ರಾಷ್ಟ್ರೀಯ ಸುದ್ದಿ

‘ಬಿಜೆಪಿಯ ಕೇಸರೀಕರಣದ ಕನಸು ಭಗ್ನಗೊಳಿಸುತ್ತೇವೆ’: ಮೊದಲ ಸಭೆಯಲ್ಲೇ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ  ಎಂ.ಕೆ.ಸ್ಟಾಲಿನ್‌

‘ಕೇಂದ್ರ ಬಿಜೆಪಿ ಸರಕಾರ ಕೋಮುವಾದಕ್ಕೆ ಕುಮ್ಮಕ್ಕು ನೀಡುತ್ತಿದೆ’

‘ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯಲು ಯಾವುದೇ ಬೆಲೆ ತೆರಲು ಸಿದ್ಧವಿದ್ದೇವೆ’

ವರದಿಗಾರ (ಸೆ.09): ಡಿಎಂಕೆ ನೂತನ ಸಾರಥಿಯಾಗಿ ಆಯ್ಕೆಯಾದ ನಂತರ ನಡೆದ ಪ್ರಥಮ ಪಕ್ಷದ ಜಿಲ್ಲಾ ಕಾರ್ಯದರ್ಶಿಗಳು, ಸಂಸದರು ಹಾಗೂ ಶಾಸಕರ ಸಭೆ ನಡೆಸಿದ ಪಕ್ಷದ ಮುಖ್ಯಸ್ಥರ ಸಭೆಯಲ್ಲಿ ಮಾತನಾಡಿದ ಎಂ.ಕೆ.ಸ್ಟಾಲಿನ್‌ ‘ಬಿಜೆಪಿಯ ಕೇಸರೀಕರಣದ ಕನಸು ಭಗ್ನಗೊಳಿಸುತ್ತೇವೆ’ ಎಂದು ಹೇಳಿದ್ದಾರೆ.

ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ‘ಚುನಾಯಿತ ಸರ್ವಾಧಿಕಾರ’ ಧೋರಣೆ ತಳೆದಿದೆ ಎಂದು ಅವರು ಹೇಳಿದ್ದಾರೆ.

‘ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯಲು ಯಾವುದೇ ಬೆಲೆ ತೆರಲು ಸಿದ್ಧವಿದ್ದೇವೆ’.ನೋಟು ರದ್ದು, ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದ, ನೀಟ್‌ ಹಾಗೂ ಸದ್ಯದ ಆರ್ಥಿಕ ಪರಿಸ್ಥಿತಿ ಸೇರಿ ಹಲವು ವಿಚಾರಗಳಲ್ಲಿ ಕೇಂದ್ರ ಸರ್ಕಾರ ವೈಫಲ್ಯ ಸಾಧಿಸಿದೆ ಎಂದು ಅವರು ಆರೋಪಿಸಿದರು.

‘ಕೇಂದ್ರ ಸರ್ಕಾರವು ತಮಿಳುನಾಡಿನ ಹಿತಾಸಕ್ತಿ ನಿರ್ಲಕ್ಷಿಸುತ್ತಿದೆ. ಕೋಮುವಾದಕ್ಕೆ ಕುಮ್ಮಕ್ಕು ನೀಡುತ್ತಿದೆ. ಇದರಿಂದ ದೇಶದ ಬಹುತ್ವಕ್ಕೆ ಧಕ್ಕೆಯಾಗುತ್ತಿದೆ. ಅಲ್ಲದೆ, ಬಿಜೆಪಿ ವಿರೋಧಿಸುವವರಿಗೆ ಮತ್ತು ಮಾನವ ಹಕ್ಕುಗಳ ಹೋರಾಟಗಾರರಿಗೂ ರಾಷ್ಟ್ರವಿರೋಧಿಗಳೆಂಬ ಹಣೆಪಟ್ಟಿ ಕಟ್ಟಲಾಗುತ್ತಿದೆ’ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸಂಸದೀಯ ಪ್ರಜಾಪ್ರಭುತ್ವಕ್ಕೆ ‘ಚುನಾಯಿತ ಸರ್ವಾಧಿಕಾರ’ ದೊಡ್ಡ ಸವಾಲು. ಬಿಜೆಪಿ ಚುನಾಯಿತ ಸರ್ವಾಧಿಕಾರವನ್ನು ದೇಶದಲ್ಲಿ ಪ್ರತಿಷ್ಠಾಪಿಸಿದೆ. ಕಳೆದ ನಾಲ್ಕು ವರ್ಷಗಳಿಂದ ಜನವಿರೋಧಿ ಆಡಳಿತ ನಡೆಸಿದೆ. ದಲಿತರು ಮತ್ತು ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಹಲವು ಕಡೆಗಳಲ್ಲಿ ದಾಳಿ ಮಾಡಲಾಗಿದೆ. ಬಿಜೆಪಿ ಸರ್ಕಾರದ ಆಡಳಿತ ಟೀಕಿಸಲು ಮಾಧ್ಯಮಗಳು ‘ಭೀತಿ’ಗೊಂಡಿವೆ ಎಂದು ಹೇಳಿದ್ದಾರೆ.

‘ಬಿಜೆಪಿಯ ಕೇಸರೀಕರಣ ಕನಸುಗಳನ್ನು ತಿರಸ್ಕರಿಸಬೇಕು’ ಎಂಬ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು. ಕೇಂದ್ರದ ವಿರುದ್ಧ ಇದೇ ಸೆ.18ರಂದು ರಾಜ್ಯದಾದ್ಯಂತ ಪ್ರತಿಭಟನೆ ನಡೆಸುವುದಾಗಿ ಸಭೆ ತೀರ್ಮಾನಿಸಿರುವುದಾಗಿ ಮೂಲಗಳು ವರದಿ ಮಾಡಿವೆ.

 

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group