ರಾಷ್ಟ್ರೀಯ ಸುದ್ದಿ

ತಮಿಳುನಾಡು: ಪೆರಿಯಾರ್ ಪ್ರತಿಮೆ ಹಾನಿಗೊಳಿಸಿದ ದುಷ್ಕರ್ಮಿಗಳು

ಪೆರಿಯಾರ್ ಪ್ರತಿಮೆಗಳಿಗೂ ಲೆನಿನ್ ಪ್ರತಿಮೆಯ ಗತಿ ಬರಬಹುದೆಂದು ಫೇಸ್ಬುಕ್ ನಲ್ಲಿ ಬಿಜೆಪಿ ನಾಯಕ ಹೇಳಿದ ಕೆಲವೇ ಗಂಟೆಗಳಲ್ಲಿ ನಡೆದ ಕೃತ್ಯ

ವರದಿಗಾರ(06-03-2018): ತ್ರಿಪುರಾದಲ್ಲಿ ಬಿಜೆಪಿ ಕಾರ್ಯಕರ್ತರು ಕಮ್ಯೂನಿಸ್ಟ್ ಕ್ರಾಂತಿಕಾರಿ ಲೆನಿನ್ ಪ್ರತಿಮೆಯನ್ನು ನೆಲಸಮಗೊಳಿಸಿದ್ದನ್ನು ಸಮರ್ಥಿಸಿ, ತಮಿಳುನಾಡಿನ ‘ಪೆರಿಯಾರ್’ ಎಂದೇ ಜನಪ್ರಿಯರಾಗಿರುವ ಇವಿಆರ್ ರಾಮಸಾಮಿಯವರ ಪ್ರತಿಮೆಗೂ ಇದೇ ಗತಿ ಬರಬಹುದೆಂದು ಬಿಜೆಪಿ ನಾಯಕನು ಹೇಳಿದ ಕೆಲವೇ ಘಂಟೆಗಳಲ್ಲಿ, ಪೆರಿಯಾರ್ ಪ್ರತಿಮೆಯೊಂದು ಹಾನಿಗೊಳಗಾದ ಘಟನೆ ವರದಿಯಾಗಿದೆ.

ತಮಿಳುನಾಡಿನ ತಿರುಪಟ್ಟೂರ್ ಕಾರ್ಪೊರೇಷನ್ ಕಚೇರಿಯಲ್ಲಿದ್ದ ಪೆರಿಯಾರ್ ಪ್ರತಿಮೆಯು ದುಷ್ಕರ್ಮಿಗಳಿಂದ ಹಾನಿಗೊಳಗಾಗಿದೆ. ಪ್ರತಿಮೆಯ ಮೂಗು ಹಾಗೂ ಕನ್ನಡಕವನ್ನು ಹಾನಿಗೊಳಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಒಬ್ಬನು ಬಿಜೆಪಿ ಕಾರ್ಯಕರ್ತನಾಗಿದ್ದು, ಇನ್ನೋರ್ವ ಸಿಪಿಐ ಕಾರ್ಯಕರ್ತನಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

ತ್ರಿಪುರಾದಲ್ಲಿ ಬಿಜೆಪಿ ಕಾರ್ಯಕರ್ತರು ನಿನ್ನೆ ಲೆನಿನ್ ಪ್ರತಿಮೆಯನ್ನು ನೆಲಸಮಗೊಳಿಸಿದ್ದರು. ಇದನ್ನು ಸಮರ್ಥಿಸಿ ಫೇಸ್ಬುಕ್ ನಲ್ಲಿ ಪೋಸ್ಟ್ ಹಾಕಿದ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಎಚ್ ರಾಜಾ, ಪೆರಿಯಾರ್ ಪ್ರತಿಮೆಗಳನ್ನೂ ನೆಲಸಮಗೊಳಿಸಲಾಗುವುದೆಂದು ಹೇಳಿದ್ದರು.
” ಲೆನಿನ್ ಯಾರು ಮತ್ತು ಭಾರತ ಹಾಗೂ ಲೆನಿನ್ ಗೆ ಏನು ಸಂಬಂಧ? ಕಮ್ಯೂನಿಸ್ಟರೊಂದಿಗೆ ಭಾರತಕ್ಕೇನು ಸಂಬಂಧವಿದೆ? ತ್ರಿಪುರಾದಲ್ಲಿ ಲೆನಿನ್ ಪ್ರತಿಮೆಯನ್ನು ತೆಗೆಯಲಾಗಿದೆ. ಇಂದು ಲೆನಿನ್, ನಾಳೆ ಜಾತಿವಾದಿ ಇವಿಆರ್ ರಾಮಸಾಮಿ ಪ್ರತಿಮೆಗಳಾಗಿರಬಹುದು(ನೆಲಸಮಗೊಳಿಸುವುದು)” ಎಂದು ಅವರು ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು.

ತಮಿಳುನಾಡಿನಿಂದ ತೀವ್ರ ವಿರೋಧ ವ್ಯಕ್ತವಾದಾಗ ತನ್ನ ಪೋಸ್ಟ್ ಡಿಲೀಟ್ ಮಾಡಿ, ಅದು ಬೇರೆ ಯಾರೋ ತನ್ನ ಪೇಜ್ ನಲ್ಲಿ ಪೋಸ್ಟ್ ಮಾಡಿದ್ದೆಂದು ರಾಗ ಹಾಡಿದ್ದರು.
ಡಿಎಂಕೆ, ಎಂಡಿಎಂಕೆ, ಸಿಪಿಐ, ಸಿಪಿಎಂ ಪಕ್ಷಗಳು ಎಚ್.ರಾಜಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಸಾಮಾಜಿಕ ಕಾರ್ಯಕರ್ತರಾಗಿದ್ದ ಪೆರಿಯಾರ್, ಸ್ವಾಭಿಮಾನಿ ಚಳುವಳಿ ಹಾಗೂ ದ್ರಾವಿಡಾರ್ ಕಝಗಮ್ ಸ್ಥಾಪಿಸಿದ್ದರು.

ಇದನ್ನೂ ಓದಿ: ತ್ರಿಪುರಾ: ಲೆನಿನ್ ಪ್ರತಿಮೆಯನ್ನು ನೆಲಸಮಗೊಳಿಸಿದ ಬಿಜೆಪಿ ಕಾರ್ಯಕರ್ತರು

To Top
error: Content is protected !!
WhatsApp chat Join our WhatsApp group