ವರದಿಗಾರ ವಿಶೇಷ

 ನ್ಯಾಯಾಂಗದ ಇತಿಹಾಸದಲ್ಲೆ ಮರೆಯಲಾಗದ ಘಟನೆ; ಲೋಕಾಯುಕ್ತ ವಿಶ್ವನಾಥ್​ ಶೆಟ್ಟಿಗೆ ಚಾಕು ಇರಿತ ಪ್ರಕರಣ :  ಸಂಪೂರ್ಣ ಮಾಹಿತಿ

ವರದಿಗಾರ (ಮಾ.11): ನ್ಯಾಯಾಂಗ ಇತಿಹಾಸದಲ್ಲೆ ಇದೊಂದು ಮರೆಯಲಾರದಂತಹ ಕಹಿ ಘಟನೆ. ಲೋಕಾಯುಕ್ತ ಕಚೇರಿಯಲ್ಲೆ ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ್ ಶೆಟ್ಟಿ ಹತ್ಯೆಗೆ ಯತ್ನ ನಡೆದಿತ್ತು. ತಮಕೂರು ಮೂಲದ ತೇಜಸ್​​​​ ಶರ್ಮಾ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿಗೆ ಚಾಕುವಿನಿಂದ ಇರಿದು ಹತ್ಯೆಗೆ ಯತ್ನಿಸಿದ್ದ. ಇದು ದೇಶದಾದ್ಯಂತ ಸುದ್ದಿಯಾಗಿತ್ತು. ಆದ್ರೆ ಅವನು ಈ ಕಾರಣಕ್ಕೆ ಚಾಕು ಇರಿದ್ದಿದ್ದ, ಅವನು ಆ ಕಾರಣಕ್ಕೆ ಚಾಕು ಇರಿದ್ದ ಅನ್ನೋ ಮಾತುಗಳಷ್ಟೇ ಕೇಳಿಬಂದಿತ್ತು. ಅಲ್ದೇ ಅವತ್ತು ಲೋಕಾಯುಕ್ತ ಕಚೇರಿಯಲ್ಲಿ ನಿಜಕ್ಕೂ ನಡೆದಿದ್ದೇನು ಅನ್ನೋದು, ಅಲ್ಲಿ ಇರುವವರನ್ನ ಬಿಟ್ರೆ ಬೇರೆಯಾರಿಗೂ ಗೊತ್ತಿರ್ಲಿಲ್ಲ. ಆದ್ರೆ ‘ವರದಿಗಾರ’ ಇವತ್ತು ಆ ಬಗೆಗಿನ ಎಕ್ಸ್​​ ಕ್ಲೂಸಿವ್​​​​​​​ ಹಾಗೂ ಸಂಪೂರ್ಣ ಮಾಹಿತಿ ನಿಮ್ಮ ಮುಂದೆ ಇಡ್ತಿದೆ.

ಅಂದು ಲೋಕಾಯುಕ್ತ ಕಚೇರಿಯಲ್ಲಿ ನಡೆದಿದ್ದೇನು..?

