ರಾಜ್ಯ ಸುದ್ದಿ

ಸಂಘಪರಿವಾರದೊಂದಿಗೆ ಪಾಪ್ಯುಲರ್ ಫ್ರಂಟ್‌ನ ಸಮೀಕರಿಸಿದ ಗೃಹಸಚಿವರ ಹೇಳಿಕೆ ಬಾಲಿಶತನದಿಂದ ಕೂಡಿದೆ: ಪಾಪ್ಯುಲರ್ ಫ್ರಂಟ್

ವರದಿಗಾರ (ಮಾ 6) : ಸ್ವಾತಂತ್ರ ನಂತರ ದೇಶದಲ್ಲಿ ಹಲವಾರು ಬಾಂಬ್ ಸ್ಫೋಟ ಮತ್ತು ವಂಶಹತ್ಯೆಗಳನ್ನು ನಡೆಸಿ ಭಯೋತ್ಪಾದನೆಯನ್ನು ನಡೆಸಿದ ಆರೆಸ್ಸೆಸ್‌ನೊಂದಿಗೆ ಪಾಪ್ಯುಲರ್ ಫ್ರಂಟ್‌ ಅನ್ನು ಗೃಹ ಸಚಿವರು ಹೋಲಿಸಿದ್ದು ಬಾಲಿಶತನದಿಂದ ಕೂಡಿದೆ ಎಂದು ಪಾಪ್ಯುಲರ್ ಫ್ರಂಟ್ ರಾಜ್ಯ ಕಾರ್ಯದರ್ಶಿ ಅಬ್ದುರ್ರಝಾಕ್ ಕೆಮ್ಮಾರ ಹೇಳಿದ್ದಾರೆ.

ಒಂದೆಡೆ ದೇಶವನ್ನು ಕಾಂಗ್ರೆಸ್ ಮುಕ್ತ ಮಾಡುತ್ತೇವೆಂದು ಬಿಜೆಪಿ ಸವಾಲು ಹಾಕುತ್ತಿರುವ ವೇಳೆ, ಚುನಾವಣಾ ಅಖಾಡದಲ್ಲೂ, ವೈಚಾರಿಕವಾಗಿಯೂ ಅವರನ್ನು ವಿರೋಧಿಸುವುದರಲ್ಲಿ ಕಾಂಗ್ರೆಸ್ ಸಂಪೂರ್ಣ ಸೋತಿದೆ. ಕಳೆದ ಎಪ್ಪತ್ತು ವರ್ಷಗಳಿಂದ ಓಟು ಬ್ಯಾಂಕ್ ಆಗಿದ್ದ ಮುಸ್ಲಿಮರು ಮತ್ತು ದಲಿತರು ಇದೀಗ ಕಾಂಗ್ರೆಸ್‌ನಿಂದ ದೂರ ನಿಂತಿದ್ದಾರೆ. ತನ್ನ ಮತದಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲೂ ಸಾಧ್ಯವಾಗದ ಕಾಂಗ್ರೆಸ್‌ನ ಹತಾಶೆಯು ಗೃಹಸಚಿವರ ಬಾಯಿಯಿಂದ ಇಂತಹ ಮಾತನ್ನು ಹೇಳಿಸುತ್ತಿದೆ. ಒಂದು ಕಾಲದಲ್ಲಿ ಕಾಂಗ್ರೆಸ್‌ನ ಓಟುಬ್ಯಾಂಕ್ ಆಗಿದ್ದ ಮುಸ್ಲಿಮರಿಂದು ಕಾಂಗ್ರೆಸ್‌ನ ಸ್ವಯಂಕೃತಾಪರಾಧಗಳ ಕಾರಣಗಳಿಂದ ವಿವಿಧ ರಾಜ್ಯಗಳಲ್ಲಿ ವಿವಿಧ ಪಕ್ಷಗಳೊಂದಿಗೆ ಕೈಜೋಡಿಸಿದ್ದಾರೆ ಮತ್ತು ದೇಶದಲ್ಲಿ ಇಂದು ಮುಸ್ಲಿಮರೇ ಹುಟ್ಟು ಹಾಕಿದ ರಾಜಕೀಯ ಪಕ್ಷಗಳು ಮುಂಚೂಣಿಗೆ ಬರುತ್ತಿವೆ.

