ನಿಮ್ಮ ಬರಹ

ಅಫ್ನಾನ್ : ಮರಣಕ್ಕೆ ಕಾರಣವೊಂದೇ… ಮರೆಯದಿರಲು ಹಲವು…

ಬರಹ :  ಫಯಾಝ್ ಎನ್

ಅಫ್ನಾನ್ ಮರಣದ ದುಃಖದಿಂದ ಯಾರೂ ಹೊರಬಂದಿಲ್ಲ. ತಮ್ಮ ಮನಸ್ಸಿನ ದುಃಖ ಭಾರ ಇಳಿಸಲು ಹಲವರು ಆತನ ಬಗ್ಗೆ ವಾಟ್ಸಪ್ ಮೆಸೇಜ್ ಕಳುಹಿಸಿದರು, ಇನ್ನು ಕೆಲವರು ಹಾಡು ರಚಿಸಿದರು, ಮತ್ತೆ ಕೆಲವರು ನೆನಪಿನ ಫೋಟೋ ಶೇರ್ ಮಾಡಿದರು. ಮನಸ್ಸಿನ ಭಾರ ಇಳಿಸಲು ಎಷ್ಟೇ ಪ್ರಯತ್ನಪಟ್ಟರೂ ಅಷ್ಟು ಸುಲಭದಲ್ಲಿ ಮರೆಯುವಂಥ ವ್ಯಕ್ತಿತ್ವವಲ್ಲ ಅಫ್ನಾನ್ ಹಂಝರದ್ದು. ಬರಹಕ್ಕಿಳಿಸದೆ ಮನಸ್ಸು ಹಗುರಗೊಳಿಸಲು ಈಗ ನನ್ನ ಬಳಿ ಬೇರೆ ಮಾರ್ಗವೇ ಉಳಿದಿಲ್ಲ.

ಸಂಪ್ರದಾಯಸ್ಥ ಮನೆಯಲ್ಲಿ ಹುಟ್ಟಿ, ಜನರ ನಡುವೆ ಬೆಳೆದು, ಸಮಾಜಮುಖಿ ಜೀವನ ನಡೆಸಿ ಜನಮಾನಸದಲ್ಲಿ ಅಮರನಾಗಿ ಉಳಿಯುವಂತಾಗಲು ಆತ್ಮೀಯ ಸಹೋದರ ಹಂಝ ಅಫ್ನಾನ್ ವ್ಯಯಿಸಿದ್ದು ಬರೇ 40 ವರ್ಷ! ಮಾನವೀಯತೆಯನ್ನೇ ಚಟವನ್ನಾಗಿಸಿಕೊಂಡ ಬೆರಳೆಣಿಕೆಯ ಮಂದಿಯಲ್ಲಿ ಅಫ್ನಾನ್ ಕೂಡಾ ಒಬ್ಬ. “ನ್ಯಾಯಪರವಾದ ಮಾತುಗಳನ್ನೇ ಆಡಿರಿ” ಎಂಬ ಕುರ್ ಆನ್ ವಚನ ಅಫ್ನಾನ್ ರ ಫೇಸ್ ಬುಕ್ ಸ್ಟೇಟಸ್ ಮಾತ್ರವಾಗಿರಲಿಲ್ಲ; ಆತ ಆಯ್ದುಕೊಂಡ ಜೀವನ ಮಾರ್ಗ ಅದೇ ಆಗಿತ್ತು.

ವ್ಯಕ್ತಿಯೊಬ್ಬರಿಗೆ ವಿದ್ಯುತ್ ಆಘಾತವಾದರೆ ಅವರನ್ನು ಸ್ಪರ್ಶಿಸಿದವರಿಗೆ ಮಾತ್ರ ವಿದ್ಯುತ್ ಶಾಕ್ ಹೊಡೆಯುತ್ತದೆ. ಅಫ್ನಾನ್ ರ ಮರಣ ಸಂಭವಿಸಿರುವುದು ಕೂಡ ವಿದ್ಯುತ್ ಆಘಾತದಿಂದ. ಇಲ್ಲಿ ವ್ಯತ್ಯಾಸವಿಷ್ಟೇ…ಅಫ್ನಾನ್ ರನ್ನು ಸ್ಪರ್ಶಿಸದೆಯೇ ಕೇವಲ ಮರಣ ಸುದ್ದಿಯೇ ಸಹಸ್ರಾರು ಮಂದಿಗೆ ಏಕಕಾಲದಲ್ಲಿ ಆಘಾತವುಂಟು ಮಾಡಿದೆ. ನಾಡಿನಾದ್ಯಂತ ಶೋಕ ಮಡುಗಟ್ಟಿದೆ. ಕಣ್ಣಂಚಿನಿಂದ ನೀರು ತೊಟ್ಟಿಕ್ಕುತ್ತಿದೆ. ಕೈಗಳು ಸಹೋದರನಿಗಾಗಿ ಅಲ್ಲಾಹನಲ್ಲಿ ಯಾಚಿಸುತ್ತಿವೆ… ಸಾಮಾಜಿಕ ಜಾಲತಾಣದಲ್ಲಿ ಆತನ ಬಗೆಗಿನ ಗುಣಗಾನ ಕಂಡು ಹಲವರು ಆತನ ಬಗ್ಗೆ ಅರಿಯಲು ಪ್ರಾರಂಭಿಸಿದ್ದಾರೆ.

