ರಾಷ್ಟ್ರೀಯ ಸುದ್ದಿ

ಕೋಟ್ಯಂತರ ರೂಪಾಯಿ ವಂಚಿಸಿದ ಎಸ್‌ಆರ್‌ಎಸ್ ಸಮೂಹ: ಪ್ರಧಾನಿ ಮೌನ ಮುರಿಯಲು ಕಾಂಗ್ರೆಸ್ ಒತ್ತಾಯ

ಪ್ರಕರಣದ ಆರೋಪಿ ಜೊತೆ ಪ್ರಧಾನಿ ಮೋದಿ ನಿಕಟ ಸಂಪರ್ಕ ಹೊಂದಿದ್ದಾರೆ-ಆರೋಪ

‘ಆರ್‌ಬಿಐ ಹಾಗೂ ಸಿಬಿಐಗೆ ಈ ವಂಚನೆಗಳ ಬಗ್ಗೆ ಅರಿವಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ?’

ಎಸ್‌ಆರ್‌ಎಸ್ ಸಮೂಹಕ್ಕೆ ಸೇರಿದ ಮೂವರು ದೇಶದಿಂದ ಪಲಾಯನ ಮಾಡಲು ಯಾಕೆ ಅವಕಾಶ ಮಾಡಿಕೊಡಲಾಗಿದೆ ಎಂಬ ಬಗ್ಗೆ ಜನತೆಗೆ ಸ್ಪಷ್ಟಪಡಿಸುವಂತೆ ಆಗ್ರಹ

ವರದಿಗಾರ ( ಜೂ.26): ಫರೀದಾಬಾದ್ ಮೂಲದ ಎಸ್‌ಆರ್‌ಎಸ್ ಸಮೂಹವು ಭಾರತೀಯ ಸ್ಟೇಟ್ ಬ್ಯಾಂಕ್‌ಗೆ 6,978 ಕೋಟಿ ರೂಪಾಯಿ ಸೇರಿದಂತೆ ಹಲವು ಬ್ಯಾಂಕ್‌ಗಳಿಗೆ ಕೋಟ್ಯಾಂತರ ರೂಪಾಯಿ ವಂಚಿಸಿದ ಪ್ರಕರಣದ ಬಗ್ಗೆ ಪ್ರಧಾನಿ ಕಚೇರಿ ಮತ್ತು ಹಣಕಾಸು ಸಚಿವಾಲಯ ಮೌನ ತಾಳಿದ್ದು, ಮೌನ ಮುರಿಯುವಂತೆ  ಹಾಗೂ ಎಸ್‌ಆರ್‌ಎಸ್ ಸಮೂಹಕ್ಕೆ ಸೇರಿದ ಮೂವರು ದೇಶದಿಂದ ಪಲಾಯನ ಮಾಡಲು ಯಾಕೆ ಅವಕಾಶ ಮಾಡಿಕೊಡಲಾಗಿದೆ ಎಂಬ ಬಗ್ಗೆ ಜನತೆಗೆ ಸ್ಪಷ್ಟಪಡಿಸಬೇಕು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಒತ್ತಾಯಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಒಬ್ಬ ಆರೋಪಿ ಅನಿಲ್ ಜಿಂದಾಲ್‌ನನ್ನು ಎಪ್ರಿಲ್‌ನಲ್ಲಿ ಬಂಧಿಸಿದ್ದು, ಜೆ.ಕೆ.ಗಾರ್ಗ್, ಪಿ.ಕೆ.ಕಪೂರ್ ಮತ್ತು ಪ್ರತೀಕ್ ಜಿಂದಾಲ್ ಅವರು ದೇಶದಿಂದ ಹೊರಹೋಗಲು ಅವಕಾಶ ಮಾಡಿಕೊಡಲಾಗಿದೆ ಎಂದು ಅವರು ಆಪಾದಿಸಿದ್ದಾರೆ.

ಜಿಂದಾಲ್, ಪ್ರಧಾನಿ ಮೋದಿ ಹಾಗೂ ಹರ್ಯಾಣ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ಜತೆಗೆ ನಿಕಟ ನಂಟು ಹೊಂದಿದ್ದಾನೆ. ಆತನ ವಿರುದ್ಧ 22 ವಂಚನೆ ಪ್ರಕರಣಗಳು ಫರೀದಾಬಾದ್ ಠಾಣೆಯಲ್ಲಿ ದಾಖಲಾಗಿವೆ ಎಂದು ರಣದೀಪ್ ಹೇಳಿದ್ದಾರೆ.

ಕಳಪೆ ಸಾಧನೆಯ ಐಡಿಬಿಐ ಬ್ಯಾಂಕ್ ಖರೀದಿಸುವಂತೆ ಭಾರತೀಯ ಜೀವವಿಮಾ ನಿಗಮಕ್ಕೆ ಸರ್ಕಾರ ದುಂಬಾಲು ಬಿದ್ದಿದೆ. ಪಾಲಿಸಿದಾರರು ಬ್ಯಾಂಕ್ ನಷ್ಟ, ಅನುತ್ಪಾದಕ ಸಾಲ ಹಾಗೂ ಮನ್ನಾ ಮಾಡಿದ ಸಾಲಕ್ಕೆ ಪಾವತಿಸಿದರೆ, ಸರ್ಕಾರ ಬಂಡವಾಳ ಹಿಂದೆಗೆತದ ಮೂಲಕ ಈ ವ್ಯವಹಾರ ಕುದುರಿಸಿ ಲಾಭ ಮಾಡಲು ಹೊರಟಿದೆ ಎಂದು ಆರೋಪಿಸಿದ್ದಾರೆ

ದೇಶದಲ್ಲಿ ವಿತ್ತೀಯ ಅರಾಜಕತೆಗೆ ಸ್ವತಃ ಮೋದಿಯವರೇ ನೇತೃತ್ವ ವಹಿಸಿದ್ದಾರೆ. ಆರ್‌ಬಿಐ ಹಾಗೂ ಸಿಬಿಐಗೆ ಈ ವಂಚನೆಗಳ ಬಗ್ಗೆ ಅರಿವಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿರುವುದಾಗಿ ಮೂಲಗಳು ವರದಿ ಮಾಡಿವೆ.

To Top
error: Content is protected !!
WhatsApp chat Join our WhatsApp group