ರಾಷ್ಟ್ರೀಯ ಸುದ್ದಿ

‘ಅಲ್ಲಿ ಪ್ರೀತಿ ಇದೆ, ಲವ್ ಜಿಹಾದ್ ಎಂಬುದೊಂದಿಲ್ಲ’ : ಮುಖಭಂಗದೊಂದಿಗೆ ತನಿಖೆ ಕೈಬಿಟ್ಟ ಎನ್ ಐ ಎ !

► ಆರೋಪ ಸಾಬೀತುಪಡಿಸಲು 89 ಅಂತರ್ಧರ್ಮೀಯ ವಿವಾಹ ಪ್ರಕರಣಗಳನ್ನು ‘ಪರೀಕ್ಷಿಸಿದ್ದ’ NIA !!

ವರದಿಗಾರ (ಅ 18) :  ರಾಷ್ಟ್ರೀಯ ತನಿಖಾ ದಳವು (NIA) ದೇಶದಲ್ಲಿ ಸಂಘಪರಿವಾರ ಪ್ರಾಯೋಜಿತ ‘ಲವ್ ಜಿಹಾದ್” ಎಂಬ ಕಟ್ಟುಕಥೆಯನ್ನಾದರಿಸಿ ನಡೆದಿದ್ದ ಅಪಪ್ರಚಾರದ ಕುರಿತಂತೆ ನಡೆಸಿದ ತನಿಖೆಯಲ್ಲಿ ಕೊನೆಗೆ ಇಂತಹಾ ಒಂದು ಪ್ರಯತ್ನ ದೇಶದಲ್ಲಿ ನಡೆದಿಲ್ಲ ಎಂದು ಹೇಳಿದೆ.  ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಮತಾಂತರವಾಗಲು ಕೆಲವೊಬ್ಬರು ಸಹಾಯ ಮಾಡಿರಬಹುದೇ ವಿನಃ ಅಲ್ಲಿ ಯಾವುದೇ ಕ್ರಿಮಿನಲ್ ಷಡ್ಯಂತ್ರಗಳು ನಡೆದಿರುವ ಕುರಿತು ಪುರಾವೆ ಲಭಿಸಿಲ್ಲ ಎಂದು NIA ತನಿಖೆಯನ್ನು ಕೊನೆಗೊಳಿಸಿದೆ.

“ಯಾವುದೇ ಮಹಿಳೆಯಾಗಲೀ ಪುರುಷನಾಗಲೀ ಮತಾಂತರವಾಗಲು ಯಾರದ್ದೇ ಒತ್ತಡಗಳು ನಡೆದಿದ್ದರ ಬಗ್ಗೆ ಪುರಾವೆ ನಮಗೆ ಸಿಗಲಿಲ್ಲ. ನಮ್ಮ ಮಟ್ಟಿಗೆ ಇದೊಂದು ಮುಗಿದ ಅಧ್ಯಾಯವಾಗಿದ್ದು, ಈ ಕುರಿತಂತೆ ಸುಪ್ರೀಮ್ ಕೋರ್ಟಿಗೆ ಯಾವುದೇ ವರದಿ ಸಲ್ಲಿಸುವುದಿಲ್ಲ”  ಎಂದು ಹೆಸರು ಹೇಳಲಿಚ್ಚಿಸದ NIA ಯ ಹಿರಿಯ ಅಧಿಕಾರಿಯೊಬ್ಬರು Hindustan Times ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

NIA  ತಮ್ಮ ಆರೋಪಗಳನ್ನು ಸಾಬೀತುಪಡಿಸುವ ಪ್ರಯತ್ನದ ಭಾಗವಾಗಿ ಒಟ್ಟು 89 ಅಂತರ್ಧರ್ಮೀಯ ಪ್ರಕರಣಗಳನ್ನು ಪರೀಕ್ಷಿಸಿ ಅವುಗಳಲ್ಲಿ 11 ಪ್ರಕರಣಗಳನ್ನು ತಮ್ಮ ತನಿಖೆಯಲ್ಲಿ ಸೇರಿಸಿತ್ತು. ಆದರೆ ಯಾವುದೇ ಪ್ರಕರಣಗಳಲ್ಲೂ ಕೂಡಾ ಬಲವಂತದ ಮತಾಂತರ ನಡೆದ ಬಗ್ಗೆ ಪುರಾವೆ ಸಿಗದೆ NIA ಈಗ ತನಿಖೆಯನ್ನೇ ಕೊನೆಗೊಳಿಸಿದೆ. ಒಂದರ್ಥದಲ್ಲಿ ಇದು ತನಿಖಾ ದಳಕ್ಕೆ ತೀವ್ರ ಮುಖಭಂಗವಾದಂತಾಗಿದೆ.

