ನಿಮ್ಮ ಬರಹ

ಆಸಿಫಾಳ ರಸನಾ ಗ್ರಾಮದ ಸಾಮರಸ್ಯದ ಒಂದು ನಿದರ್ಶನ

✍🏻 ಇಸ್ಮತ್ ಪಜೀರ್

ಇಂದು ಕಥುವಾದ ಜಿಲ್ಲೆಯ ರಸನಾ ಎಂಬ ಹಳ್ಳಿಯ ಕಂದಮ್ಮ ಆಸಿಫಾಳ ಅತ್ಯಾಚಾರ ಮತ್ತು ಕೊಲೆಯನ್ನು ಹಿಂದುತ್ವವಾದಿಗಳು ಹಿಂದೂ – ಮುಸ್ಲಿಂ ಎಂಬ ಕೋಮು ಧ್ರುವೀಕರಣದ ನೆಲೆಯಲ್ಲಿ ಬಿಂಬಿಸುತ್ತಿದ್ದಾರೆ. ಕಾಶ್ಮೀರದ ಕುರಿತಂತೆ ಇಂದಿಗೂ ಕಾಶ್ಮೀರಿಯೇತರರಲ್ಲಿ ಚಿತ್ರ ವಿಚಿತ್ರ ಕಲ್ಪನೆಗಳಿವೆ. ಆದರೆ ವಾಸ್ತವ ಸಂಪೂರ್ಣವಾಗಿ ವ್ಯತಿರಿಕ್ತವಾಗಿಯೇ ಇದೆ. ಕಥುವಾದಲ್ಲಿ  ಅತ್ಯಾಚಾರಿ ಕೊಲೆಗುಡುಕರ ಬಂಧನವನ್ನು ವಿರೋಧಿಸಿ ಪ್ರತಿಭಟಿಸಿದವರು ವಾಸ್ತವದಲ್ಲಿ ಕ್ಷುಲ್ಲಕ ಸಂಖ್ಯೆಯವರು. ಇಂದಿಗೂ ಅಲ್ಲಿ ಮಾನವೀಯತೆಯುಳ್ಳ ಅಪ್ಪಟ ಜಾತ್ಯಾತೀತ ಮನೋಭಾವದವರೇ ಹೆಚ್ಚಿದ್ದಾರೆ.

ಬಖೆರ್ ವಾಲ್‌ ಬುಡಕಟ್ಟಿನ ಸಾಮಾಜಿಕ ಕಾರ್ಯಕರ್ತ ಮತ್ತು ವಕೀಲರಾಗಿರುವ ಆಜುಬಾಜು ಸುಮಾರು ಮೂವತ್ತರ ಹರೆಯದ ತಾಲಿಬ್ ಹುಸೈನ್ ಹೇಳಿದ ಕತೆಯೊಂದು ಅಲ್ಲಿನ ಹಿಂದೂ ಮುಸ್ಲಿಂ ಸಹೋದರತೆಗೆ ಬಹುದೊಡ್ಡ ನಿದರ್ಶನ ಒದಗಿಸುತ್ತದೆ. ಅದನ್ನು ತಾಲಿಬ್ ರ ಮಾತಿನಲ್ಲೇ ಹೇಳುತ್ತೇನೆ.