ಹೌದು, ಅವತ್ತು ಆರೋಪಿ ತೇಜಸ್​​​​​​ ಶರ್ಮಾ ಲೋಕಾಯುಕ್ತರನ್ನ ಭೇಟಿ ಮಾಡೋದಕ್ಕೆ ಲೋಕಾಯುಕ್ತ ಕಚೇರಿಗೆ ಬಂದಿದ್ದ. ಗಂಟೆ ಸುಮಾರು 12:45 ನಿಮಿಷ. ಬಂದವನು ರಿಸಪ್ಷನ್​​ನಲ್ಲಿ ವಿಸಿಟರ್ಸ್​​ ಬುಕ್​ನಲ್ಲಿ ತನ್ನ ಹೆಸರು ಬರೆದು, ವೈಟಿಂಗ್​ ಲಾಂಜ್​​ನಲ್ಲಿ ಕೂತಿದ್ದ. ಈ ವೇಳೆ ಕಚೇರಿ ಅಟೆಂಡರ್​​ ಪಳನಿ, ಒಂದು ಸ್ಲಿಪ್​​ನಲ್ಲಿ ಆರೋಪಿಯ ಹೆಸರು ಬರೆದು ಲೋಕಾಯುಕ್ತರಿಗೆ ನೀಡ್ತಾನೆ. ಅಲ್ದೇ ಅವರು ನಿಮ್ಮತ್ರ ಏನೋ ಮಾತನಾಡ ಬೇಕು ಅಂತ ಹೇಳ್ತಾನೆ. ಇದಕ್ಕೆ ಒಪ್ಪಿಗೆ ಸೂಚಿಸಿದ ಲೋಕಾಯುಕ್ತರು ತೇಜಸ್​ನನ್ನ ಕಚೇರಿ ಒಳಗೆ ಬಿಡುವಂತೆ ಸೂಚಿಸಿದ್ದಾರೆ. ಲೋಕಾಯುಕ್ತರ ಸೂಚನೆಯ ಮೇರೆಗೆ ಅಟೆಂಡರ್​​ ಪಳನಿ ತೇಜಸ್​​​ ಶರ್ಮಾನನ್ನ ಲೋಕಾಯುಕ್ತರ ಕೊಠಡಿ ಒಳಗೆ ಕರೆದೊಯ್ಯುತ್ತಾನೆ. ಈ ವೇಳೆ ಅಟೆಂಡರ್​​ ಪಳನಿ ಕೊಠಡಿ ಬಿಟ್ಟು ಹೊರಗೆ ನಡೀತಾನೆ. ಆದ್ರೆ ಲೋಕಾಯುಕ್ತರ ಕೊಠಡಿ ಒಳಗೆ ಹೋದ ತೇಜಸ್​ ಶರ್ಮಾ, ಏಕಾಏಕಿಯಾಗಿ ತನ್ನ ಬಳಿ ಇದ್ದ ಚಾಕುವಿನಿಂದ ಲೋಕಾಯುಕ್ತ ನ್ಯಾಯಮೂರ್ತಿಯ ಹೊಟ್ಟೆಯ ಎಡ ಭಾಗಕ್ಕೆ ಇರಿದಿದ್ದಾನೆ. ಈ ವೇಳೆ ತೇಜಸ್​ ಕೊಠಡಿ ಒಳಗೆ ಹೊಕ್ಕು ಆಗಿದ್ದು ಕೇವಲ 3 ನಿಮಿಷಗಳು ಮಾತ್ರ.

