ಸಾಮಾಜಿಕ ತಾಣ

ಕೋರ್ದ ಕಟ್ಟ (ಕೋಳಿಯ ಅಂಕ); ಮತ್ತೊಮ್ಮೆ ಸುದ್ದಿಯಾದ ಜಲೀಲ್ ಮುಕ್ರಿಯವರ ಅರ್ಥ ಗರ್ಭಿತ ಕವನ

ವರದಿಗಾರ (ಜು.16): ಕವಿ ಜಲೀಲ್ ಮುಕ್ರಿಯವರು ಸಾಮಾಜಿಕ ತಾಣವಾದ ಪೇಸ್ಬುಕ್ ನಲ್ಲಿ ಬರೆದಿರುವ “ಕೋರ್ದ ಕಟ್ಟ” (ಕೋಳಿಯ ಅಂಕ) ಕವನವು ಸಾಮಾಜಿಕ ತಾಣದಲ್ಲಿ ವೈರಲಾಗುತ್ತಿದ್ದು, ಎಲ್ಲರು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಇತ್ತೀಚೆಗೆಷ್ಟೇ ಅವರ ಬರೆದಿದ್ದ ‘ಶವ ಬೇಕಾಗಿದೆ’ ಕವನವು ರಾಜ್ಯದಲ್ಲಿ ಸುದ್ದಿ ಮಾಡಿತ್ತು. ಹಲವು ಸಂದೇಶಗಳನ್ನು ನೀಡುವ ಅವರ ಕವನವು ಕೋಮುವಾದದಿಂದ ಕೊಳೆತಿರುವ ಮನಸ್ಸುಗಳನ್ನು ಮತ್ತು ರಾಜಕೀಯಕ್ಕಾಗಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ರಾಜಕಾರಣಿಗಳನ್ನು ಕಿವಿ ಹಿಂಡಿ ಎಚ್ಚರಿಸುತ್ತಿದೆ.

ಪ್ರಸ್ತುತ ಸನ್ನಿವೇಶವನ್ನು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ಕವಿ ಜಲೀಲ್ ಮುಕ್ರಿ ಬಹಳ ಸುಂದರ ಶೈಲಿಯಲ್ಲಿ ವರ್ಣಿಸಿದ್ದಾರೆ.

‘ಕೋರ್ದ ಕಟ್ಟ’ ಎಂಬುವುದು ತುಳು ಭಾಷೆಯ ಶಬ್ದವಾಗಿದೆ.

ನಾನು ಅಂಕದ ಕೋಳಿ
ನೀನು ಅಂಕದ ಕೋಳಿ
ಪ್ರಜಾಪ್ರಭುತ್ವ ಜಾತ್ರೆಯಲ್ಲಿ
ನಾನು ಅವನೂ ಅಂಕದ ಕೋಳಿ….
ನಮ್ಮನ್ನು ಹೊಡೆದಾಡಿಸುವುದು ಅವರ ಚಾಳಿ..

ಕಟ್ಟಿರುವರು
ಕಾಲಿಗೆ ಧರ್ಮ ಜಾತಿ
ವರ್ಣ ವರ್ಗಗಳ ಹರಿತವಾದ ಕತ್ತಿ…
ಮತಾಂಧತೆಯ ಹೆಸರಲ್ಲಿ ಆಡಿಸುವರು ನಮ್ಮನ್ನೆತ್ತಿ…..

ಅಲ್ಲಲ್ಲಿ ಬೀಳುತಿಹುದು
ರಕ್ತ ಸಿಕ್ತ ಹೆಣಗಳ ರಾಶಿ
ಕಂಡುಕೊಳ್ಳುವರವರು ವಿಕೃತ ಖುಷಿ…..

ಗೆದ್ದ ಹುಂಜದೊಡೆಯನಿಗೆ
ಸೋತ ಹುಂಜದ ಭೂರೀ ಭೋಜನ
ಕೊಂದ ಕೋಳಿಯ ಆಕ್ರಂದನ
ಗೆದ್ದ ಮಾಲಕನ ಸಂಭ್ರಮಿಸುತ್ತದೆ ಧನ ಮನ…

ಕೋಳಿ ಅಂಕದಿ ಕೊಲ್ಲಲು
ಐದು ವರುಷಗಳ ತರಬೇತಿ
ಇದಕ್ಕಾಗಿ ತುಂಬುವರು ವಿಷ
ಹಿಂದೂ ಮುಸ್ಲಿಮ್ ಧರ್ಮ ಜಾತಿ….

ಕೊಚ್ಚಿ ಇರಿದು ಕೊಲ್ಲಲು
ನನಗೂ ಅವನಿಗೂ ನೀಡಿದ್ದಾರೆ
ಕೋಮುವಾದದ ಅಫೀಮು
ಗಾಯಗೊಂಡಾಗ ಸತ್ತಾಗ 
ಗಾಳಿ ಹಾಕಲು ಹೊಲಿಯಲು
ಆಸ್ಪತ್ರೆಗೆ ಧಾವಿಸುವ ತಾಲೀಮು….

ಗೆಲ್ಲುವ ಕೋಳಿಯ
ಹುರಿದುಂಬಿಸುವರು
ಕತ್ತಿಯ ಮತ್ತಷ್ಟು ಹರಿತಗೊಳಿಸುವರು..
ಕತ್ತಿಯ ಬಿಗಿಯಾಗಿ ಕಟ್ಟಿ ಕೇಕೆ ಹಾಕುವರು…

ಆ ಪಕ್ಷದ ನಾಯಕರೂ ಗೆಲ್ಲುವರು
ಈ ಪಕ್ಷದ ನಾಯಕರೂ ಗೆಲ್ಲುವರು
ಅಂಕದ ಕೋಳಿಗಳಾದ ನಾವು
ರಕ್ತ ಹರಿಸಿ ವಿಲವಿಲ ಒದ್ದಾಡುವವರು….

 

 

 

To Top
error: Content is protected !!
WhatsApp chat Join our WhatsApp group