ಜಿಲ್ಲಾ ಸುದ್ದಿ

ಕುಟುಂಬಸ್ಥರ ಹೇಳಿಕೆಯಂತೆ ಬಜರಂಗದಳ ಗೂಂಡಾಗಳಿಂದ ದನ ವ್ಯಾಪಾರಿ ಹುಸೇನಬ್ಬರ ಸಾವು : ಎಸ್.ಡಿ.ಪಿ.ಐ ಆರೋಪ

ಹುಸೇನಬ್ಬರ ನಿಗೂಢ ಸಾವಿನ ನಿಷ್ಪಕ್ಷಪಾತದ ತನಿಖೆಗಾಗಿ ವಿಶೇಷ ತನಿಖಾ ತಂಡಕ್ಕೆ ನೀಡಲು ಆಗ್ರಹ

ಪೊಲೀಸರೂ ಪ್ರಕರಣದಲ್ಲಿ ತೊಡಗಿಸಿಕೊಂಡಿರುವುದರ ಬಗ್ಗೆ ಸಂಶಯ

ಸಂತ್ರಸ್ತ ಕುಟುಂಬಕ್ಕೆ ಪರಿಹಾರ ನೀಡಲು ಒತ್ತಾಯ

ವರದಿಗಾರ (ಮೇ.30): ಉಡುಪಿ ಜಿಲ್ಲೆಯ ಪೆರ್ಡೂರಿನಲ್ಲಿ ಇಂದು ನಡೆದಿರುವ ದನದ ವ್ಯಾಪಾರಿ ಹುಸೇನಬ್ಬ ಜೋಕಟ್ಟೆಯವರ  ಸಂಶಯಾಸ್ಪದ ಸಾವು ಅಕ್ಷರಶಃ ಬಜರಂಗದಳ ಗೂಂಡಾ ಗುಂಪಿನಿಂದ ಆಗಿರುವ ಕೊಲೆ ಎಂಬುವುದು ಮೃತರ ತಮ್ಮ ಮುಹಮ್ಮದ್ ನೀಡಿರುವ ದೂರಿನ ಮೂಲಕ ದೃಢಪಟ್ಟಿದ್ದು, ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರಗಿ ನೇರವಾಗಿ ಪ್ರಕರಣದಲ್ಲಿ ಮಧ್ಯ ಪ್ರವೇಶಿಸಿ ಈ ಪ್ರಕರಣವನ್ನು ವಿಶೇಷ ತನಿಖಾ ದಳಕ್ಕೆ (SIT)  ವಹಿಸಿ ಆರೋಪಿಗಳನ್ನು ಬಂಧಿಸಿ, ಶೀಘ್ರ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ)ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಎ.ಎಂ. ಅಥಾವುಲ್ಲಾ ಜೋಕಟ್ಟೆ ಆಗ್ರಹಿಸಿದ್ದಾರೆ.

