ರಾಜ್ಯ ಸುದ್ದಿ

‘ಹೃದಯವಂತಿಕೆಯಲ್ಲಿ ನಾನು ಯಂಗ್’: ಸಿದ್ದರಾಮಯ್ಯ

ಮುದಕನಿಗೇಕೆ ಮತ್ತೊಂದು ಮದುವೆ?

ಒನ್ಸ್ ಅಪಾನ್ ಎ ಟೈಂ ನಾನೋರ್ವ ಪಾಪ್ಯುಲರ್ ಮೇಸ್ಟ್ರಾಗಿದ್ದೆ

ವರದಿಗಾರ (ಜೂ.14): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಚಿಮ್ಮನಕಟ್ಟಿಯವರು ಇತ್ತೀಚೆಗೆ ನಡೆದ ಸಭೆಯಲ್ಲಿ ‘ಸಿದ್ದರಾಮಯ್ಯರಿಗೆ 71 ಅಲ್ಲ, 21 ವರ್ಷ. ಮತ್ತೊಂದು ಮದುವೆ ಮಾಡುವ ಉತ್ಸಾಹದಲ್ಲಿದ್ದೇವೆ’ ಎಂದು ಹೇಳಿಕೆ ನೀಡಿರುವುದರ ಬಗ್ಗೆ ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ,  ಮುದುಕನಿಗೇಕೆ ಮತ್ತೊಂದು ಮದುವೆ ? ನನಗೆ 71 ವರ್ಷ ಆಗಿದೆ. ಯಾರಾದರೂ ಹುಡುಗಿಯರು ಕೇಳಿಸಿಕೊಂಡರೆ ತಪ್ಪು ತಿಳ್ಕೋತಾರೆ ಎಂದು ಹೇಳಿ ವ್ಯಂಗ್ಯವಾಡಿದ್ದಾರೆ. ಸಿದ್ದರಾಮಯ್ಯ ಹೃದಯವಂತಿಕೆಯಲ್ಲಿ ಸದಾ ಯುವಕರು ಎಂಬ ಮಾತಿಗೆ ಪ್ರತಿಕ್ರಿಯೆ ನೀಡಿ, ಹೌದೌದು ‘ಹೃದಯವಂತಿಕೆಯಲ್ಲಿ ನಾನು ಯಂಗ್ ‘ ಎಂದು ಹೇಳಿದ್ದಾರೆ.

ಒನ್ಸ್ ಅಪಾನ್ ಎ ಟೈಂ ನಾನೋರ್ವ ಪಾಪ್ಯುಲರ್ ಮೇಸ್ಟ್ರಾಗಿದ್ದೆ (ಒಂದಾನೊಂದು ಕಾಲದಲ್ಲಿ ನಾನು ಗುರುತಿಸಲ್ಪಟ್ಟ ಮಾಸ್ಟರಾಗಿದ್ದೆ). ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೀಗೆಂದು ತನ್ನ ಹಳೆಯ ನೆನಪುಗಳನ್ನು ಮತ್ತೆ ಮೆಲುಕು ಹಾಕಿಕೊಂಡಿದ್ದಾರೆ.

ಕಾಂಗ್ರೆಸ್ ಮುಖಂಡರ ಜೊತೆ ಸಭೆ ನಡೆಸಲು ಅವರು ಮೈಸೂರಿನ ಹೋಟೆಲ್ ಗೆ ಬಂದಿದ್ದರು. ಸಭೆಗೂ ಮುನ್ನ ಇಡ್ಲಿ ವಡೆ ಉಪಹಾರ ಸೇವಿಸಿದ ಅವರು ಹಳೆಯ ಸವಿ ನೆನಪುಗಳನ್ನು ಮೆಲಕು ಹಾಕಿದರು. ರಾಜಕೀಯ ವೃತ್ತಿಗಿಂತ ನನಗೆ ಹೆಚ್ಚು ಖುಷಿ ಕೊಟ್ಟಿದ್ದು ಮಾಸ್ಟರ್ ಕೆಲಸ. ಮೂರು ವರ್ಷಗಳ ಕಾಲ ಶಿಕ್ಷಕನ ವೃತ್ತಿ ನಿರ್ವಹಿಸಿದ್ದೆ. ವಿದ್ಯಾರ್ಥಿಗಳಿಗೆ ಪಾಠ ಮಾಡುವ ಕೆಲಸ ನನಗೆ ಅತಿ ಹೆಚ್ಚು ಖುಷಿ ಕೊಡುತ್ತಿತ್ತು. ಈಗಲೂ ವಿದ್ಯಾರ್ಥಿಗಳ ಜತೆ ಪಾಠ ಮಾಡೋದು ಖುಷಿ ಕೊಡುತ್ತೆ. ಆದರೆ ನನಗೀಗ ವಯಸ್ಸಾಗಿದೆ. ಇದೇ ಆಗಸ್ಟ್ ತಿಂಗಳಲ್ಲಿ 71 ವರ್ಷವಾಗುತ್ತದೆ. ಹಾಗಾಗಿ ನಾನೀಗ ಪಾಠ ಮಾಡೋಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಈ ವೇಳೆ ಮುಖಂಡರ ಜೊತೆ ಉಭಯ ಕುಶಲೋಪರಿ ವಿಚಾರಿಸಿದ ಅವರು ಸೋಲು-ಗೆಲುವಿನ ಲೆಕ್ಕಾಚಾರ ನಡೆಸಿದರು. ಈ ಸಂದರ್ಭದಲ್ಲಿ ಸಂಸದ ಧ್ರುವನಾರಾಯಣ, ಶಾಸಕರಾದ ತನ್ವೀರ್ ಸೇಠ್, ಅನಿಲ್ ಚಿಕ್ಕಮಾದು, ಮಾಜಿ ಶಾಸಕರಾದ ವಾಸು, ಸೋಮಶೇಖರ್, ಕಳಲೆ ಕೇಶವಮೂರ್ತಿ, ಕೆ.ವೆಂಕಟೇಶ್, ವಿಧಾನ ಪರಿಷತ್ ಸದಸ್ಯ ಆರ್.ಧರ್ಮಸೇನಾ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಮುಂತಾದವರು ಉಪಸ್ಥಿತರಿದ್ದರು.

To Top
error: Content is protected !!
WhatsApp chat Join our WhatsApp group