ರಾಷ್ಟ್ರೀಯ ಸುದ್ದಿ

‘ಆಂಧ್ರದ ಜನತೆಯ ಒಳಿತಿಗಾಗಿ’ ಬಿಜೆಪಿಗೆ ಕೈ ಕೊಟ್ಟ ಟಿಡಿಪಿ

ಕೇಂದ್ರ ಸರಕಾರದಿಂದ ಹೊರಬಂದ ಬಿಜೆಪಿಯ ಎರಡನೇಯ ಅತೀ ದೊಡ್ದ ಮಿತ್ರಪಕ್ಷ

ಚುನಾವಣಾ ಪೂರ್ವ ಭರವಸೆಯನ್ನು ಈಡೇರಿಸದ ಆರೋಪ!

ಈಶಾನ್ಯದ ಗೆಲುವಿನ ಸಂಭ್ರಮ ಮುಗಿಯುವುದಕ್ಕೆ ಮುನ್ನವೇ ದಕ್ಷಿಣದಿಂದ ಆಘಾತ

ವರದಿಗಾರ(8-03-2018): ಕ್ಷಿಪ್ರ ರಾಜಕೀಯ ಬೆಳವಣಿಗೆಯೊಂದರ ಭಾಗವಾಗಿ, ಆಂಧ್ರಪ್ರದೇಶದ ತೆಲುಗು ದೇಶಂ ಪಾರ್ಟಿ(ಟಿಡಿಪಿ) , ಬಿಜೆಪಿ ನೇತೃತ್ವದ ಕೇಂದ್ರ ಸರಕಾರದಿಂದ ಹೊರಬಂದಿದೆ.

ಟಿಡಿಪಿ ನಾಯಕ, ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಬುಧವಾರ ರಾತ್ರಿ ಟ್ವಿಟ್ಟರ್ ಮೂಲಕ ತಮ್ಮ ನಿರ್ಧಾರ್ವನ್ನು ತಿಳಿಸಿದರು. ತಮ್ಮ ನಿರ್ಧಾರವನ್ನು ಪ್ರಧಾನ ಮಂತ್ರಿಯವರಿಗೆ ದೂರವಾಣಿ ಮುಖಾಂತರ ತಿಳಿಸಲು ಪ್ರಯತ್ನಿಸಿದ್ದು, ಅವರು ಸಂಪರ್ಕಿಸಲು ಲಭ್ಯವಿರಲಿಲ್ಲ ಎಂದು ಚಂದ್ರಬಾಬು ನಾಯ್ಡು ಟ್ವೀಟ್ ಮಾಡಿದ್ದಾರೆ.

ತಾನು ಯಾರೊಂದಿಗೂ ಕೋಪಗೊಂಡಿಲ್ಲ. ಈ ನಿರ್ಧಾರವನ್ನು ಆಂಧ್ರಪ್ರದೇಶದ ಜನರ ಒಳಿತಿಗಾಗಿ ತೆಗೆದುಕೊಳ್ಳಲಾಗಿದೆ ಎಂದೂ ಅವರು ತಿಳಿಸಿದ್ದಾರೆ.

ಟಿಡಿಪಿ ಈ ಹಿಂದಿನಿಂದಲೇ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನದ ಬೇಡಿಕೆ ನೀಡಿತ್ತು. ಬಿಜೆಪಿಯು ಟಿಡಿಪಿ ಜೊತೆ ಚುನಾವಣಾ ಪೂರ್ವ ಒಪ್ಪಂದದಂತೆ ಈ ಬೇಡಿಕೆ ಈಡೇರಿಸಬೇಕಿತ್ತು. ಆದರೆ, ಇದೀಗ ಬೇಡಿಕೆ ಈಡೇರಿಸದಿದ್ದಾಗ ಟಿಡಿಪಿ ಕೇಂದ್ರ ಸರಕಾರದಿಂದ ಹೊರಬಂದಿದೆ.

ಕೇಂದ್ರ ಸರಕಾರದಲ್ಲಿ ಟಿಡಿಪಿಯ ಎರಡು ಸಚಿವರಿದ್ದು, ಅವರು ಗುರುವಾರದಂದು ರಾಜೀನಾಮೆ ನೀಡುವುದೆಂದು ನಾಯ್ಡು ತಿಳಿಸಿದ್ದಾರೆ.

ಟಿಡಿಪಿ ಪಕ್ಷವು 16 ಲೋಕಸಭಾ ಸಂಸದರು ಹಾಗೂ 6 ರಾಜ್ಯಸಭಾ ಸದಸ್ಯರನ್ನು ಹೊಂದಿದೆ.

ಈಗಾಗಲೇ ಬಿಜೆಪಿಯ ಅತೀ ದೊಡ್ಡ ಮಿತ್ರಪಕ್ಷವಾದ ಶಿವಸೇನೆಯು ಈ ವರ್ಷಾಂತ್ಯದಲ್ಲಿ ಮೈತ್ರಿಕೂಟದಿಂದ ಹೊರಬರುವುದಾಗಿ ತಿಳಿಸಿದೆ. ಶಿವಸೇನೆಯು 18 ಲೋಕಸಭಾ ಸದಸ್ಯರು ಹಾಗೂ 3 ರಾಜ್ಯಸಭಾ ಸದಸ್ಯರನ್ನು ಹೊಂದಿದೆ.

ಕರ್ನಾಟಕದಲ್ಲಿ ಅಧಿಕಾರ ಪಡೆಯುವ ಮೂಲಕ ದಕ್ಷಿಣ ಭಾರತದಲ್ಲಿ ತನ್ನ ನೆಲೆ ಭದ್ರಗೊಳಿಸುವ ಕನಸು ಕಾಣುತ್ತಿರುವ ಬಿಜೆಪಿಗೆ ಟಿಡಿಪಿಯ ನಿರ್ಧಾರವು ಆಘಾತಕರವಾಗಿದೆ.

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group