ರಾಜ್ಯ ಸುದ್ದಿ

ಶ್ರೀರಾಮುಲು ಯಡಿಯೂರಪ್ಪ ಜೊತೆ ಸೇರಿ ರಾಜ್ಯವನ್ನು ಲೂಟಿ ಮಾಡಿದ್ದಾರೆ, ಇಂಥವರನ್ನು ಅಧಿಕಾರದಿಂದ ದೂರವಿಡಿ: ಸಿದ್ದರಾಮಯ್ಯ

  • ಕೇಂದ್ರದಲ್ಲಿ ಬಿಜೆಪಿಯದ್ದೇ ಸರ್ಕಾರ ಇದೆ. ಶ್ರೀರಾಮುಲು ಒಂದಾದರೂ ಯೋಜನೆಯನ್ನು ಬಳ್ಳಾರಿಗೆ ತಂದಿದ್ದಾರೆಯೇ?
  • ಪ್ರಜಾಪ್ರಭುತ್ವ, ಸಂಸದೀಯ ವ್ಯವಸ್ಥೆ ಯಾವುದೂ ರಾಮುಲು ಅವರಿಗೆ ಗೊತ್ತಿಲ್ಲ.
  • ರಾಜ್ಯ, ದೇಶ ಗೊತ್ತಿಲ್ಲದವರು ಲೋಕಸಭೆಗೆ ಏಕೆ ಹೋಗಬೇಕು? ಸಿದ್ದರಾಮಯ್ಯ ಪ್ರಶ್ನೆ

ವರದಿಗಾರ (ಅ.23): ಬಿಜೆಪಿ ನಾಯಕ, ಸಂಸದ ಶ್ರೀರಾಮುಲು ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಮುಖ್ಯಮಂತ್ರಿ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ  ‘ಯಡಿಯೂರಪ್ಪನವರ ಜೊತೆ ಸೇರಿ ರಾಜ್ಯವನ್ನು ಲೂಟಿ ಮಾಡಿದ್ದಾರೆ, ಇಂಥವರನ್ನು ಅಧಿಕಾರದಿಂದ ದೂರವಿಡಿ’ ಎಂದು ಶ್ರೀರಾಮುಲು ರವರನ್ನು ಉಲ್ಲೇಖಿಸಿ ಹೇಳಿದ್ದಾರೆ.

ಬಳ್ಳಾರಿ ಚುನಾವಣೆಗೆ ಸಂಬಂಧಿಸಿ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ತನ್ನ ಪ್ರಥಮ ಟ್ವೀಟ್ ನಲ್ಲಿ, ‘ಶ್ರೀರಾಮುಲುಗೆ 371 ಜೆ ಅಂದರೆ ಏನು ಅಂತಲೇ ಗೊತ್ತಿಲ್ಲ. ಶ್ರೀರಾಮುಲುಗೆ ಗೊತ್ತಿರೋದು 326, 307, 323, 420 ಮಾತ್ರ. ಇಂಥವರಿಗೆ ಮತ ನೀಡಿದರೆ ಕ್ಷೇತ್ರದ ಅಭಿವೃದ್ಧಿ ಸಾಧ್ಯವೇ? ಈ ಹಿಂದೆಯೇ ಯಡಿಯೂರಪ್ಪನವರ ಜೊತೆ ಸೇರಿ ರಾಜ್ಯವನ್ನು ಲೂಟಿ ಮಾಡಿದ್ದಾರೆ, ಇಂಥವರನ್ನು ಅಧಿಕಾರದಿಂದ ದೂರವಿಡಿ’ ಎಂದು ಅವರು ಕರೆ ನೀಡಿದ್ದಾರೆ.

ಎಡನೇ ಟ್ವೀಟ್ ನಲ್ಲಿ, ‘ಲೋಕಸಭೆ ಅಥವಾ ವಿಧಾನಸಭೆಯಲ್ಲಿ ಒಂದು ದಿನವೂ ಶ್ರೀರಾಮುಲು ಮಾತನಾಡಿಲ್ಲ. ಬಳ್ಳಾರಿ ಲೋಕಸಭೆ ಕ್ಷೇತ್ರದ ಅಭ್ಯರ್ಥಿಯಾಗಿರುವ ಶಾಂತಾ ಅವರೂ ಈ ಹಿಂದೆ ಲೋಕಸಭೆಯಲ್ಲಿ ಮಾತನಾಡಿಲ್ಲ. ಅಲಂಕಾರಕ್ಕೆ ಅವರನ್ನು ಅಲ್ಲಿಗೆ ಕಳುಹಿಸಬೇಕೇ?’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಮೂರನೇ ಟ್ವೀಟ್ ನಲ್ಲಿ,  ‘ಉಗ್ರಪ್ಪ ಅವರನ್ನು ಹೊರಗಿನವರು ಎಂದು ಹೇಳುವುದಾದರೆ, ಬಾದಾಮಿಯಲ್ಲಿ ನನ್ನ ವಿರುದ್ಧ ಸ್ಪರ್ಧಿಸಿದ್ದ ಶ್ರೀರಾಮುಲು ಅಲ್ಲಿಯೇ ಜನಿಸಿದವರೇ? ಶ್ರೀರಾಮುಲು ಕಣ್ಣು ಬಿಡುವ ಮೊದಲೇ ಉಗ್ರಪ್ಪ ಅವರು ರಾಜಕೀಯಕ್ಕೆ ಪದಾರ್ಪಣೆ ಮಾಡಿದವರು. ಉಗ್ರಪ್ಪ ಅವರು ಲೋಕಸಭೆಗೆ ಹೋದರೆ ಅಲ್ಲಿ ಬಳ್ಳಾರಿ ಸದ್ದು ಮಾಡುತ್ತದೆ. ಶಾಂತಾ ಅವರು ಹೋದರೆ ಆ ಕೆಲಸ ಖಂಡಿತಾ ಆಗದು’. ಎಂದು ಹೇಳಿದ್ದಾರೆ.

