ರಾಷ್ಟ್ರೀಯ ಸುದ್ದಿ

‘ಅಚ್ಚೇ ದಿನ್’ ವಂಚನೆ: ಮೋದಿ ತದ್ರೂಪಿಗೆ ಸಾರ್ವಜನಿಕರಿಂದ ಥಳಿತ!!

2014ರಲ್ಲಿ ಬಿಜೆಪಿ ಪರ ಪ್ರಚಾರ ಮಾಡಿದ ‘ಪಾಪ’ಕ್ಕೆ ಕಾಂಗ್ರೆಸ್ ಸೇರುವ ಮೂಲಕ ‘ಪ್ರಾಯಶ್ಚಿತ’ ಮಾಡಲು ತೀರ್ಮಾನ

ಬಿಜೆಪಿ ಪರ ಪ್ರಚಾರ ಮಾಡಿದ್ದಕ್ಕಾಗಿ ಸಾರ್ವಜನಿಕರಿಂದ ಶಾಪ, ವಸ್ತ್ರಹರಣ ಹಾಗೂ ಥಳಿತ ಸಹಿಸಲಾರದೆ ಪಕ್ಷ ಬದಲಾವಣೆ

ವರದಿಗಾರ (ಅ.14): 2014 ಲೋಕಸಭಾ ಚುನಾವಣೆ ಹಾಗೂ 2015ರ ದೆಹಲಿ ವಿಧಾನಸಭೆಯ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ಮಾಡಿದ್ದ ಮೋದಿ ತದ್ರೂಪಿ, ಮೋದಿಯ ಕಟ್ಟಾ ಅಭಿಮಾನಿ, ಉತ್ತರ ಪ್ರದೇಶದ ಅಭಿನಂದನ್ ಪಾಠಕ್ ಇದೀಗ ತನ್ನ ತಪ್ಪಿಗೆ ಬೆಲೆ ತೆರುತ್ತಿದ್ದಾರೆ.

2014 ರಲ್ಲಿ ಬಿಜೆಪಿ ಪರ ಪ್ರಚಾರದಲ್ಲಿ ಪ್ರಥಮ ಪಂಕ್ತಿಯಲ್ಲಿ ನಿಂತು ‘ಅಚ್ಚೇ ದಿನ್’ ಭರವಸೆ ನೀಡಿದ್ದ ಅಭಿನಂದನ್ ಪಾಠಕ್ ಗೆ ಇದೀಗ ಸಾರ್ವಜನಿಕರು ಕಂಡ – ಕಂಡಲ್ಲಿ ಶಪಿಸುತ್ತಿದ್ದಾರೆ ಹಾಗೂ ಅವರ ಉಟ್ಟ ವಸ್ರ್ತವನ್ನು ಹರಿಯುತ್ತಾರೆ, ಕೆಲವೊಮ್ಮೆ ಥಳಿಸುತ್ತಾರೆ. ಇದರಿಂದ ಬೇಸತ್ತ ಅಭಿನಂದನ್, ಬಿಜೆಪಿ ಪರ ಪ್ರಚಾರ ಮಾಡಿದ ತನ್ನ ತಪ್ಪಿಗೆ ಕಾಂಗ್ರೆಸ್ ಸೇರುವ ಮೂಲಕ ಪ್ರಾಯಶ್ಚಿತ ಮಾಡಲು ತೀರ್ಮಾನಿಸಿದ್ದಾರೆ.

ಈಗಾಗಲೇ ಉತ್ತರ ಪ್ರದೇಶದ ಕಾಂಗ್ರೆಸ್ ನಾಯಕ ರಾಜ್ ಬಬ್ಬರ್ ರನ್ನು ಭೇಟಿ ಮಾಡಿರುವ 55 ವರ್ಷ ಹರೆಯದ ಅಭಿನಂದನ್, 2019ರ ಚುನಾವಣೆಯಲ್ಲಿ ಬಿಜೆಪಿಯ ವಿರುದ್ಧ ಹಾಗೂ ಕಾಂಗ್ರೆಸ್ ಪರ ಪ್ರಚಾರ ನಡೆಸಲು ತೀರ್ಮಾನಿಸಿದ್ದಾರೆ. ಅವರನ್ನು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಜೊತೆ ಭೇಟಿ ಮಾಡಿಸುವ ಭರವಸೆಯನ್ನು ರಾಜ್ ಬಬ್ಬರ್ ನೀಡಿದ್ದಾರೆ.

ಅದಾಗ್ಯೂ,ತಾನು ನರೇಂದ್ರ ಮೋದಿಯವರಿಂದ ಬೇಸತ್ತಿಲ್ಲ, ಬಿಜೆಪಿಯ ಕಾರ್ಯ ವೈಖರಿಯಿಂದ ಬೇಸತ್ತು ಈ ತೀರ್ಮಾನ ಕೈಗೊಂಡಿರುವುದಾಗಿ ಅಭಿನಂದನ್ ತಿಳಿಸಿದ್ದಾರೆ.

ವೀಡಿಯೋ ವೀಕ್ಷಿಸಿ:

ಅವರು, ಇತ್ತೀಚೆಗೆ ನಡೆದ ಗೋರಖ್ಪುರದ ಉಪಚುನಾವಣೆಯಲ್ಲೂ ಬಿಜೆಪಿ ಪರ ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ದೆಹಲಿ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಪರ ಪ್ರಚಾರ ನಡೆಸುತ್ತಿದ್ದ ಅಭಿನಂದನ್, ತಾನು ಮೋದಿಯನ್ನು ತನ್ನ ರಾಮನ ಹಾಗೆ ಕಾಣುತ್ತಿರುವೆನೆಂದೂ,ತಾನು ಮೋದಿಯ ಲಕ್ಷ್ಮಣನೆಂದೂ ಹೇಳಿದ್ದರು.

ಒಬಾಮಾ ಭೇಟಿಯಲ್ಲಿ ವ್ಯಸ್ತರಾಗಿದ್ದ ಮೋದಿಯ ಅನುಪಸ್ತಿತಿಯಲ್ಲಿ ತಾನು ಪ್ರಚಾರದಲ್ಲಿ ಅವರ ಸ್ಥಾನವನ್ನು ಅಲಂಕರಿಸುತ್ತಿದ್ದೇನೆಂದೂ ಹೇಳಿದ್ದರು.

ಆದರೆ, ಇದೀಗ ಪಕ್ಷವು ಸಾಮಾನ್ಯ ಪ್ರಜೆಯ ಮನಸ್ಸಿನ ಮಾತನ್ನು ಕೇಳದೆ ತಮ್ಮದೇ ‘ಮನ್ ಕೀ ಬಾತ್’ ಬಲವಂತವಾಗಿ ಕೇಳಿಸುತ್ತಿದ್ದಾರೆಂದು ಆರೋಪಿಸಿದ್ದಾರೆ.

To Top
error: Content is protected !!
WhatsApp chat Join our WhatsApp group