ರಾಜ್ಯ ಸುದ್ದಿ

ಹಿಂದುತ್ವ ಸಿದ್ಧಾಂತವನ್ನು ಪ್ರತಿರೋಧಿಸದವ ನಿಜವಾದ ಜಾತ್ಯಾತೀತನಾಗಲಾರ: ರಿಯಾಝ್ ಫರಂಗಿಪೇಟೆ

ದೇಶದ ಪ್ರಜಾಪ್ರಭುತ್ವವನ್ನು ರಕ್ಷಿಸಬೇಕಾದ  ಹೊಣೆಗಾರಿಕೆ ನಮ್ಮ ಮೇಲಿದೆ

ಸತ್ಯಾಸತ್ಯತೆಯನ್ನು ಪ್ರತಿಪಾದಿಸುತ್ತಿರುವ ಮಾಧ್ಯಮಗಳೂ ಅಪಾಯದಲ್ಲಿದೆ

ವರದಿಗಾರ (ಅ.01): ಹಿಂದೂ ಮತ್ತು ಹಿಂದುತ್ವ ಬೇರೆ ಬೇರೆಯಾಗಿದ್ದು, ಹಿಂದೂ ಧರ್ಮವು ಸಮಾಜದಲ್ಲಿ ಶಾಂತಿ ಮತ್ತು ಸಹಬಾಳ್ವೆ, ಸೌಹಾರ್ದತೆಯನ್ನು ಬಯಸುತ್ತದೆ. ಆದರೆ ಹಿಂದುತ್ವವು ಹಿಂದೂ ಧರ್ಮವನ್ನು ಗುತ್ತಿಗೆ ಪಡೆದಂತೆ ವರ್ತಿಸುತ್ತಾ ಸಮಾಜದಲ್ಲಿ ದ್ವೇಷವನ್ನು ಸೃಷ್ಟಿಸಿ ಜನರ ನಡುವೆ ಒಡಕನ್ನುಂಟು ಮಾಡಲು ಪ್ರಯತ್ನಿಸುತ್ತಿದೆ ಹಾಗಾಗಿ ಹಿಂದುತ್ವ ಸಿದ್ಧಾಂತವನ್ನು ಪ್ರತಿರೋಧಿಸದವ ನಿಜವಾದ ಜಾತ್ಯಾತೀತನಾಗಲಾರ ಎಂದು ಎಸ್.ಡಿ.ಪಿ.ಐ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಹೇಳಿದ್ದಾರೆ.

ಅವರು ಬೆಂಗಳೂರಿನ ಗಾಂಧಿನಗರದ ಹೋಟೆಲ್ ಚಿಕನ್ ಕೌಂಟಿ ಸಭಾಂಗಣದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕರಾವಳಿ ಡಿವಿಶನ್ ಹಮ್ಮಿಕೊಂಡಿದ್ದ ‘ಈದ್ ಮಿಲನ್ ಸ್ನೇಹ ಸಮ್ಮಿಲನ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ದೇಶದ ಪ್ರಜಾಪ್ರಭುತ್ವವು ಅಪಾಯದಲ್ಲಿದೆ ಎಂದು ಸುಪ್ರೀಂ ಕೋರ್ಟಿನ ನ್ಯಾಯಾಧೀಶರೇ ಮಾಧ್ಯಮಗಳ ಮುಂದೆ ಹೇಳುತ್ತಿರುವುದು ದೇಶದ ಇತಿಹಾಸದಲ್ಲೇ ಪ್ರಥಮ. ಅದ್ದರಿಂದ ಈ ಸಮಾಜದ ಮೇಲೆ ದೇಶದ ಪ್ರಜಾಪ್ರಭುತ್ವವನ್ನು ರಕ್ಷಿಸಬೇಕಾದ  ದೊಡ್ಡದಾದ ಹೊಣೆಗಾರಿಕೆಯಿರುವುದರಿಂದ ಪಕ್ಷ ಬೇಧ ಮರೆತು ಎಲ್ಲರೂ ಐಕ್ಯತೆಯಿಂದ ವಿವಿಧತೆಯಲ್ಲಿ ಏಕತೆಯನ್ನು ಸಾರಿದ ಭವ್ಯ ಭಾರತವನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ.

ಹಿಂಬಾಗಿಲಿನ ಮೂಲಕ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಜಾರಿಗೆ ತರಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು ಮೂಲಭೂತ ಹಕ್ಕುಗಳನ್ನು ದಮನಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ದೇಶದಲ್ಲಿ ಮುಕ್ತವಾಗಿ ಮಾತನಾಡುವ ಹಕ್ಕನ್ನು ಕಸಿಯಲಾಗುತ್ತಿದೆ. ಇತ್ತೀಚೆಗೆ ಮಂಗಳೂರಿನ ಯುವಕನೊಬ್ಬ ಸಾಮಾಜಿಕ ತಾಣದಲ್ಲಿ ಕೇವಲ ಒಂದು ಸ್ಟೇಟಸ್ ಹಾಕಿದ್ದಾನೆ ಎಂಬ ಆರೋಪದಲ್ಲಿ ಬಂಧಿಸಿ ಆತನ ಮೇಲೆ ಸ್ವತಃ ಪೊಲೀಸರೇ ಹಲ್ಲೆ ನಡೆಸುತ್ತಾರೆ. ದೇಶದಲ್ಲಿರುವ ಅಸಹಿಷ್ಣುತೆಯನ್ನು ಪ್ರಶಿಸುತ್ತಿದ್ದ ಮಾಜಿ ಪೊಲೀಸ್ ಅಧಿಕಾರಿ ಸಂಜೀವ್ ಭಟ್ ರವರ ಮೇಲೆ 22 ವರ್ಷಗಳ ಹಿಂದಿನ ಪ್ರಕರಣದಲ್ಲಿ ಬಂಧಿಸಲಾಗಿದೆ.  ಇದೆಲ್ಲವೂ ದೇಶದಲ್ಲಿ ಮುಕ್ತವಾಗಿ ಮಾತನಾಡುವ ಹಕ್ಕನ್ನು ಕಸಿಯಲಾಗುತ್ತಿರುವುದಕ್ಕೆ ಸ್ಪಷ್ಟ ಉದಾಹರಣೆಯಾಗಿದ್ದು ಸತ್ಯತೆಯನ್ನು ಪ್ರತಿಪಾದಿಸುತ್ತಿರುವ ಮಾಧ್ಯಮಗಳು ಅಪಾಯದಲ್ಲಿದೆ ಎಂದು ಅವರು ಹೇಳಿದ್ದಾರೆ.

ವೇದಿಕೆಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿ ಸದಸ್ಯ ಎ.ಕೆ. ಅಶ್ರಫ್, ಬೆಂಗಳೂರು ಜಿಲ್ಲಾಧ್ಯಕ್ಷ ವಾಜಿದ್ ಖಾನ್, ಕರಾವಳಿ ಡಿವಿಶನ್ ಅಧ್ಯಕ್ಷ ಸಯ್ಯೆದ್ ಸುಲ್ತಾನ್, ಡಿವಿಶನ್ ಸಮಿತಿ ಸದಸ್ಯ ಹಾಜಿ ಹುಸೈನ್ ಸಿರಾಜ್ ಉಪಸ್ಥಿತರಿದ್ದರು.

ಹುಸೈನ್ ಸಿರಾಜ್ ಸ್ವಾಗತಿಸಿ, ಸಮಿತಿ ಸದಸ್ಯ ಹಾರಿಸ್ ಸುನ್ನತ್ ಕರೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

 

To Top
error: Content is protected !!
WhatsApp chat Join our WhatsApp group