ರಾಷ್ಟ್ರೀಯ ಸುದ್ದಿ

‘ನೆಹರೂ ಸ್ಮಾರಕ ಮ್ಯೂಸಿಯಂನ ಸ್ವರೂಪ, ಲಕ್ಷಣವನ್ನೇ ಬದಲಿಸಲು ಮೋದಿ ಸರ್ಕಾರ ಮುಂದಾಗಿದೆ’: ಮೋದಿ ವಿರುದ್ಧ ಮೌನ ಮುರಿದ ಮಾಜಿ ಪ್ರಧಾನಿ

‘ನೆಹರೂ ದೇಶದ ಆಸ್ತಿ, ಕೇವಲ ಕಾಂಗ್ರೆಸ್‌ಗೆ ಸೇರಿದವರಲ್ಲ’

ವರದಿಗಾರ (ಆ.27): ‘ದೆಹಲಿಯ ತೀನ್‌ಮೂರ್ತಿ ಭವನ್ ಸಂಕೀರ್ಣ ಮತ್ತು ನೆಹರೂ ಸ್ಮಾರಕ ಮ್ಯೂಸಿಯಂನ ಸ್ವರೂಪ ಹಾಗೂ ಲಕ್ಷಣವನ್ನೇ ಬದಲಿಸಲು ಮೋದಿ ಸರ್ಕಾರ ಮುಂದಾಗಿದೆ’ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಗಂಭೀರ ಆರೋಪ ಮಾಡಿದ್ದಾರೆ.

ಈ ಸಂಬಂಧ ಮೋದಿಯವರಿಗೆ ಪತ್ರ ಬರೆದಿರುವ ಅವರು, “ನೆಹರೂ ಕೇವಲ ಕಾಂಗ್ರೆಸ್‌ಗೆ ಸೇರಿದವರಲ್ಲ; ಅವರು ಇಡೀ ದೇಶದ ಆಸ್ತಿ. ಆದ್ದರಿಂದ ತ್ರಿಮೂರ್ತಿ ಭವನಕ್ಕೆ ಯಾವುದೇ ರೀತಿಯಲ್ಲಿ ಧಕ್ಕೆ ಮಾಡಬಾರದು” ಎಂದು ಪತ್ರದಲ್ಲಿ ಮೋದಿಯವರನ್ನು ಅವರು ಒತ್ತಾಯಿಸಿದ್ದಾರೆ.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಆರು ವರ್ಷದ ಅಧಿಕಾರಾವಧಿಯಲ್ಲಿ ಕೂಡಾ ನೆಹರೂ ಸ್ಮಾರಕ ಮತ್ತು ತ್ರಿಮೂರ್ತಿ ಭವನದ ಸ್ವರೂಪ ಬದಲಿಸುವ ಯಾವ ಪ್ರಯತ್ನವೂ ನಡೆದಿರಲಿಲ್ಲ. ಆದರೆ ಈಗ ಅದು ಭಾರತ ಸರ್ಕಾರದ ಕಾರ್ಯಸೂಚಿಯಂತಿದೆ ಎಂದು ಮನಮೋಹನ್ ಸಿಂಗ್ ಆಕ್ಷೇಪಿಸಿದ್ದಾರೆ.

ತೀನ್‌ಮೂರ್ತಿ ಭವನ ಸಂಕೀರ್ಣದಲ್ಲಿ ಎಲ್ಲ ಪ್ರಧಾನಿಗಳ ಮ್ಯೂಸಿಯಂ ನಿರ್ಮಿಸುವ ಕೇಂದ್ರ ಸರ್ಕಾರದ ಯೋಜನೆ ವಿರುದ್ಧ ವಿವಾದ ಹುಟ್ಟಿಕೊಂಡಿರುವ ಹಿನ್ನೆಲೆಯಲ್ಲಿ ಸಿಂಗ್ ಆಕ್ಷೇಪ ವಿಶೇಷ ಮಹತ್ವ ಪಡೆದಿದೆ. ಇದು ನೆಹರೂ ಅವರ ಪರಂಪರೆಯನ್ನು ಅಳಿಸಿ ಹಾಕುವ ಪ್ರಯತ್ನ ಎಂದು ಕಾಂಗ್ರೆಸ್ ಟೀಕಿಸಿದೆ.

To Top
error: Content is protected !!
WhatsApp chat Join our WhatsApp group