ಸುತ್ತ-ಮುತ್ತ

ಜನತೆ ನಿರ್ಭೀತಿಯಿಂದ ಜೀವನ ಸಾಗಿಸುವಂತಹ ವ್ಯವಸ್ಥೆಯನ್ನು ಸಂವಿಧಾನಾತ್ಮಕವಾಗಿ ಜಾರಿಗೊಳ್ಳುವಂತೆ ಮಾಡುವುದೇ ಎಸ್‍ಡಿಪಿಐ ಸಂಕಲ್ಪ: ಅಬ್ದುಲ್ ಹನ್ನಾನ್

ಎಸ್‍ಡಿಪಿಐ ಸಂಸ್ಥಾಪನಾ ದಿನ ಸಂದೇಶದಲ್ಲಿ ಕರ್ನಾಟಕ ರಾಜ್ಯಾಧ್ಯಕ್ಷ ಅಬ್ದುಲ್ ಹನ್ನಾನ್

ಬೆಂಗಳೂರು (ಜೂ. 21): ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಪಕ್ಷವು ಈ ದೇಶದ ಜನತೆಗೆ ಸಮರ್ಪಣೆಗೊಂಡು ಇಂದು ಒಂಬತ್ತು ವರ್ಷಗಳು ಕಳೆದು 10ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. ಎಸ್‍ಡಿಪಿಐ ರಾಜ್ಯಾಧ್ಯಕ್ಷರಾದ ಅಬ್ದುಲ್ ಹನ್ನಾನ್ ಮಾತನಾಡುತ್ತಾ, ಕಾರ್ಯಕರ್ತರಿಗೆ, ಹಿತೈಷಿಗಳಿಗೆ ಮತ್ತು ಬೆಂಬಲಿಗರಿಗೆ ಮತ್ತು ಸರ್ವ ಜನತೆಗೆ ಸಂಸ್ಥಾಪನಾ ದಿನದ ಶುಭಾಶಯಗಳನ್ನು ತಿಳಿಸಿದರು.
ಎಸ್‍ಡಿಪಿಐ ಪಕ್ಷವು ಕೇವಲ ಚುನಾವಣಾ ರಾಜಕೀಯಕ್ಕೆ ಸೀಮಿತವಾಗಿರದೆ ಈ ದೇಶ ಮತ್ತು ರಾಜ್ಯದಲ್ಲಿರುವ ದಮನಿತ ಸಮುದಾಯಗಳ ಪರವಾಗಿ ನಿರಂತರವಾದ ಹೋರಾಟದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ನಾವು ರಾಜಕಾರಣದಲ್ಲಿ ಅಥವಾ ಅಧಿಕಾರದಲ್ಲಿ ಗುರುತಿಸುವುದಕ್ಕಿಂತ ಹೆಚ್ಚಾಗಿ ಹೋರಾಟಗಳಲ್ಲಿ ಗುರುತಿಸಿಕೊಂಡಿರುವುದಕ್ಕೆ ತುಂಬಾ ಹೆಮ್ಮೆಯಿದೆ ಎಂದು ಹೇಳಿದರು. ಯಾಕೆಂದರೆ ಹೋರಾಟಗಳು ಸಮಾಜದಲ್ಲಿ ಬದಲಾವಣೆಯನ್ನುಂಟುಮಾಡುತ್ತದೆ. ನಾವು ನಮ್ಮ ಒಂಬತ್ತು ವರ್ಷಗಳ ಪಯಣದಲ್ಲಿ ಈ ರಾಜ್ಯದ ದಲಿತರ, ಆದಿವಾಸಿಗಳ, ಹಿಂದುಳಿದ ವರ್ಗಗಳ, ಅಲ್ಪಸಂಖ್ಯಾತರ, ರೈತರ, ವಿದ್ಯಾರ್ಥಿಗಳ ಪರ ಮತ್ತು ಈ ರಾಜ್ಯದ ನೆಲ, ಜಲ, ಭಾಷೆ ಉಳಿವಿಗಾಗಿ ಮತ್ತು ಹಕ್ಕು ವಂಚಿತ ಸಮುದಾಯದ ಹಕ್ಕುಗಳಿಗಾಗಿ ಪ್ರತಿಯೊಂದು ಹೋರಾಟಗಳಲ್ಲಿ ನಮ್ಮನ್ನು ತೊಡಗಿಸಿಕೊಂಡಿದ್ದೇವೆ ಎಂದರೆ ನಾವು ನಿಜವಾದ ಜಾತ್ಯತೀತತೆ ಮತ್ತು ಪ್ರಜಾಪ್ರಭುತ್ವ ಪರಿಕಲ್ಪನೆಯಲ್ಲಿದ್ದೇವೆ ಎಂದರ್ಥ.
