ರಾಷ್ಟ್ರೀಯ ಸುದ್ದಿ

ಆರೆಸ್ಸೆಸ್, ಬಿಜೆಪಿಗರನ್ನು ಪ್ರಮುಖ ಸಾಂವಿಧಾನಿಕ ಹುದ್ದೆಗಳಿಗೆ ನೇಮಕ ಮಾಡಿ ಪಾವಿತ್ರ್ಯವನ್ನು ನಾಶ ಮಾಡಿದೆ: ರಾಹುಲ್ ಗಾಂಧಿ

ವರದಿಗಾರ (ಎಪ್ರಿಲ್.25): ಆರೆಸ್ಸೆಸ್, ಬಿಜೆಪಿ ಸಿದ್ಧಾಂತದ ವ್ಯಕ್ತಿಗಳನ್ನು ಪ್ರಮುಖ ಸಾಂವಿಧಾನಿಕ ಹುದ್ದೆಗಳಿಗೆ ನೇಮಕ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ದೇಶದ ಪ್ರಮುಖ ಸಾಂವಿಧಾನಿಕ ಸಂಸ್ಥೆಗಳ ಪಾವಿತ್ರ್ಯವನ್ನು ನಾಶ ಮಾಡಿವೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ.

ಅವರು ಕಾಂಗ್ರೆಸ್‌ ದೇಶದಾದ್ಯಂತ ಹಮ್ಮಿಕೊಂಡಿರುವ ‘ಸಂವಿಧಾನ ಉಳಿಸಿ’ ಎಂಬ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡುತ್ತಾ, ದೇಶದ ಪ್ರಸಕ್ತ ಸನ್ನಿವೇಶದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಸುಪ್ರೀಂ ಕೋರ್ಟ್ ಮತ್ತು ಸಂಸತ್‌ನಂತಹ ಅತ್ಯುನ್ನತ ಸಾಂವಿಧಾನಿಕ ಸಂಸ್ಥೆಗಳನ್ನು ಮೋದಿ ಸರಕಾರ ದುರ್ಬಳಕೆ ಮಾಡಿಕೊಂಡಿದೆ ಎಂದು ಗಂಭೀರ ಆರೋಪವನ್ನು ಮಾಡಿದ್ದಾರೆ.

ದೇಶದ ನ್ಯಾಯಾಂಗ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಧೀಶರ ವಿರುದ್ಧ ಬಂಡಾಯ ಎದ್ದ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ನ್ಯಾಯ ಕೋರಿ ಜನತಾ ನ್ಯಾಯಾಲಯದ ಮೊರೆ ಹೋಗಬೇಕಾದ ಘಟನೆಯ ಬಗ್ಗೆ ಅವರು ಆತಂಕ ವ್ಯಕ್ತಪಡಸಿದ್ದಾರೆ.

‘ಲೋಕಸಭೆಯಲ್ಲಿ ಮಾತನಾಡಲು ಕೇವಲ 15 ನಿಮಿಷ ಅವಕಾಶ ನೀಡಿದರೆ ಪ್ರಧಾನಿ ಮೋದಿ ಅವರ ಬೆವರಿಳಿಸುತ್ತೇನೆ. ರಫೇಲ್‌ ಯುದ್ಧ ವಿಮಾನ, ನೀರವ್‌ ಮೋದಿ, ಲಲಿತ್‌ ಮೋದಿ, ವಿಜಯ್‌ ಮಲ್ಯ ಅವರ ಬಗ್ಗೆ ಮಾತನಾಡಲು ಆರಂಭಿಸಿದರೆ ಮೋದಿ ಸಂಸತ್‌ನಲ್ಲಿ ನಿಲ್ಲುವುದಿಲ್ಲ’ ಎಂದು ರಾಹುಲ್‌ ಸವಾಲು ಹಾಕಿದರು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜನರು ಮೋದಿ ವಿರುದ್ಧ ಮತ ಚಲಾಯಿಸುವ ಮೂಲಕ ತಮ್ಮ ‘ಮನದ ಮಾತ’ನ್ನು ಅವರಿಗೆ ತಿಳಿಸಬೇಕು ಎಂದು ಅವರು ಹೇಳಿಕೊಂಡಿದ್ದಾರೆ.

 

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group