ಜಿಲ್ಲಾ ಸುದ್ದಿ

ಹಿರಿಯಡ್ಕ ಎಸ್ಸೈ, ಪೊಲೀಸರ ಬಂಧನ ಎಸ್ಪಿಯ ಕಾರ್ಯದಕ್ಷತೆಗೆ ಸಾಕ್ಷಿ: ಪಾಪ್ಯುಲರ್ ಫ್ರಂಟ್

ವರದಿಗಾರ (ಜೂ.4): ಪೆರ್ಡೂರು ಬಳಿ ನಡೆದ ದನದ ವ್ಯಾಪಾರಿ ಜೋಕಟ್ಟೆಯ ಹುಸೈನಬ್ಬ ಅವರ ಅನುಮಾನಾಸ್ಪದ ಸಾವಿನ ಕೂಲಂಕಷ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲು ಯಶಸ್ವಿಯಾದ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರಗಿ ನೇತೃತ್ವದ ಪೋಲಿಸರ ಕಾರ್ಯ ಶ್ಲಾಘನೀಯ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಡುಪಿ ಜಿಲ್ಲಾ ಸಮಿತಿ ತಿಳಿಸಿದೆ.

ಆರೋಪಿಗಳೊಂದಿಗೆ ನೇರವಾಗಿ ಶಾಮೀಲಾಗಿ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಿದ ಹಿರಿಯಡ್ಕ ಎಸ್ಸೈ ಡಿ.ಎನ್.ಕುಮಾರ್ ಮತ್ತು ಇತರ ಪೊಲೀಸರ ಕೃತ್ಯ ಆಘಾತಕಾರಿಯಾಗಿದ್ದು, ಎಸ್ಸೈ ಮತ್ತು ಇತರ ಪೊಲಿಸರನ್ನು ಯಾವುದೇ ಪಕ್ಷಪಾತವಿಲ್ಲದೆ, ಯಾವುದೇ ಒತ್ತಡಕ್ಕೆ ಮಣಿಯದೆ ಬಂಧಿಸಿರುವುದು ಎಸ್ಪಿಯವರ ದಕ್ಷತೆಯನ್ನು ತೋರಿಸುತ್ತದೆ ಎಂದು ಪಿಎಫ್‌ಐ ಜಿಲ್ಲಾಧ್ಯಕ್ಷ ನಿಸಾರ್ ಅಹ್ಮದ್ ಹೇಳಿದ್ದಾರೆ.

ಇಂತಹ ದಕ್ಷ ಅಧಿಕಾರಿಗಳಿಂದ ಕಾನೂನಿನ ಮೇಲೆ ಹಾಗೂ ಪೊಲೀಸ್ ಇಲಾಖೆಯ ಮೇಲಿನ ವಿಶ್ವಾಸ ಜನರಲ್ಲಿ ಉಳಿದಿದ್ದು, ಇಂತಹ ಅಧಿಕಾರಿಗಳನ್ನು ಸಹಕರಿಸುವುದು ಸಾರ್ವಜನಿಕ ಹಾಗೂ ಸರಕಾರದ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ. ಕರಾವಳಿಯಲ್ಲಿ ಇಂತಹ ಘಟನೆಗಳು ಮೊದಲು ನಡೆದಿದ್ದು, ಪ್ರಕರಣಗಳ ಸರಿಯಾಗಿ ತನಿಖೆಯಾಗದೆ ಅಥವಾ ಅಧಿಕಾರಿಗಳ ಪಕ್ಷಪಾತ ಧೋರಣೆಯಿಂದ ನೊಂದವರಿಗೆ ನ್ಯಾಯ ಸಿಗದ ಹಲವಾರು ಉದಾಹರಣೆಗಳಿವೆ ಎಂದು ಆರೋಪಿಸಿದ್ದಾರೆ.

ಕರಾವಳಿಯ ಪೊಲೀಸರು ದನ ಸಾಗಾಟ ಮತ್ತು ಇತರ ಕೋಮು ವಿಷಯದಲ್ಲಿ ಬಜರಂಗದಳ ಮತ್ತು ಇತರ ಬಲಪಂಥೀಯ ಸಂಘಟನೆಯೊಂದಿಗೆ ಸೇರಿ ಜಂಟಿ ಕಾರ್ಯಾಚರಣೆ ನಡೆಸುವುದು ಸಾಮಾನ್ಯವಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಕರಾವಳಿಯತ್ತ ಗಮನಹರಿಸಿ ಕೋಮುವಾದಿ ಮನಸ್ಥಿತಿ ಅಥವಾ ಸಂಘಪರಿವಾರದ ಹಿನ್ನೆಲೆಯ ಪೋಲಿಸರನ್ನು ಗುರುತಿಸಿ ಅವರನ್ನು ಸೇವೆಯಿಂದ ವಜಾ ಮಾಡಿ, ಕರಾವಳಿಯಲ್ಲಿ ಶಾಂತಿ ಹಾಗೂ ನ್ಯಾಯವನ್ನು ಸ್ಥಾಪಿಸುವ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಅದೇ ರೀತಿ ಲಕ್ಷ್ಮಣ್ ನಿಂಬರಗಿಯವರ ದಕ್ಷತೆಯನ್ನು ಗುರುತಿಸಿ ಬೆಂಬಲಿಸಬೇಕು. ಈ ಪ್ರಕರಣದಲ್ಲಿ ಎಸ್ಸೈ ಹಾಗೂ ಇತರ ಪೊಲೀಸರು ಬಂಧಿಸಲ್ಪಟ್ಟಿರುವುದು ಕೋಮುವಾದಿ ಮನಸ್ಥಿತಿಯ ಪೊಲೀಸರಿಗೆ ಎಚ್ಚರಿಕೆ ಮತ್ತು ಪಾಠವಾಗಿದೆ ಎಂದು ಅವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

To Top
error: Content is protected !!
WhatsApp chat Join our WhatsApp group