ಜಿಲ್ಲಾ ಸುದ್ದಿ

ವೆಸ್ಟರ್ನ್  ವಿದ್ಯಾಸಂಸ್ಥೆಯ ಹಗರಣವನ್ನು ಬಯಲಿಗೆಳೆದ ಕ್ಯಾಂಪಸ್ ಫ್ರಂಟ್ ; ವಂಚನೆಯ ವಿರುದ್ಧ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು

ವರದಿಗಾರ (ಮಾ 12) :  ಮಂಗಳೂರಿನ ವೆಸ್ಟರ್ನ್ ವಿದ್ಯಾಸಂಸ್ಥೆಯಲ್ಲಿ ಸಿವಿಲ್, ಮೆಕ್ಯಾನಿಕಲ್, ಸೇಫ್ಟಿ ಮುಂತಾದ ಕೋರ್ಸ್‍ಗಳನ್ನು ಅಧ್ಯಯನ ಮಾಡಿರುವ 2016-17 ರ ಅವಧಿಯಲ್ಲಿ ದಾಖಲಾಗಿರುವ ಸುಮಾರು 100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದೀಗ ವಂಚನೆಗೊಳಗಾಗಿದ್ದಾರೆ. ಸಂಸ್ಥೆಯ ನಿಯಮದಂತೆ ಕಾಲೇಜಿನಲ್ಲಿ ಕೋರ್ಸ್ ಮುಗಿದ ಮೇಲೆ ಉದ್ಯೋಗ ಖಾತರಿ , ತರಬೇತಿ ಮತ್ತು ಅಂತರಾಷ್ಟ್ರೀಯ ಮಾನ್ಯತೆ ಪಡೆದಂತಹ ನೆಬೋಶ್, ಅಯೋಶ್, ಫ್ರಾಂಕ್‍ಫಿನ್‍ನಂತಹ ಕೋರ್ಸ್‍ಗಳ ಸರ್ಟಿಫಿಕೇಟ್ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ವಿದ್ಯಾರ್ಥಿಗಳ ಕೋರ್ಸ್ ಮುಗಿದು ವರ್ಷಗಳು ಕಳೆದರೂ ಸಂಸ್ಥೆಯು ಯಾವುದೇ ಭರವಸೆಯನ್ನು ಪೂರೈಸಲಿಲ್ಲ. ಈ ಮೊದಲೇ ಎಲ್ಲಾ ಕೋರ್ಸುಗಳಿಗೆ ವಿಶ್ವವಿದ್ಯಾನಿಲಯದ ಮಾನ್ಯತೆ ಹೊಂದಿದ ಕೆ.ಎಸ್.ಒ.ಯು ಸರ್ಟಿಫಿಕೇಟ್ ದೊರಕಬೇಕಾಗಿದ್ದು, ಯು.ಜಿ.ಸಿಯು ಕೆ.ಎಸ್.ಒ.ಯುನ ಮಾನ್ಯತೆ ರದ್ದು ಮಾಡಿದ್ದರಿಂದ ವಿದ್ಯಾರ್ಥಿಗಳು ಅತಂತ್ರಗೊಂಡಿದ್ದರು, ಇದೀಗ ಕಾಲೇಜಿನ ಈ ನಡೆಯು ವಿದ್ಯಾರ್ಥಿಗಳನ್ನು ಇನ್ನಷ್ಟು ಸಂಕಷ್ಟಕ್ಕೀಡು ಮಾಡಿದೆ. ಯಾವುದೇ ಕಂಪೆನಿಗಳಿಗೆ ಉದ್ಯೋಗಕ್ಕೆಂದು ಅರಸಿ ಹೋದಾಗ ಕಂಪೆನಿಯು ಉದ್ಯೋಗಕ್ಕೆ ಬೇಕಾದಂತಹ ಪೂರಕ ದಾಖಲೆಗಳನ್ನು ಕೇಳುವಾಗ ವಿದ್ಯಾರ್ಥಿಗಳು ನಿರಾಶರಾಗಿ ವಾಪಸ್ಸಾಗುತ್ತಿದ್ದಾರೆ. ಈ ಬಗ್ಗೆ ಕಾಲೇಜಿನ ಪ್ರಾಂಶುಪಾಲರು ಮತ್ತು ನಿರ್ವಾಹಕರನ್ನು ಸಂಪರ್ಕಿಸಿದಾಗ ಬೇಜವಾಬ್ದಾರಿತನದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಒಟ್ಟಾರೆಯಾಗಿ ಕಾಲೇಜಿನ ಆಡಳಿತ ಮಂಡಳಿಯ ಮೋಸದಾಟದ ವಿರುದ್ಧ  ವಿದ್ಯಾರ್ಥಿಗಳು ಆಕ್ರೋಶಭರಿತರಾಗಿ ಪ್ರತಿಭಟನೆಯನ್ನು ನಡೆಸಿದರು.

