ಆಸಿಫಾಳ ಅತ್ಯಾಚಾರ ಮತ್ತು ಹತ್ಯೆ ನಡೆದದ್ದು ಖುಷಿ ನೀಡಿದೆ : ಕೇರಳದ ಆರೆಸ್ಸೆಸ್ ಕಾರ್ಯಕರ್ತ !!

ವರದಿಗಾರ (ಎ 13) : ಜಮ್ಮು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಆಸಿಫಾ ಎನ್ನುವ ಎಂಟರ ಹರೆಯದ ಬಾಲಕಿಯನ್ನು 4 ದಿನಗಳ ಕಾಲ ದೇವಸ್ಥಾನವೊಂದರಲ್ಲಿ ಕೂಡಿ ಹಾಕಿ ಸಾಮೂಹಿಕ ಅತ್ಯಾಚಾರಗೈದು ನಂತರ ಕಲ್ಲಿನಿಂದ ಹೊಡೆದು ಹತ್ಯೆಗೈದ ಘಟನೆ ಇದೀಗ ವಿಶ್ವದಾದ್ಯಂತ ಸದ್ದು ಮಾಡುತ್ತಿರುವ ಬೆನ್ನಲ್ಲೇ, ಕೇರಳದ ಕೋಟ್ಟಯಂನ ಆರೆಸ್ಸೆಸ್ ಕಾರ್ಯಕರ್ತ ವಿಷ್ಣು ನಂದಕುಮಾರ್ ಎನ್ನುವ ಕಿರಾತಕನೋರ್ವನ ಈ ಭೀಬತ್ಸಕ ಘಟನೆಯನ್ನು ಸಮರ್ಥಿಸಿಕೊಳ್ಳುವ ಫೇಸ್ಬುಕ್ ಪೋಸ್ಟ್ ಒಂದು ಕೇರಳದಾದ್ಯಂತ ವಿವಾದಕ್ಕೆ ಕಾರಣವಾಗಿದೆ. ಇದು ಆರೆಸ್ಸೆಸ್ ಸಂಘಟನೆಯ ಮನೋಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಸಾಮಾಜಿಕ ತಾಣಗಳಲ್ಲಿ ಕೇರಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮೊದಲು ಜಮ್ಮುವಿನಲ್ಲಿ “ಹಿಂದೂ ಏಕತಾ ಮಂಚ್” ಎನ್ನುವ ಸಂಘಟನೆ ಕೂಡಾ ಅತ್ಯಾಚಾರ ಆರೋಪಿಗಳ ಪರವಾಗಿ ತ್ರಿವರ್ಣ ಧ್ವಜ ಹಿಡಿದುಕೊಂಡು ಪ್ರತಿಭಟನೆ ಮಾಡಿದ್ದನ್ನು ನಾವಿಲ್ಲಿ ಸ್ಮರಿಸಬೇಕಾಗಿದೆ.