” ನಾನು ಶಾಲಾ ಬಾಲಕನಾಗಿದ್ದಾಗ ನನಗೆ ಪಾದರಕ್ಷೆಯಿರಲಿಲ್ಲ. ಬರಿಗಾಲಲ್ಲೇ ಶಾಲೆಗೆ ಹೋಗುತ್ತಿದ್ದೆ. ಒಂದು ದಿನ ನನ್ನ ಆತ್ಮೀಯ ಹಿಂದೂ ಬ್ರಾಹ್ಮಣ ಗೆಳೆಯ ರಾಮ್ ಪಾಲ್ ನನ್ನಲ್ಲಿ ಹೇಳಿದ. ನನ್ನ ಅಮ್ಮ ನಿನ್ನನ್ನು ಕರೆಯುತ್ತಿದ್ದಾರೆ. ನೀನು ನಮ್ಮ ಮನೆಗೊಮ್ಮೆ ಬರಬೇಕಂತೆ. ನಾನು ಹೆದರುತ್ತಲೇ ಅವರ ಮನೆಗೆ ಹೋದೆ. ಅಲ್ಲಿ ನನ್ನನ್ನು ಓರ್ವ ಬುಡಕಟ್ಟು ಜನಾಂಗದ ಮುಸ್ಲಿಮನೆಂದು ಅವರ್ಯಾರೂ ನೋಡಲಿಲ್ಲ.ರಾಮ ಪಾಲನ ಅಮ್ಮ ಒಂದು ತುಂಡು ಬೆಲ್ಲವನ್ನು ತಂದು ಎರಡು ತುಂಡು ಮಾಡಿ, ಒಂದು ತುಂಡು ನನ್ನ ಕೈಯಲ್ಲೂ ಇನ್ನೊಂದು ತುಂಡು ರಾಮ್ ಪಾಲನ ಕೈಯಲ್ಲೂ ನೀಡಿ ಹೇಳಿದರು. ನೀವು ಅದನ್ನು ಪರಸ್ಪರರ ಬಾಯಿಗೆ ಹಾಕಿ ತಿನ್ನಿಸಿ. ನಾವಿಬ್ಬರೂ ಹಾಗೆ ಮಾಡಿದೆವು. ಆ ಮಹಾಮಾತೆ ನಮ್ಮಿಬ್ಬರನ್ನೂ ಪ್ರೀತಿಯಿಂದ ಆಲಿಂಗಿಸಿದರು. ಆ ಬಳಿಕ ಒಂದು ಪೊಟ್ಟಣ ಹಿಡಿದುಕೊಂಡು ಬಂದು ನನ್ನಲ್ಲಿ ಅದನ್ನು ತೆರೆಯುವಂತೆ ಹೇಳಿದರು. ತೆರೆದಾಗ ಏನಾಶ್ಚರ್ಯ…. ಅದರಲ್ಲಿ  ಒಂದು ಜೋಡಿ ಒಳ್ಳೆಯ ಹೊಸ ಪಾದರಕ್ಷೆಯಿತ್ತು. ನನಗೆ ನನ್ನ ಕಣ್ಣುಗಳನ್ನೇ ನಂಬಲಾಗಿರಲಿಲ್ಲ.  ಅದನ್ನು ನನ್ನ ಕಾಲಿಗೆ ತೊಡಿಸಿ, ನನ್ನನ್ನು ಪುನಃ ಆಲಿಂಗಿಸಿ ತಮ್ಮ ಪ್ರೀತಿ ಪ್ರಕಟಿಸಿದರು. ಇದು ನನ್ನ ಕಥುವಾ. ಹಿಂದೂ ಏಕ್ತಾ ಮಂಚ್ ಪ್ರತಿಬಿಂಬಿಸುವಂತೆ ಅಲ್ಲಿ ಯಾವ ರೀತಿಯಲ್ಲೂ ಕೋಮುವಾದವಿಲ್ಲ. ಕೋಮುವಾದಿಗಳ  ಸಂಖ್ಯೆ ತೀರಾ ನಗಣ್ಯ…..”

(ಇತ್ತೀಚೆಗೆ ಬರ್ಖಾ ದತ್ ಅವರಿಗೆ ನೀಡಿದ ಸಂದರ್ಶನದಲ್ಲಿ ತಾಲಿಬ್‌‌ ಹುಸೈನ್ ಹೇಳಿದ ಮಾತುಗಳಿವು)

ಇದಕ್ಕೆ ಪುರಾವೆಯೊದಗಿಸುವಂತೆ ಕಾಶ್ಮೀರಿ ಬ್ರಾಹ್ಮಣ ವಕೀಲೆ ದೀಪಿಕಾ ಸಿಂಗ್ ರಾಜಾವತ್, ಬ್ರಾಹ್ಮಣ ಜಾತಿಯ ಪೋಲೀಸ್ ಅಧಿಕಾರಿ ಶ್ವೇತಾಂಬರಿ ಶರ್ಮ ಮುಂತಾದವರ ಮಾನವೀಯ ತುಡಿತಗಳನ್ನು ನಾವು ಮಾಧ್ಯಮಗಳಲ್ಲಿ ನೋಡುತ್ತಲೇ ಇದ್ದೇವೆ.

To Top
error: Content is protected !!
WhatsApp chat Join our WhatsApp group