ಚಾಕು ಇರಿತದ ನೋವಿನಿಂದ ಚೀರಾಡಿದ ಲೋಕಾಯುಕ್ತರು ತಕ್ಷಣವೇ ಕುಸಿದು ಬಿದ್ದಿದ್ದಾರೆ. ಲೋಕಾಯುಕ್ತರ ಚೀರಾಟದ ಶಬ್ಧ ಕೇಳಿ ಭಯಗೊಂಡ ಕಚೇರಿ ಸಿಬ್ಬಂದಿಗಳು ತಕ್ಷಣವೇ ಕೊಠಡಿ ಒಳಕ್ಕೆ ಓಡೋಡಿ ಧಾವಿಸಿದ್ದಾರೆ. ಒಳ ಹೊಕ್ಕ ಕಚೇರಿ ಸಿಬ್ಬಂದಿಗಳಾದ ಪುರುಷೋತ್ತಮ್​​​, ಸತೀಶ್​ ಹಾಗೂ ಅಟೆಂಡರ್​ ಪಳನಿ ನೋಡಿದ್ದು ಭಯಾನಕ ದೃಶ್ಯ. ಹೌದು.. ಒಳಹೊಕ್ಕ ಸಿಬ್ಬಂದಿಗಳ ಕಣ್ಣಿಗೆ ಬಿದ್ದಿದ್ದು, ಆರೋಪಿ ತೇಜಸ್​ ಶರ್ಮಾ ಒಂದು ಕೈಯ್ಯಲ್ಲಿ ಚಾಕು ಹಾಗೂ ಇನ್ನೊಂದು ಕೈಯ್ಯಿಂದ ಲೋಕಾಯುಕ್ತ ವಿಶ್ವನಾಥ್​​ ಶೆಟ್ಟಿಯವರ ಕತ್ತನ್ನ ಲಾಕ್​ ಮಾಡಿ ಹಿಡಿದುಕೊಂಡಿದ್ದಾನೆ. ಕೇವಲ 3 ನಿಮಿಷಗಳ ಅಂತರದಲ್ಲಿ ಆರೋಪಿ ತೇಜಸ್​ ಶರ್ಮಾ ನ್ಯಾಧೀಶರ ಹಣೆ, ಎಡಗೈಯ ಅಂಗೈ, ಎಡಭಾಗದ ಕಿಬ್ಬೊಟ್ಟೆ ಹಾಗೂ ಎದೆಯ ಮಧ್ಯಭಾಗಕ್ಕೆ ಚಾಕುವಿನಿಂದ ಇರಿದಿದ್ದ. ಈ ಪರಿಣಾಮ ರಕ್ತಸ್ತ್ರಾವ ಆಗ್ತಿತ್ತು. ಇದನ್ನ ಕಂಡ ಸಿಬ್ಬಂದಿಗಳು, ಆರೋಪಿಯನ್ನ ಹಿಡಿದು ಅದೇ ಕೋಣೆಯಲ್ಲಿ ಕೂಡಿ ಹಾಕಿ, ನ್ಯಾಯಮೂರ್ತಿಗಳನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ದೇ ತಕ್ಷಣವೆ ಅಲ್ಲೇ ಪಕ್ಕದಲ್ಲಿರುವ ವಿಧಾನ ಸೌಧ ಪೊಲೀಸ್​ ಠಾಣೆಗೆ ವಿಷಯ ಮುಟ್ಟಿಸಿದ್ದಾರೆ. ತಕ್ಷಣವೇ ಕಾರ್ಯಪ್ರವರ್ತರಾದ ನಗರದ ಕೇಂದ್ರ ವಿಭಾಗದ ಡಿಸಿಪಿ ಚಂದ್ರಗುಪ್ತ ಆರೋಪಿಯನ್ನ ಬಂಧಿಸಿ, ತೀವ್ರ ವಿಚಾರಣೆ ನಡೆಸಿದ್ದಾರೆ. ಮೊದ ಮೊದಲು ಆರೋಪಿ ತೇಜಸ್​ ಶರ್ಮಾ ಅಡ್ಡ ಗೋಡೆ ಮೇಲೆ ದೀಪ ಇಟ್ಟ ರೀತಿಯಲ್ಲಿ ಹೇಳಿಕೆಗಳು ನೀಡದ್ರು, ಪೊಲೀಸರ ಚಾರ್ಜ್​ ಬಳಿಕ ಮುತ್ತು ಉದುರಿದ ಹಾಗೆ ಸತ್ಯವನ್ನ ಬಿಚ್ಚಿಟ್ಟಿದ್ದಾನೆ. ಆರೋಪಿ ಅವತ್ತು ಏನು ಹೇಳಿದ್ದ ಅನ್ನೋದು ‘ವರದಿಗಾರ’ ಮೇಲೆ ವಿವರಿಸಿದೆ.

ಈ ಪ್ರಕರಣದ ಹಿನ್ನೆಲೆಯೇನು..?

