮುಖ್ಯಮಂತ್ರಿ ಹೇಳಿದರು.

ಒಮ್ಮೆ ರಾಮಗಢ ಎಂಬ ಗಣಿಗಾರಿಕೆ ಪ್ರದೇಶಕ್ಕೆ ಪ್ರಚಾರಕ್ಕೆ ತೆರಳಿದ್ದೆ. ನನ್ನ ಕಾರ್ ಹಿಂದೆ ಮುಂದೆ ಯುವಕರು ಬೈಕ್ನ ಲ್ಲಿ ಹಿಂಬಾಲಿಸುತ್ತಿದ್ದರು, ನಮ್ಮ ವಿರುದ್ಧ ಘೋಷಣೆ ಕೂಗುತ್ತಿದ್ದರು. ನಾವು ಹೋಗಬಾರದು ಎಂದು ರಸ್ತೆಗೆ ಮಣ್ಣು ಸುರಿಯಲಾಯಿತು. ಈ ರೀತಿಯಲ್ಲಿ ಬಳ್ಳಾರಿಯನ್ನೊಂದು ತಮ್ಮ ಅಡ್ಡೆಯನ್ನಾಗಿಸಿ ಜನರನ್ನು ಭಯದ ವಾತಾವರಣದಲ್ಲಿ ಬದುಕುವಂತೆ ಮಾಡಿದ್ದ ರೆಡ್ಡಿಗಳ ವಿರುದ್ಧ ಹೋರಾಡುವ ಛಲದಿಂದಲೇ ಬಿಜೆಪಿಯ ವಿರುದ್ಧ ವಿಧಾನದೌಧದಲ್ಲಿ ತೊಡೆ ತಟ್ಟಿದೆ. ನಂತರ ಬಳ್ಳಾರಿಗೆ ಪಾದಯಾತ್ರೆ ಹಮ್ಮಿಕೊಂಡಿದ್ದೆ. ಇದು ಫಲ ನೀಡೀತು ಮಾತ್ರವಲ್ಲ ರೆಡ್ಡಿ ಜೈಲುಪಾಲಾಗುವಂತೆ ಮಾಡಿತು ಎಂದು ಸಿದ್ದರಾಮಯ್ಯ ತನ್ನ ಭಾಷಣದಲ್ಲಿ ಹೇಳಿದ್ದಾರೆ.

To Top
error: Content is protected !!
WhatsApp chat Join our WhatsApp group