ಮನುಷ್ಯ ವರ್ಗಕ್ಕೇ ಕಳಂಕವಾದಂತಿರುವ ಆರೆಸ್ಸೆಸ್ ಕಾರ್ಯಕರ್ತ ವಿಷ್ಣು ನಂದಕುಮಾರ್ ತನ್ನ ಫೇಸ್ಬುಕ್ ಪೋಸ್ಟ್ ನಲ್ಲಿ ” ಈಕೆಯನ್ನು ಈಗ ಎಲ್ಲರೂ ಸೇರಿ ಕೊಂದದ್ದು ಒಳ್ಳೆಯದಾಯಿತು. ಇಲ್ಲದಿದ್ದರೆ ಈಕೆ ದೇಶಕ್ಕೆದುರಾಗಿ ಬಾಂಬ್ ಆಗಿ ಬರುತ್ತಿದ್ದಳು” ಎಂದು ಪೊಸ್ಟ್ ಹಾಕಿ ತನ್ನ ನೀಚ ಸಿದ್ಧಾಂತದ ಮನೋಸ್ಥಿತಿಯನ್ನು ವ್ಯಕ್ತಪಡಿಸಿದ್ದ. ಈ ಕಿರಾತಕ ವಿಷ್ಣು ಕೋಟ್ಟಯಂನ ಕೋಟಕ್ ಮಹೀಂದ್ರ ಬ್ಯಾಂಕಿನ ಪಾಲಿವ್ಯಾಟಂ ಶಾಖೆಯ ಸಹಾಯಕ ವ್ಯವಸ್ಥಾಪಕನಾಗಿ ಕಾರ್ಯನಿರ್ವಹಿಸುತ್ತಿದ್ದ. ಫೇಸ್ಬುಕ್ಕಿನಲ್ಲಿ ಈತನ ಪೋಸ್ಟ್ ವೈರಲ್ ಆದ ನಂತರ ಸಾಮಾಜಿಕ ತಾಣಗಳಲ್ಲಿ ಈ ಕಿರಾತಕನ ವಿರುದ್ಧ ಪ್ರಬಲ ಪ್ರತಿರೋಧ ವ್ಯಕ್ತವಾಗಿತ್ತು. ಪಕ್ಷಾತೀತವಾಗಿ ಎಲ್ಲರೂ ಆರೆಸ್ಸೆಸ್ ಕಾರ್ಯಕರ್ತನ ನೀಚ ಪ್ರವೃತ್ತಿಯನ್ನು ಖಂಡಿಸಿದರು ಮಾತ್ರವಲ್ಲ ಕೋಟಕ್ ಮಹೀಂದ್ರ ಬ್ಯಾಂಕಿನ ಫೇಸ್ಬುಕ್ ಪೇಜಿನಲ್ಲಿ ಈತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಪಡಿಸಿದ್ದರು.ಇದಕ್ಕೆ ಪೂರಕವಾಗಿ ಸ್ಪಂದಿಸಿದ ಬ್ಯಾಂಕ್ ಅಧಿಕೃತ ಹೇಳಿಕೆಯನ್ನು ನೀಡಿದ್ದು, “ಕೆಲಸದಲ್ಲಿ ನಿರೀಕ್ಷಿತ ಪ್ರದರ್ಶನ ಮಟ್ಟ ತೋರದ ವಿಷ್ಣು ನಂದಕುಮಾರನನ್ನು ಎಪ್ರಿಲ್ 11 ರಂದು ಕೆಲಸದಿಂದ ವಜಾ ಮಾಡಿದ್ದೇವೆ. ಇಂತಹಾ ಕೀಳು ಮಟ್ಟದ ಕಮೆಂಟನ್ನು ನಮ್ಮ ಓರ್ವ ಹಳೆ ಉದ್ಯೋಗಿ ಎಂದಲ್ಲ ಯಾರೇ ಮಾಡಿದ್ದರೂ ಕಠಿಣ ಶಬ್ದಗಳಲ್ಲಿ ನಾವದನ್ನು ಖಂಡಿಸುತ್ತೇವೆ ” ಎಂದು ಹೇಳಿಕೆ ನೀಡಿದ್ದರು.
ಒಟ್ಟಿನಲ್ಲಿ ಇಡೀ ವಿಶ್ವವೇ 8 ರ ಹರೆಯದ ಬಾಲಕಿಯೊಬ್ಬಳ ದಾರುಣ ಸ್ಥಿತಿ ಕಂಡು ಮರುಗುತ್ತಿದ್ದರೆ, ಆರೆಸ್ಸೆಸ್ಸಿನ ಕಾರ್ಯಕರ್ತನೋರ್ವ ಮಾತ್ರ ಅದನ್ನು ಸಮರ್ಥಿಸುವುದನ್ನು ನೋಡಿದರೆ ಆತನ ಮನೋಸ್ಥಿತಿ ಮತ್ತು ಆತನ ಸಿದ್ಧಾಂತ ಯಾವ ಮಟ್ಟದ್ದು ಎಂಬುವುದು ತಿಳಿದು ಬರುತ್ತದೆ