ನಾವು ಸಾಂವಿಧಾನಿಕ ಹಕ್ಕುಗಳಿಗಾಗಿ ಹೋರಾಟ ಮಾಡಿದಾಗ ನಮ್ಮ ಮೇಲೆ ಸುಳ್ಳು ಆರೋಪಗಳು ಕೇಳಿ ಬಂದವು ಇವೆಲ್ಲವೂ ಹೋರಾಟದಲ್ಲಿ ಸಹಜವಾದದ್ದು ಎಂದು ತಿಳಿದುಕೊಂಡು ಹೋರಾಟದಿಂದ ಒಂದು ಇಂಚು ಕೂಡ ಹಿಂದೆ ಸರಿಯದೆ ಇದ್ದದ್ದು ನಮ್ಮ ಪಕ್ಷವನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸಿದೆ. ಈ ರಾಜ್ಯ ಹಸಿವು ಮತ್ತು ಭಯದಿಂದ ಮುಕ್ತಿ ಹೊಂದುವವರೆಗೂ ನಮ್ಮ ಹೋರಾಟಕ್ಕೆ ಅಲ್ಪ ವಿರಾಮವಿಲ್ಲದೆ ಮುಂದುವರಿಯಲಿರುವುದು ಎಂದು ಅಬ್ದುಲ್ ಹನ್ನಾನ್ ಸ್ಪಷ್ಟಪಡಿಸಿದರು.
ಪರಸ್ಪರ ಹಗೆತನ ಮತ್ತು ದ್ವೇಷ ತುಂಬಿದ ರಾಜಕೀಯದ ಮಧ್ಯೆ ಸೌಹಾರ್ದತೆಯ ಪ್ರತೀಕವಾಗಿ, ಭೃಷ್ಟಾಚಾರ ತುಂಬಿದ ವ್ಯವಸ್ಥೆಯ ಮಧ್ಯೆ ಪಾರದರ್ಶಕತೆಯ ರಾಜಕಾರಣಿಗಳಾಗಿ, ಜಾತ್ಯತೀತತೆ ಮತ್ತು ಪ್ರಜಾಪ್ರಭುತ್ವ ವಿರೋಧಿಗಳ ಮುಂದೆ ಸಂವಿಧಾನದ ರಕ್ಷಕರಾಗಿ ಕಾರ್ಯ ನಿರ್ವಹಿಸುವುದರ ಮೂಲಕ ರಾಜ್ಯದ ಜನತೆಯು ನಿರ್ಭೀತಿಯ ಜೀವನ ಸಾಗಿಸುವಂತಹ ವ್ಯವಸ್ಥೆಯನ್ನು ಸಂವಿಧಾನಾತ್ಮಕವಾಗಿ ಜಾರಿಗೊಳ್ಳುವಂತೆ ಮಾಡುವುದೇ ಎಸ್‍ಡಿಪಿಐ ಮುಖ್ಯ ಗುರಿಯಾಗಿರುತ್ತದೆ ಎಂದರು. ಹೋರಾಟದ ರಾಜಕೀಯದ ಜೊತೆಗೆ ಚುನಾವಣಾ ರಾಜಕೀಯದಲ್ಲೂ ನಾವು ಸಕ್ರೀಯವಾಗದಿದ್ದರೆ ಕಳ್ಳರು, ಸುಳ್ಳರು ಮತ್ತು ಭೃಷ್ಟರು ಈ ರಾಜ್ಯವನ್ನು ಮತ್ತೆ ಮತ್ತೆ ಆಳುವ ದಯನೀಯ ಪರಿಸ್ಥಿತಿಯನ್ನು ನಾವು ನೋಡಬೇಕಾಗುತ್ತದೆ. ಆದ್ದರಿಂದ ಪಾರದರ್ಶಕ ರಾಜಕೀಯಕ್ಕಾಗಿ ಎಲ್ಲರೂ ಎಸ್‍ಡಿಪಿಐಯೊಂದಿಗೆ ಕೈ ಜೋಡಿಸಬೇಕೆಂದು ಅವರು ಈ ಸಂದರ್ಭ ಕರೆ ನೀಡಿದರು.

To Top
error: Content is protected !!
WhatsApp chat Join our WhatsApp group