ಪ್ರತಿಭಟನೆಯನ್ನುದ್ದೇಶಿಸಿ ರಾಜ್ಯ ಸಮಿತಿ ಸದಸ್ಯ ಅಥಾವುಲ್ಲಾ ಮಾತನಾಡಿ “ ಕಡುಬಡತನದಿದಂದ ಬಂದಂತಹ ವಿದ್ಯಾರ್ಥಿಗಳಿಂದ ದುಬಾರಿ ಶುಲ್ಕವನ್ನು ಪಡೆದು ಶಿಕ್ಷಣವನ್ನು ವ್ಯಾಪಾರೀಕರಣ ಮಾಡುತ್ತಿರುವುದು ಖಂಡನೀಯ. ವಾರದೊಳಗೆ ಸಮಸ್ಯೆಯನ್ನು ಬಗೆಹರಿಸದೇ ಇದ್ದಲ್ಲಿ ಪ್ರತಿಭಟನೆಯನ್ನು ಉಗ್ರ ರೂಪದಲ್ಲಿ ನಡೆಸಲು ಕ್ಯಾಂಪಸ್ ಫ್ರಂಟ್ ಸನ್ನದ್ಧವಾಗಿದೆ”. ಜಿಲ್ಲಾಧ್ಯಕ್ಷ ಇಮ್ರಾನ್ ಪಿಜೆ ಮಾತನಾಡಿ “ ಕಳೆದ ಒಂದು ತಿಂಗಳಿಂದ ವಿದ್ಯಾಸಂಸ್ಥೆಯನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಸಂಪರ್ಕಕ್ಕೆ ಸಿಗದೇ ಬೇಜವಾಬ್ದಾರಿತನದ ಹೇಳಿಕೆ ನೀಡಿ ಕಳುಹಿಸುತ್ತಿದ್ದಾರೆ.  ಸಂಸ್ಥೆಯವರು ಯಾವುದೇ ಪ್ರಭಾವವನ್ನು ಬಳಸಿದರೂ ವಿದ್ಯಾರ್ಥಿ ಶಕ್ತಿಗಳು ಒಂದುಗೂಡಿ ಇಂತಹ ಸಂಸ್ಥೆಗಳ ಹಗರಣವನ್ನು ಬಯಲಿಗೆಳೆಯಲಿದ್ದೇವೆ.

ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು ಘೋಷಣೆ ಕೂಗಿದರಲ್ಲದೇ ಕಾಲೇಜಿನ ಭಿತ್ತಿ ಪತ್ರವನ್ನು ಹರಿಯುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ಕಾರ್ಯದರ್ಶಿ ಸಾದಿಕ್ ಪುತ್ತೂರು, ವಿದ್ಯಾರ್ಥಿಗಳಾದ ಪ್ರಿಯಾ, ಶೌಕತ್, ಫಾಝಿಲ್, ಹಿಫಾಝ್ ಉಪಸ್ಥಿತರಿದ್ದರು.

ಪ್ರತಿಭಟನೆಯ ಬೇಡಿಕೆಗಳು ಈ ಕೆಳಗಿನಂತಿವೆ  :

  1. ಒಂದು ವಾರದೊಳಗೆ ವಂಚನೆಗೊಳಗಾದ ಎಲ್ಲಾ ವಿದ್ಯಾರ್ಥಿಗಳನ್ನು ಸಂಸ್ಥೆಯ ಮುಖ್ಯಸ್ಥರು ಸಂಪರ್ಕಿಸಿ ಸಭೆ ನಡೆಸುವುದು.
  2. ವಿದ್ಯಾರ್ಥಿಗಳಿಗೆ ಬೇಕಾಗಿರುವ ಎಲ್ಲಾ ದಾಖಲೆ ಪತ್ರಗಳನ್ನು ಒದಗಿಸಬೇಕು.
  3. ಅದೇ ರೀತಿ ವಿದ್ಯಾರ್ಥಿಗಳಿಗೆ ಉದ್ಯೋಗ ಖಾತರಿಪಡಿಸಿರುವ ಕಂಪೆನಿಗಳಲ್ಲಿ ಉದ್ಯೋಗ ಮಾಡಿಕೊಡುವುದು
To Top
error: Content is protected !!
WhatsApp chat Join our WhatsApp group