ರಾಜ್ಯ ಸುದ್ದಿ

ಬಿಜೆಪಿಯವರ ಅಪಪ್ರಚಾರಕ್ಕೆ ಪ್ರತಿರೋಧ ನೀಡದಿರುವುದೇ ಕಾಂಗ್ರೆಸ್ ಸೋಲಿಗೆ ಕಾರಣ : ಸಿದ್ದರಾಮಯ್ಯ

ವರದಿಗಾರ- ಜು.11: ಇತ್ತೀಚೆಗೆ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಅಪಪ್ರಚಾರಕ್ಕೆ ಪ್ರತಿರೋಧ ನೀಡದಿರುವುದೇ ಕಾಂಗ್ರೆಸ್ ಸೋಲಿಗೆ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಅವರು ಬೆಂಗಳೂರಿನ ಅರಮನೆ ಮೈದಾನದಲ್ಲಿ ಕೆಪಿಸಿಸಿ ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮಾತನಾಡುತ್ತಾ, ಐದು ವರ್ಷ ನಮ್ಮ ಸರ್ಕಾರ ಜನಪರವಾದ ಆಡಳಿತವನ್ನು ನೀಡಿತ್ತು. ಜನ ಮತ್ತೆ ನಮ್ಮನ್ನು ಅಧಿಕಾರಕ್ಕೆ ತರುತ್ತಾರೆ ಎಂಬ ವಿಶ್ವಾಸವಿತ್ತು. ಆದರೆ ಬಿಜೆಪಿಯ ಅಪಪ್ರಚಾರದಿಂದ ಅದು ಸಾಧ್ಯವಾಗಲಿಲ್ಲ ಎಂದು ತಮ್ಮ ಚುನಾವಣಾ ತಪ್ಪಿನ ಬಗ್ಗೆ ಆತ್ಮಾವಲೋಕನದ ಮಾತನ್ನಾಡಿದ್ದಾರೆ.

ಬಿಜೆಪಿಯವರು 30 ಜನ ಮತದಾರರಿಗೆ ಒಬ್ಬ ಕಾರ್ಯಕರ್ತನನ್ನು ನೇಮಿಸಿ ಕಾಂಗ್ರೆಸ್ ವಿರುದ್ಧ ಹಾಗೂ ಹಿಂದುತ್ವದ ಕುರಿತು ಮನೆ ಮನೆಗೆ ಹೋಗಿ ಸುಳ್ಳು ಪ್ರಚಾರಗಳನ್ನು ಮಾಡಿದರು. ಈ ಅಪಪ್ರಚಾರಕ್ಕೆ ಪ್ರತಿಯಾಗಿ ಸತ್ಯ ಹೇಳಿ ಜನರಿಗೆ ಮನವರಿಕೆ ಮಾಡಿಕೊಡುವಲ್ಲಿ ಕಾಂಗ್ರೆಸ್ ವಿಫಲವಾಯಿತು ಎಂಬ ಸತ್ಯಾಂಶವನ್ನು ಅವರು ಹೇಳಿಕೊಂಡಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿರುವುದಕ್ಕೆ ಯಾರನ್ನು ಹೊಣೆ ಮಾಡುವುದಿಲ್ಲ. ನಮ್ಮ ಸೋಲಿಗೆ ಬಿಜೆಪಿಯವರ ಅಪಪ್ರಚಾರವೇ ಪ್ರಮುಖ ಕಾರಣ ಎಂದು ಹೇಳಿ ಕೈ ತೊಳೆದುಕೊಂಡಿದ್ದಾರೆ.

ಆದರೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಈ ನಡವಳಿಕೆಗೆ ಅವಕಾಶ ನೀಡಬಾರದು ಎಂದೂ ಕರೆ ನೀಡಿದ್ದಾರೆ. ಮನೆ ಮನೆಗೆ ತೆರಳಿ ಪ್ರಚಾರ ಮಾಡಬೇಕು. ಐದು ವರ್ಷ ಕಾಂಗ್ರೆಸ್ ಆಡಳಿತವನ್ನು ಜನ ಮತ್ತೆ ನೆನೆಪಿಸಿಕೊಳ್ಳುತ್ತಾರೆ. ನಮಗೆ ಅವಕಾಶ ಕೊಟ್ಟೇ ಕೊಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 28 ಲೋಕಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ 20 ಕ್ಷೇತ್ರಗಳನ್ನು ಗೆಲ್ಲುವ ಗುರಿ ಹೊಂದಬೇಕು. ಅದಕ್ಕಾಗಿ ಎಲ್ಲರೂ ಒಂದಾಗಿ ಕೆಲಸ ಮಾಡಬೇಕೆಂದು ಅವರು ಸಲಹೆ ನೀಡಿದ್ದಾರೆ.

To Top
error: Content is protected !!
WhatsApp chat Join our WhatsApp group