ಮೊನ್ನೆ ಧಾರ್ಮಿಕ ಪ್ರವಚನವೊಂದನ್ನು ಕೇಳಿದ್ದೆ. ಅಫ್ನಾನ್ ಕೂಡ ಕೇಳಿದ್ದ. ಪ್ರವಾದಿ (ಸ. ಅ.) ರ ಬಳಿ ಸಹಾಬಿಯೊಬ್ಬರು ಕೇಳಿದರು “ಪಾಪ ಮತ್ತು ಪುಣ್ಯ ಎಂದರೇನು? ”
ಪ್ರವಾದಿ (ಸ. ಅ.) ಉತ್ತರಿಸಿದರು “ಉತ್ತಮ ಸ್ವಭಾವವೇ ಪುಣ್ಯ. ನಾವು ಮಾಡುವ ಕರ್ಮವನ್ನು ಇತರರು ನೋಡುವುದರಿಂದ ಭಯ ಪಡುವಂತಾದರೆ, ಅಂತಹ ಕರ್ಮಗಳಿಂದ ನಮಗೆ ಆರೋಪಿ ಭಾವನೆ ಮಾಡುವುದಾದರೆ ಅದೇ ಪಾಪ”. ಅಫ್ನಾನ್ ಓರ್ವ ಅತ್ಯುತ್ತಮ ಸ್ವಭಾವದವ ಎಂದು ಊರಿಡೀ ಕೊಂಡಾಡುತ್ತಿರುವಾಗ ಆತ ಅದೆಷ್ಟು ಪುಣ್ಯವಂತನಲ್ಲವೇ?!

ಇಷ್ಟಕ್ಕೂ ಅಫ್ನಾನ್ ಆಯ್ಕೆ ಮಾಡಿಕೊಂಡ ಹೋರಾಟ ಮಾರ್ಗ ಅಷ್ಟು ಸುಲಭದ್ದಾಗಿರಲಿಲ್ಲ. ಮಾನವೀಯತೆಯನ್ನು ಚಟವನ್ನಾಗಿಸಿದ್ದರಿಂದಲೇ ಅಫ್ನಾನ್ ಫ್ಯಾಷಿಸಮ್ ವಿರುದ್ಧ ಹೋರಾಟಕ್ಕಿಳಿದ್ದ. ಹಸಿವು ಮುಕ್ತ – ಭಯಮುಕ್ತ ಸಮಾಜ ನಿರ್ಮಾಣ ಮಾಡಬೇಕು ಎಂಬುದು ಆತನ ಕನಸಾಗಿತ್ತು. ಆತನ ದೂರದೃಷ್ಟಿ ಮತ್ತು ವೈಚಾರಿಕ ಬದ್ಧತೆ ಸದಾ ಜನರ ನಡುವೆ ಓಡಾಡಿಕೊಂಡಿರಲು ಅಫ್ನಾನ್ ರನ್ನು ನಿರ್ಬಂಧಿಸಿತ್ತು. ಇವತ್ತು ಅಫ್ನಾನ್ ರ ಮರಣಕ್ಕೆ ಕಂಬನಿ ಮಿಡಿಯುತ್ತಿರುವವರಲ್ಲಿ ಎಲ್ಲ ಜಾತಿ, ಧರ್ಮ, ಪಂಗಡದವರೆಲ್ಲರೂ ಇದ್ದಾರೆ. ಒಡನಾಡಿಯೊಬ್ಬರು ಹುಟ್ಟಿದ ತನ್ನ ಮಗುವಿಗೆ ಅಫ್ನಾನ್ ಹಂಝ ಹೆಸರನ್ನಿಟ್ಟಿದ್ದಾರೆ. 40ರ ಹರೆಯದ ಯುವಕ ಇಷ್ಟು ಮಾತ್ರಕ್ಕೂ ಪ್ರೀತಿ ಸಂಪಾದಿಸಲು ಹೇಗೆ ಸಾಧ್ಯವಾಯಿತು ಎಂಬುದಕ್ಕೆ ಆತ ಬದುಕಿದ ಬಾಳಿದ ರೀತಿಯೇ ಇಂದು ನಮ್ಮ ಮುಂದೆ ಸಾಕ್ಷಿಯಾಗಿ ನಿಂತಿದೆ.

ಫಯಾಝ್ ಎನ್.

To Top
error: Content is protected !!
WhatsApp chat Join our WhatsApp group