ಹುಸೇನಬ್ಬನವರು ಕಳೆದ ಸುಮಾರು  15 ವರ್ಷಗಳಿಂದ ದನದ ವ್ಯಾಪಾರವನ್ನು ಸಕ್ರಮವಾಗಿ ಮಾಡಿಕೊಂಡು ಬರುತ್ತಿದ್ದು, ಅದರಂತೆ ನಿನ್ನೆ ಕೂಡಾ ಪೆರ್ಡೂರಿನಿಂದ ದನಗಳನ್ನು ತರುವಾಗ ಶೀನಬೆಟ್ಟು ಎಂಬಲ್ಲಿ ಸೂರಿ ಯಾನೆ ಸೂರ್ಯ ನೇತೃತ್ವದ  ಬಜರಂಗದಳದ ಗೂಂಡಾಗಳ ಗುಂಪು ಅಡ್ಡಗಟ್ಟಿದ್ದು,   ಈ ಸಂದರ್ಭ ವಾಹನದಲ್ಲಿದ್ದ ಇತರೆ ಮೂವರು ತಪ್ಪಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಿರಿಯ ವಯಸ್ಸಿನ ಹುಸೇನಬ್ಬನವರು ಗೂಂಡಾಗಳ ಕೈಗೆ ಸಿಕ್ಕಿಬಿದ್ದಿದ್ದರು ಎಂದು ಮೃತರ ತಮ್ಮ ಮುಹಮ್ಮದ್ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಆದರೆ ಅಚ್ಚರಿದಾಯಕ ವಿಷಯವೆಂದರೆ ಭಜರಂಗದಳದ ಗೂಂಡಾಗಳು ಅಡ್ಡಗಟ್ಟುವಾಗ ಅವರೊಂದಿಗೆ ಹಿರಿಯಡ್ಕ ಠಾಣೆಯ ಕೆಲ ಪೊಲೀಸರೂ ಕೂಡಾ ಹಾಜರಿದ್ದರು ಎಂದು ಘಟನೆಯ ಪ್ರತ್ಯಕ್ಷದಕ್ಷಿಗಳು  ಹೇಳಿಕೆ ನೀಡಿದ್ದಾರೆ.  ಈ ಪ್ರಕರಣವು ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಡಿಯಲ್ಲಿ ಬರುತ್ತಿದ್ದು, ಹಿರಿಯಡ್ಕ ಠಾಣೆಯು ಬಜರಂಗದಳದ ಗೂಂಡಾಗಳ ಅಡ್ಡೆಯಂತಾಗಿದೆ  ಎಂಬ ಸಂಶಯವಿದೆ ಎಂದವರು ಆರೋಪಿಸಿದ್ದಾರೆ.  ಈ ಹಿಂದೆಯೂ ಕೂಡಾ ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ರೀತಿಯ ಅಕ್ರಮ ದಾಳಿಗಳು ದನದ ವ್ಯಾಪಾರಸ್ಥರ ಮೇಲೆ ನಡೆದಿದ್ದು, ಯಾವುದೇ ಪ್ರಕರಣವನ್ನು ದಾಖಲಾಗದಂತೆ, ಒಂದು ವೇಳೆ ದೂರು ದಾಖಲಾದರೂ ಸೂಕ್ತ ಕ್ರಮ ಕೈಗೊಳ್ಳದಂತೆ ತಡೆಯುವಲ್ಲಿ ಹಿರಿಯಡ್ಕ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದರು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಘಟನೆಯು ಗಂಭೀರ ಪ್ರಕರಣವಾಗಿರುವುದರಿಂದ ದನ ಸಾಗಾಟದ ವಾಹನವನ್ನು ತಡೆಯುವಾಗ ಬಜರಂಗದಳದ ಗೂಂಡಾಗಳ ಜೊತೆಗಿದ್ದ ಪೊಲೀಸರ ಸಹಕಾರವಿಲ್ಲದೆ ಗೂಂಡಾಗಳು ವಾಹನವನ್ನು ಆ ಮಟ್ಟದಲ್ಲಿ ಜಖಂಗೊಳಿಸಲು ಸಾಧ್ಯವೇ ಇಲ್ಲ ಎಂಬುವುದು ಸ್ಪಷ್ಟವಾಗುತ್ತದೆ. ಆದುದರಿಂದ ಪೊಲೀಸ್ ಅಧೀಕ್ಷಕರಾದ ಲಕ್ಷ್ಮಣ್ ನಿಂಬರಗಿಯವರು ಈ ಪ್ರಕರಣವನ್ನು ನಿಷ್ಪಕ್ಷಪಾತದ ತನಿಖೆಗಾಗಿ  ವಿಶೇಷ ತನಿಖಾ ತಂಡಕ್ಕೆ (SIT) ವಹಿಸಬೇಕು, ಘಟನೆಗೆ ಸಂಬಂಧಪಟ್ಟ ಹಿರಿಯಡ್ಕ ಪೊಲೀಸ್ ಠಾಣೆಯ ಪೊಲೀಸರನ್ನು ಕೂಡಲೇ ವರ್ಗಾವಣೆಗೊಳಿಸಬೇಕು ಮತ್ತು ರಾಜ್ಯ ಸರಕಾರ ಸಂತ್ರಸ್ತ ಕುಟುಂಬಕ್ಕೆ ಕೂಡಲೇ ಸೂಕ್ತ ಪರಿಹಾರ ಒದಗಿಸಬೇಕೆಂದು ಎ.ಎಂ. ಅಥಾವುಲ್ಲಾ ಜೋಕಟ್ಟೆ ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ಮೃತ ಹುಸೇನಬ್ಬ

ಮಾಧ್ಯಮದ ಮುಂದೆ ಕುಟುಂಬಸ್ಥರು ಹೇಳಿಕೆ ನೀಡುತ್ತಿರುವುದು

 

ಜಖಂಗೊಂಡಿರುವ ಸ್ಕಾರ್ಪಿಯೋ ವಾಹನ

ಪತ್ತೆಯಾದ ದನಗಳು

To Top
error: Content is protected !!
WhatsApp chat Join our WhatsApp group