ಕೇರಳದ ಡಾ. ಹಾದಿಯಾ, ತನ್ನ ಸ್ವ ಇಚ್ಚೆಯಂತೆಯೇ ಶಫೀನ್ ಜಹಾನ್ ಎನ್ನುವ ವ್ಯಕ್ತಿಯನ್ನು ಮದುವೆಯಾದಾಗ ಅಲ್ಲಿನ ನಿರ್ದಿಷ್ಟ ಮುಸ್ಲಿಮ್ ಸಂಘಟನೆಯೊಂದನ್ನು ಗುರಿಯಾಗಿಸಿ ಫಾಸಿಸ್ಟ್ ಶಕ್ತಿಗಳು ಹಲವು ರೀತಿಯ ಅಪಪ್ರಚಾರಗಳನ್ನು ನಡೆಸಿದ್ದವು. ಫ್ಯಾಸಿಸ್ಟರ ಕುತಂತ್ರಗಳಿಗೆ ಪೂರಕವಾಗಿ ಕೇರಳದ ಕಮ್ಯುನಿಸ್ಟ್ ಸರಕಾರವೂ ಕೂಡಾ ರಾಜ್ಯ ಹೈಕೋರ್ಟಿನಲ್ಲಿ, ಹಾದಿಯಾ ಮದುವೆಯಲ್ಲಿ ಏನೋ “ಷಡ್ಯಂತ್ರ” ನಡೆದಿದೆ ಎಂದು ಅಫಿದವಿತ್ ಸಲ್ಲಿಸಿತ್ತು. ಹಾದಿಯಾರ ತಂದೆ ಹಾಗೂ ಕೇರಳದ ಕಮ್ಯುನಿಸ್ಟ್ ಸರಕಾರದ ಅರ್ಜಿಯನ್ನು ಪರಿಶೀಲಿಸಿದ ಕೇರಳ ಹೈಕೋರ್ಟ್ ಅವರ ಮದುವೆಯನ್ನೇ ಅನೂರ್ಜಿತಗೊಳಿಸಿತ್ತು.  ಇದು ಘಟನೆಯನ್ನು ಇನ್ನಷ್ಟು ಜಟಿಲಗೊಳಿಸಿ, ಪ್ರಕರಣ ಸುಪ್ರೀಮ್ ಕೋರ್ಟ್ ಮೆಟ್ಟಿಲೇರುವಂತೆ ಮಾಡಿತ್ತು. ನಂತರ ಸುಪ್ರೀಮ್ ಕೋರ್ಟ್, ಹಾದಿಯಾ ತನ್ನಿಚ್ಚೆಯಂತೆಯೇ ತಾನು ಮದುವೆಯಾದವರೊಂದಿಗೆ ಬಾಳಬಹುದು ಎಂದು ತೀರ್ಪು ನೀಡಿತ್ತು.

ಆದರೆ NIA ಮಾತ್ರ ತನ್ನ ಗುರಿ ಸಾಧಿಸಲು ‘ಲವ್ ಜಿಹಾದ್’ ಎಂಬ ಇನ್ನೊಂದು ಅಸ್ತ್ರದೊಂದಿಗೆ ರಂಗಕ್ಕಿಳಿದಿತ್ತು.  ಅದಕ್ಕಾಗಿ ಹಾದಿಯಾರ ಮದುವೆಯನ್ನೇ ತನ್ನ ಪ್ರಮುಖ ದಾಳವನ್ನಾಗಿಸಿತ್ತು. ಆದರೆ ಇದೀಗ NIA ಇದರಲ್ಲಿ ವಿಫಲವಾಗಿದ್ದು ಮಾತ್ರವಲ್ಲ, ‘ಲವ್ ಜಿಹಾದ್’ ಎಂಬುದೊಂದಿಲ್ಲ ಎಂದು ಸ್ಪಷ್ಟಪಡಿಸಿದೆ. “ನಾವು ಪರೀಕ್ಷಿಸಿದ 11 ಪ್ರಕರಣಗಳಲ್ಲಿ ಒಂದು ಮಾತ್ರ ಸಂಬಂಧ ಹಾಳಾದ ಕಾರಣವಿದ್ದರೆ, ಉಳಿದದ್ದರಲ್ಲಿ ಕೆಲವು ಪ್ರಕರಣಗಳಲ್ಲಿ PFI ಯೊಂದಿಗೆ ಸಂಬಂಧ ಹೊಂದಿದ ಸಂಘಟನೆ, ಇಸ್ಲಾಮಿಗೆ ಮತಾಂತರವಾಗಲು ಬಯಸಿದ ಪುರುಷ ಅಥವಾ ಮಹಿಳೆಯರಿಗೆ ಸಹಾಯ ಮಾಡಿದ್ದು ಕಂಡು ಬಂದಿದೆಯಾದರೂ, ಇದಕ್ಕಾಗಿ PFI ಯನ್ನು ಕಾನೂನು ಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯಿದೆ (UAPA) ಯಂತಹ NIA ಯ ನಿಗದಿತ ಅಪರಾಧಗಳ ಅಡಿಯಲ್ಲಿ ಈ ವ್ಯಕ್ತಿಗಳಿಗೆ ವಿರುದ್ಧವಾಗಿ ಔಪಚಾರಿಕ ಆರೋಪಗಳನ್ನು ತರಲು ಯಾವುದೇ ಸಮರ್ಥನೀಯ ಪುರಾವೆಗಳನ್ನು ನಾವು ಕಂಡುಕೊಂಡಿಲ್ಲ” ಎಂದು ಅದೇ NIA  ಹಿರಿಯ ಅಧಿಕಾರಿ ತಿಳಿಸಿದ್ದಾರೆ.

To Top
error: Content is protected !!
WhatsApp chat Join our WhatsApp group