ಆರೋಪಿ ತೇಜಸ್​ ಶರ್ಮಾ ಮೂಲತಃ ರಾಜಸ್ಥಾನದವನು. ಆದ್ರೆ ಸದ್ಯ ನೆಲೆಸಿರೋದು ಕರ್ನಾಟಕದ ತುಮಕೂರಿನಲ್ಲಿ. ವೃತ್ತಿಯಲ್ಲಿ ಫರ್ನಿಶಿಂಗ್​ ಅಂಗಡಿಯೊಂದನ್ನ ನಡೆಸಿಕೊಂಡು ಬರುತ್ತಿದ್ದ. ಅಲ್ದೇ ತುಮಕೂರಿನ ಬಹುತೇಕ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ಬೇಕಾಗುವ ಪೀಠೋಪಕರಣಗಳನ್ನ ತಯಾರಿಸಿ ಸರಬರಾಜು ಮಾಡ್ತಿದ್ದ. ಅಂತಯೇ, 2013ರಲ್ಲಿ ತುಮಕೂರಿನ ಸರ್ಕಾರಿ ಶಾಲೆಯೊಂದಕ್ಕೆ ಈತ ಡಸ್ಕ್​​​ ತಯಾರಿಸುವ ಗುತ್ತಿಗೆ ಪಡೆದುಕೊಂಡಿದ್ದ. ಆದ್ರೆ, ಆ ಶಾಲೆಯ ಪ್ರಾಂಶುಪಾಲ ಕುಮಾರಸ್ವಾಮಿ, ತೇಜಸ್​ ಶರ್ಮಾಗೆ ನೀಡ ಬೇಕಿದ್ದ ಹಣದ ಬಹುಪಾಲು ತನ್ನ ಜೇಬಿಗೆ ಇಳಿಸುತ್ತಿದ್ದಾನೆ ಎಂದು, ಆರೋಪಿ ಶರ್ಮಾ ಲೋಕಾಯುಕ್ತರಿಗೆ ದೂರು ನೀಡಿದ್ದ. ಆದ್ರೆ ಇಷ್ಟು ವರ್ಷಗಳಾದ್ರು ತೇಜಸ್​ ಶರ್ಮಾಗೆ ನ್ಯಾಯ ಸಿಗಲಿಲ್ಲ ಅನ್ನೋ ಕಾರಣಕ್ಕೆ ಆರೋಪಿ ತೇಜಸ್​ ಶರ್ಮಾ ಈ ರೀತಿ ಮಾಡಿದ್ದಾನೆ ಎಂದು ಖಾಕಿಗಳ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಆ ಬಳಿಕ ಆರೋಪಿಯನ್ನ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ ಪೊಲೀಸರು ಹೆಚ್ಚಿನ ತನಿಖೆಗೆ 5 ದಿನಗಳ ಕಾಲ ತಮ್ಮೆ ಕಸ್ಟಡಿಯಲ್ಲೇ ಇರಿಸಿಕೊಂಡಿದ್ದಾರೆ.

ಈ ಘಟನೆ ಬಳಿಕ ಎಚ್ಚೆತ್ತ ರಾಜ್ಯ ಸರ್ಕಾರ..!

ತೇಜಸ್​ ಶರ್ಮಾ ಲೋಕಾಯುಕ್ತಕ್ಕೆ ಹೋಗಿ ಲೋಕಾಯುಕ್ತರಿಗೇ ಚಾಕು ಇರಿಯಲು ಸಾಧ್ಯವಾಗಿದ್ದು ಒಂದೇ ಒಂದು ಕಾರಣದಿಂದ. ಹೌದು.. ಲೋಕಾಯುಕ್ತ ಕಚೇರಿಯ ಮೆಟಲ್​​ ಡಿಟಕ್ಟರ್​​ ಪಾಳು ಬಿದ್ದು 6 ತಿಂಗಳೇ ಕಳೆದು ಹೋಗಿವೆ. ಹೀಗಾಗಿ ಆರೋಪಿ ತೇಜಸ್​ ಶರ್ಮಾ ಒಳ ಹೊಕ್ಕಾಗ ಆತನ ಬಳಿ ಚಾಕು ಇದೆ ಅನ್ನೋದು ಯಾರಿಗೂ ಗೊತ್ತಾಗಲಿಲ್ಲ. ಒಂದು ವೇಳೆ ಮೆಟಲ್​ ಡಿಟಕ್ಟರ್​​​​ ಸರಿಯಾಗಿ ಕಾರ್ಯನಿವೃಹಿಸುತ್ತಿದ್ದರೆ, ಇಂತಹ ಪ್ರಸಂಗೆ ಲೋಕಾಯುಕ್ತರಿಗೆ ಹಾಗೂ ರಾಜ್ಯ ಸರ್ಕಾರಕ್ಕೆ ಎದುರಾಗುತ್ತಿರಲಿಲ್ಲ. ಹೀಗಾಗಿ, ಬೇಲಿ ಎದ್ದು ಹೊಲ ಮೇಯ್ದಂತೆ ಅನ್ನೋ ಗಾದೆ ಹಾಗೆ ಆಗಿದೆ ರಾಜ್ಯ ಸರ್ಕಾರದ ಸ್ಥಿತಿ.

