ಕುವೆಂಪು ಜೀವಂತವಾಗಿದ್ದರೆ ಅಮಿತ್ ಶಾಗೆ ಕಾಲಿಡಲೂ ಅವಕಾಶ ನೀಡುತ್ತಿರಲಿಲ್ಲ: ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಭ್ರಷ್ಟಾಚಾರ ಎಸಗಿ ಜೈಲಿಗೆ ಹೋದ ಯಡಿಯೂರಪ್ಪರನ್ನು ಪಕ್ಕದಲ್ಲಿ ಕೂರಿಸಿಕೊಂಡು ನಮ್ಮ ಸರಕಾರದ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ.
ವರದಿಗಾರ (ಎ.04): ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇತ್ತೀಚೆಗೆ ರಾಷ್ಟ್ರಕವಿ ಕುವೆಂಪುರವರ ಕುಪ್ಪಳ್ಳಿಯಲ್ಲಿರುವ ಕವಿಶೈಲ ನಿವಾಸಕ್ಕೆ ಹಾಗೂ ಸಮಾಧಿಗೆ ಭೇಟಿ ನೀಡಿರುವುದರ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕುವೆಂಪುರವರು ಜೀವಂತವಾಗಿದ್ದರೆ ಅಮಿತ್ ಶಾಗೆ ಕಾಲಿಡಲೂ ಅವಕಾಶ ನೀಡುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದ ಜನಾಶೀರ್ವಾದ ಯಾತ್ರೆಯ ಅಂಗವಾಗಿ ಮಂಗಳವಾರ ಶಿವಮೊಗ್ಗದ ಗೋಪಿ ವೃತ್ತದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡುತ್ತಾ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರಾಷ್ಟ್ರ ಕವಿ ಕುವೆಂಪುರವರು ಸರ್ವ ಜನಾಂಗದ ಶಾಂತಿಯ ತೋಟವೆಂದು ಕರೆದಿದ್ದರು. ಆದರೆ ನರೇಂದ್ರ ಮೋದಿ ಹಾಗೂ ಅಮಿತ್ ಶಾ, ಈ ದೇಶವನ್ನು ಅಶಾಂತಿಯ ಬೀಡಾಗಿ ಮಾಡಲು ಹೊರಟಿದ್ದಾರೆ. ಕೋಮು ಭಾವನೆ ಹರಡುತ್ತಿದ್ದಾರೆ. ಕುವೆಂಪುರವರ ಸಂದೇಶಗಳಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಭ್ರಷ್ಟಾಚಾರ ಎಸಗಿ ಜೈಲಿಗೆ ಹೋಗಿ ಬಂದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪರನ್ನು ತಮ್ಮ ಪಕ್ಕದಲ್ಲಿ ಕೂರಿಸಿಕೊಂಡು ನಮ್ಮ ಸರಕಾರದ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಅವರನ್ನೇ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡುತ್ತಿರುವುದು ಲಜ್ಜೆಗೇಡಿತನದ ಪರಮಾವಧಿಯಾಗಿದೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಸರಕಾರದ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಬಿಜೆಪಿಗಿಲ್ಲ ಎಂದೂ ಹೇಳಿದ್ದಾರೆ.
