ರಾಜ್ಯ ಸುದ್ದಿ

ಗೌರಿ ಹತ್ಯೆ ಬಳಿಕ ರಾಜ್ಯಾದ್ಯಂತ ದೊಡ್ಡ ಸಂಖ್ಯೆಯಲ್ಲಿ ಯುವ ಜನತೆ ಕೋಮುವಾದಿ ಶಕ್ತಿಗಳ ವಿರುದ್ಧ ಬೀದಿಗಿಳಿದಿದ್ದಾರೆ: ಎಚ್.ಎಸ್.ದೊರೆಸ್ವಾಮಿ

ಯುವ ಶಕ್ತಿಯನ್ನು ವೈಚಾರಿಕವಾಗಿ ಸಂಘಟಿತಗೊಳಿಸಬೇಕಿದೆ

ಬಿಜೆಪಿ, ಸಂಘಪರಿವಾರದ ಹತ್ಯಾ ರಾಜಕಾರಣ ವಿರುದ್ಧ ಜನಜಾಗೃತಿ ಅಗತ್ಯ: ಪ್ರೊ.ಚಂದ್ರಶೇಖರ ಪಾಟೀಲ

ಗೌರಿಯನ್ನು ಹತ್ಯೆಗೈದ ಸಂಘಟನೆಯನ್ನು ನಿರ್ಬಂಧಿಸಲು ಒತ್ತಾಯ

ವರದಿಗಾರ (ಆ.06): ಸಾಮಾಜಿಕ ಹೋರಾಟಗಾರ್ತಿ, ಪ್ರಗತಿಪರ ಚಿಂತಕಿ, ಹಿರಿಯ ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಬಳಿಕ ರಾಜ್ಯಾದ್ಯಂತ ದೊಡ್ಡ ಸಂಖ್ಯೆಯಲ್ಲಿ ಯುವ ಜನತೆ ಕೋಮುವಾದಿ ಶಕ್ತಿಗಳ ವಿರುದ್ಧ ಬೀದಿಗಿಳಿದಿದ್ದಾರೆ ಎಂದು ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಹೇಳಿದ್ದಾರೆ.

ಅವರು ಪತ್ರಕರ್ತೆ ಗೌರಿ ಲಂಕೇಶ್ ಕೋಮುವಾದಿ ಶಕ್ತಿಗಳಿಂದ ಹತ್ಯೆಯಾಗಿ ಸೆ.5ಕ್ಕೆ ಒಂದು ವರ್ಷ ಆಗುತ್ತಿರುವ ಹಿನ್ನೆಲೆಯಲ್ಲಿ ಲಂಕೇಶ್ ಗೌರಿ ಬಳಗವು ಬೆಂಗಳೂರಿನ ಸೆಂಟ್ ಜೋಸೆಫ್ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡುತ್ತಿದ್ದರು.

ಗೌರಿ ಹತ್ಯೆ ಬಳಿಕ ದೊಡ್ಡ ಸಂಖ್ಯೆಯಲ್ಲಿ ಯುವ ಜನತೆ ಕೋಮುವಾದಿ ಶಕ್ತಿಗಳ ವಿರುದ್ಧ ಬೀದಿಗಿಳಿದಿದ್ದಾರೆ. ಆ ಯುವ ಶಕ್ತಿಯನ್ನು ವೈಚಾರಿಕವಾಗಿ ಸಂಘಟಿತಗೊಳಿಸಬೇಕಿದೆ ಎಂದು ಎಚ್.ಎಸ್.ದೊರೆಸ್ವಾಮಿ ಸಂಘಟಕರಿಗೆ ಸಲಹೆ ನೀಡಿದ್ದಾರೆ.

ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಮಾತನಾಡಿ, ‘ಬಿಜೆಪಿ ಹಾಗೂ ಸಂಘಪರಿವಾರ ಪ್ರಗತಿಪರರು, ಪತ್ರಕರ್ತರ ಮೇಲೆ ನಡೆಸುತ್ತಿರುವ ಹಲ್ಲೆ ಹಾಗೂ ಹತ್ಯಾ ರಾಜಕಾರಣವನ್ನು ಜನ ಸಾಮಾನ್ಯರಿಗೆ ತಿಳಿಸುವ ಅಗತ್ಯವಿದೆ’ ಎಂದು ಅವರು ಹೇಳಿದ್ದಾರೆ.

ರಾಜ್ಯದಲ್ಲಿ ಗೌರಿ ಲಂಕೇಶ್ ಬಳಗವು ದೊಡ್ಡ ಶಕ್ತಿಯಾಗಿ ಬೆಳೆಯಬೇಕಿದೆ. ಜನಪರ ಚಿಂತನೆಗಳನ್ನು ಜನರಲ್ಲಿ ಜಾಗೃತಿ ಮೂಡಿಸಲು ಬಳಗದ ಎಲ್ಲ ಸದಸ್ಯರು ತೊಡಗಿಸಿಕೊಳ್ಳುವಂತಾಗಬೇಕು. ಈ ನಿಟ್ಟಿನಲ್ಲಿ ಆ.30ರಿಂದ ಸೆ.5ರವರೆಗೆ ನಡಯುವ ಹತ್ಯೆ ರಾಜಕೀಯ ವಿರೋಧಿ ಸಪ್ತಾಹವು ಯುವಶಕ್ತಿಯನ್ನು ಬೆಸೆಯಲಿ ಎಂದು ಹೇಳಿದರು.

ಎಸ್‌ಐಟಿ ಪೊಲೀಸರ ಪ್ರಾಮಾಣಿಕ ಹಾಗೂ ದಕ್ಷ ತನಿಖೆಯಿಂದಾಗಿ ಪತ್ರಕರ್ತೆ ಗೌರಿ ಲಂಕೇಶ್‌ರವರ ಹತ್ಯೆಯ ಆರೋಪಿಗಳು ಬಂಧನಕ್ಕೆ ಒಳಗಾಗಿದ್ದಾರೆ. ಎಸ್‌ಐಟಿ ಪೊಲೀಸ್ ಕಾರ್ಯದಕ್ಷತೆಗೆ ಇಡೀ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆರೋಪಿಗಳು ಯಾವ ಸಂಘಟನೆಗೆ ಸೇರಿದ್ದಾರೆಂಬುದನ್ನು ಖಚಿತಪಡಿಸಿಕೊಂಡು, ಆ ಸಂಘಟನೆಯನ್ನು ನಿರ್ಬಂಧಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಬೇಕಿದೆ ಎಂದು ಅವರು ಹೇಳಿದರು.

ಗೌರಿ ಮೆಮೋರಿಯಲ್ ಟ್ರಸ್ಟ್‌ನ ಪ್ರೊ.ವಿ.ಎಸ್.ಶ್ರೀಧರ್, ಮಾನವ ಹಕ್ಕು ಹೋರಾಟಗಾರ ಪ್ರೊ.ನಗರಗೆರೆ ರಮೇಶ್, ರೈತ ಮುಖಂಡ ವೀರ ಸಂಗಯ್ಯ, ದಲಿತ ಮುಖಂಡ ಎನ್.ವೆಂಕಟೇಶ್, ಗೌರಿ, ದೊಡ್ಡಿಪಾಳ್ಯ ನರಸಿಂಹಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group