ಮತ್ತೊಂದು ಟ್ವೀಟ್ ನಲ್ಲಿ, ‘ಶ್ರೀರಾಮುಲು ಅವರಿಗೆ ಹೋಲಿಸಿದರೆ ರಾಜಕೀಯದಲ್ಲಿ ಉಗ್ರಪ್ಪ ಅವರದ್ದು ಮೇರು ವ್ಯಕ್ತಿತ್ವ. ಪ್ರಜಾಪ್ರಭುತ್ವ, ಸಂಸದೀಯ ವ್ಯವಸ್ಥೆ ಯಾವುದೂ ರಾಮುಲು ಅವರಿಗೆ ಗೊತ್ತಿಲ್ಲ. ಹಣ, ಅಹಂಕಾರದಿಂದ ಅವರು ರಾಜಕೀಯ ನಡೆಸುವವರು ಅವರು. ಕೇಂದ್ರದಲ್ಲಿ ಬಿಜೆಪಿಯದ್ದೇ ಸರ್ಕಾರ ಇದೆ. ಶ್ರೀರಾಮುಲು ಒಂದಾದರೂ ಯೋಜನೆಯನ್ನು ಬಳ್ಳಾರಿಗೆ ತಂದಿದ್ದಾರೆಯೇ?’ ಎಂದು ಅವರು ಪ್ರಶ್ನಿಸಿದ್ದಾರೆ.

‘ರೈತರ ಸಾಲ ಮನ್ನಾ ಮಾಡಿ ಎಂದು ಶ್ರೀರಾಮುಲು ಒಂದು ದಿನವೂ ಲೋಕಸಭೆಯಲ್ಲಿ ಒತ್ತಾಯ ಮಾಡಿಲ್ಲ. ಕನ್ನಡವೇ ಸರಿಯಾಗಿ ಮಾತನಾಡಲು ಬಾರದವರು ನಾಡಿನ‌ ಪರವಾಗಿ ಏನು ಮಾತನಾಡಿಯಾರು? ರಾಜ್ಯ, ದೇಶ ಗೊತ್ತಿಲ್ಲದವರು ಲೋಕಸಭೆಗೆ ಏಕೆ ಹೋಗಬೇಕು? ನಮ್ಮ‌ ಪಕ್ಷದ ಅಭ್ಯರ್ಥಿ ಉಗ್ರಪ್ಪನವರಿಗೆ ಮತ ನೀಡಿ ಕ್ಷೇತ್ರದ ಅಭಿವೃದ್ಧಿಗೆ ನಮ್ಮೊಂದಿಗೆ ಕೈಜೋಡಿಸಿ’ ಎಂದೂ ಸಿದ್ದರಾಮಯ್ಯ ಹೇಳಿದ್ದಾರೆ.

ಸಿದ್ದರಾಮಯ್ಯರವರ ಹೇಳಿಕೆಗೆ ಶ್ರೀರಾಮುಲು ಪ್ರತಿಕ್ರಿಯಿಸಿದ್ದು, ‘ವಿಧಾನಸಭೆ ಹಾಗು ಲೋಕಸಭೆಯಲ್ಲಿ ನಾನು ಮಾತನಾಡುವಾಗ ನೀವು ನಿದ್ದೆಯಲ್ಲಿದ್ದಿರಿ ಅನಿಸುತ್ತಿದೆ. ಸಂಸದರ ನಿಧಿಯ ಸಮರ್ಪಕ ಬಳಕೆಯಲ್ಲಿ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದ್ದೇನೆ. 16ನೇ ಲೋಕಸಭೆಯ 20 ಚರ್ಚೆಯಲ್ಲಿ ಭಾಗವಹಿಸಿ, 572 ಪ್ರಶ್ನೆ ಕೇಳಿದ್ದೇನೆ. ನಿಮ್ಮ ರಾಹುಲ್ ಗಾಂಧಿ ಕೇವಲ 12 ಚರ್ಚೆಯಲ್ಲಿ ಭಾಗವಹಿಸಿದ್ದು, ಒಂದು ಪ್ರಶ್ನೆಯನ್ನೂ ಕೇಳಿಲ್ಲ’ ಎಂದು ತಿರುಗೇಟು ನೀಡಿದ್ದಾರೆ.

To Top
error: Content is protected !!
WhatsApp chat Join our WhatsApp group