ರಾಜ್ಯ ಸುದ್ದಿ

ಕೇಂದ್ರದ ತಂಡಕ್ಕೆ ತಪ್ಪು ಮಾಹಿತಿ : ಸಂಸದ ಪ್ರತಾಪ್ ಸಿಂಹರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಮಡಿಕೇರಿಯ ಬಿಜೆಪಿ ಮುಖಂಡ !!

ವರದಿಗಾರ (ಸೆ 13) : ಕೊಡಗಿನ ಅತಿವೃಷ್ಟಿ ಹಾನಿ ಪ್ರದೇಶಗಳ ವೀಕ್ಷಣೆಗೆಂದು ಆಗಮಿಸಿರುವ ಕೇಂದ್ರದ ಅಧ್ಯಯನ ತಂಡಕ್ಕೆ ಸಂಸದ ಪ್ರತಾಪ್ ಸಿಂಹ ಅವರು ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಜಿಲ್ಲೆಯ ಹಿರಿಯ ಬಿಜೆಪಿ ಮುಖಂಡ ಎಂ.ಬಿ.ದೇವಯ್ಯ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಸಂಸದ ಪ್ರತಾಪ್ ಸಿಂಹರನ್ನು ಹಿಗ್ಗಾಮುಗಾ ತರಾಟೆಗೆ ತೆಗೆದುಕೊಂಡ ಘಟನೆ ಮಡಿಕೇರಿಯ ಹೆಬ್ಬೆಟ್ಟಗೇರಿ ಬಳಿ ನಡೆದಿದೆ.

ಹೆಬ್ಬಟಗೇರಿ ಪ್ರದೇಶಕ್ಕೆ ಬಂದಿದ್ದ ಸಂಸದ ಪ್ರತಾಪ್ ಸಿಂಹರನ್ನು ಎದುರುಗೊಂಡ ದೇವಯ್ಯರವರು, ‘ಭೂ ಪರಿವರ್ತನೆ ಕುರಿತು ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡುತ್ತಿದ್ದೀರಿ, ನೀವು ನಮ್ಮ ಪಕ್ಷದ ಎಂಪಿ, ಜನರ ಜೊತೆ ಚರ್ಚೆ ಮಾಡಿ ಮಾತನಾಡಬೇಕಾಗಿತ್ತು. ಎಲ್ಲರನ್ನು ಒಕ್ಕಲೆಬ್ಬಿಸುವ ಪ್ರಯತ್ನ ಮಾಡುತ್ತಿದ್ದೀರ, ಜನಪ್ರತಿನಿಧಿಗಳು ಜನಪ್ರತಿನಿಧಿಗಳಾಗಿ ಇರಬೇಕೇ ಹೊರತು ಜನರಿಗೆ ತೊಂದರೆ ನೀಡಬಾರದು’ ಎಂದು ಎಂ.ಬಿ.ದೇವಯ್ಯ ಗುಡುಗಿದರು. ನನ್ನ ಈ ನಡೆಯ ವಿರುದ್ಧ ಪಕ್ಷ ಕ್ರಮ ಕೈಗೊಳ್ಳಲು ಮುಂದಾದರೆ ಎದುರಿಸಲು ಸಿದ್ಧನಿದ್ದೇನೆ, ನಿಮ್ಮನ್ನು ನಂಬಿಕೊಂಡು ನಾನು ಪಕ್ಷದಲ್ಲಿಲ್ಲ, ನಿಮ್ಮನ್ನು ನಾವೆಲ್ಲಾ ಗೆಲ್ಲಿಸಿ ಕಳುಹಿಸಿದ್ದೇ ಕೊಡಗಿನ ದುರಂತ ಎಂದು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದರು.

ಇದರಿಂದ ವಿಚಲಿತರಾದ ಪ್ರತಾಪ್ ಸಿಂಹ ಮೊದಲಿಗೆ ಅವರನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದರಾದರೂ ದೇವಯ್ಯರವರ ಕೋಪ ಏರುತ್ತಲೇ ಇರುವುದನ್ನು ಕಂಡ ಸಂಸದ ಪ್ರತಾಪ್ ಸಿಂಹರಿಗೆ ಜಾಗ ಖಾಲಿ ಮಾಡದೆ ವಿಧಿಯಿರಲಿಲ್ಲ. ಕೂಡಲೇ ಜೀಪು ಏರಿ ಅಲ್ಲಿಂದ ತೆರಳಿದರು. ಘಟನಾ ಸ್ಥಳದಲ್ಲಿ ಶಾಸಕ ಅಪ್ಪಚ್ಚು ರಂಜನ್ ಸೇರಿದಂತೆ ಅಲ್ಲಿದ್ದವರು ಸಮಾಧಾನ ಪಡಿಸಲು ಯತ್ನಿಸಿದರೂ ದೇವಯ್ಯ ಅವರು ಮಾತ್ರ ಪ್ರತಾಪ್ ಸಿಂಹ ಅವರ ವಿರುದ್ಧ ಏರಿದ ಧ್ವನಿಯಲ್ಲೇ ಮಾತನಾಡಿ ಸಂಸದರ ಏಕಪಕ್ಷೀಯ ಕ್ರಮಗಳನ್ನು ಬಹಿರಂಗವಾಗಿಯೇ ವಿರೋಧಿಸಿದ್ದು ವೀಡೀಯೋಗಳಲ್ಲಿ ದಾಖಲಾಗಿದೆ.

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group