ಇನ್ನು, ಲೋಕಾಯುಕ್ತರಿಗೆ ಚಾಕು ಇರಿತ ಅನ್ನೋ ಸುದ್ದಿ ಕಿವಿಗೆ ಬೀಳುತ್ತಿದ್ದಂತೆ, ರಾಜ್ಯ ಸರ್ಕಾರ ನಿದ್ದೆಯಿಂದ ಎದ್ದು ಎಲ್ಲಾ ಕಡೆ ಸೆಕ್ಯೂರಿಟಿ ಕೊಡಿ ಅಂತ ಆದೇಶ ಹೊರಡಿಸಿತು. ಅಲ್ದೇ ಲೋಕಾಯುಕ್ತ ಕಚೇರಿಯ ಮೆಟಲ್​​ ಡಿಟಕ್ಟರ್​​​​ರನ್ನ ಸರಿಡಿಸಲು ಘಟನೆ ನಡೆದ ಮರುದಿನ ಬೆಳಿಗ್ಗೆಯೇ ಮೆಕ್ಯಾನಿಕ್​​ಗಳನ್ನು ಕಳುಹಿಸಿತು. ಅಲ್ದೇ ಇತರೆ ಎಲ್ಲಾ ಸರ್ಕಾರಿ ಕಚೇರಿಗಳಲ್ಲೂ ಕೂಡ ಹೇಗಿದೆ ಭದ್ರತೆ ಅನ್ನೋದನ್ನ ಪರಿಶೀಲಿಸಲು ಸೂಚಿಸಿತು.

ಸದ್ಯ ಹೇಗಿದ್ದಾರೆ ಲೋಕಾಯುಕ್ತ ವಿಶ್ವನಾಥ್​​ ಶೆಟ್ಟಿ..?

ಚಾಕು ಇರಿತಕ್ಕೆ ಒಳಗಾದ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್​​ ಶೆಟ್ಟಿ ಮಲ್ಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಐಸಿಯೂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂಲಗಳ ಪ್ರಕಾರ, ಹೊಟ್ಟೆಯ ಎಡಭಾಗಕ್ಕೆ ಚಾಕು ಆಳವಾಗಿ ಇಳಿದಿದೆ. ಹೀಗಾಗಿ ದ್ರವ ರೂಪದ ಆಹಾರವಷ್ಟೇ ಸದ್ಯಕ್ಕೆ ನೀಡಲಾಗ್ತಿದೆ. ಜೊತೆಗೆ ಓಡಾಡೋದಕ್ಕೆ ಕಷ್ಟವಾಗ್ತಿದೆ. ಹೀಗಾಗಿ ಇನ್ನೂ ಕೆಲವು ದಿನಗಳ ಕಾಲ ಐಸಿಯೂನಲ್ಲೇ ಅವರಿಗೆ ಚಿಕಿತ್ಸೆ ಮುಂದುವರೆಯಲಿದೆ. ಜೊತೆಗೆ ಇನ್ನೂ ಎರಡ್ಮೂರು ದಿನಗಳ ಕಾಲ ದ್ರವ ರೂಪದ ಆಹಾರವನ್ನೇ ನೀಡಲಾಗುತ್ತೆ. ಆ ಬಳಿಕ ಘನ ರೂಪದ ಆಹಾರವನ್ನ ನೀಡಲು ವೈದ್ಯರು ಸೂಚಿಸಿದ್ದಾರೆ ಎನ್ನುತ್ತಿದೆ ಆಸ್ಪತ್ರೆಯ ಮೂಲಗಳು.

ವರದಿಗಾರ ಬಳಿ ಇರುವ ಎಫ್ಐಆರ್ ಪ್ರತಿ:

ಆರೋಪಿ:

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group