ರಾಜ್ಯಕ್ಕೆ ಭೇಟಿ ನೀಡಿದ ಅಮಿತ್ ಶಾ ಇಲ್ಲಿ ಗಲಭೆಗಳನ್ನು ಸಷ್ಟಿಸಲು ಆಜ್ಞಾಪಿಸಿದ್ದರೆಂದು ಖುದ್ದು ಬಿ.ಜೆ.ಪಿ ಸಂಸದ ಪ್ರತಾಪಸಿಂಹ ಹೇಳಿರುವುದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದ್ದರಿಂದ ಗಲಭೆಯ ಫ್ಯಾಕ್ಟರಿ ಎಲ್ಲಿದೆ ಎಂಬುದನ್ನು ಗೃಹ ಸಚಿವರಿಗೆ ತಿಳಿದುಕೊಳ್ಳುವುದು ಕಷ್ಟದ ಕೆಲಸವೇನಲ್ಲ. ಮಾತ್ರವಲ್ಲ, ಬಿಜೆಪಿ, ಆರೆಸ್ಸೆಸ್‌ನಿಂದ ರಾಜ್ಯದಲ್ಲಿ ಗಲಭೆ ಸಷ್ಟಿಯಾಗುತ್ತಿದೆ ಎಂದು ಸ್ವತಃ ಮುಖ್ಯಮಂತ್ರಿಯವರೇ ಈ ಹಿಂದೆ ಅನೇಕ ಬಾರಿ ಸ್ಪಷ್ಟಪಡಿಸಿದ್ದಾರೆ. ವಸ್ತು ಸ್ಥಿತಿಯನ್ನು ಗ್ರಹಿಸಲು ಸಾಧ್ಯವಾಗುವ ಸಿದ್ದರಾಮಯ್ಯರಂತಹ ಅಹಿಂದ ನೇತಾರರ ಕಾರಣದಿಂದ ಮಾತ್ರವೇ ಕಾಂಗ್ರೆಸ್ ಕರ್ನಾಟಕದಲ್ಲಿ ತನ್ನ ವರ್ಚಸ್ಸನ್ನು ಉಳಿಸಿಕೊಂಡಿದೆ.

ಕಲಬುರ್ಗಿ ಮತ್ತು ಗೌರಿಯ ಹತ್ಯೆಯ ಹಿಂದೆ ಕೋಮುವಾದಿ ಫ್ಯಾಶಿಸ್ಟ್ ಸಂಘಟನೆಗಳ ಕೈವಾಡ ಸ್ಪಷ್ಟವಾಗಿದೆ. ಇದೀಗ ರಾಜ್ಯದ ಇನ್ನೋರ್ವ ಹೋರಾಟಗಾರನನ್ನು ಮುಗಿಸುವ ಪ್ರಯತ್ನ ನಡೆಯುತ್ತಿದೆ ಎಂದು ತನಿಖಾ ಸಂಸ್ಥೆಗಳು ಸೂಚನೆ ನೀಡಿವೆ. ಹೀಗಿದ್ದೂ ಅಂತಹ ಭಯೋತ್ಪಾದಕ ಸಂಘಟನೆಯನ್ನು ಮಟ್ಟ ಹಾಕಲು ಸಾಧ್ಯವಾಗದ ಗೃಹಮಂತ್ರಿಗಳು, ಪಾಪ್ಯುಲರ್ ಫ್ರಂಟ್ ಅನ್ನು ವಿನಾ ಕಾರಣ ಎಳೆದು ತರುತ್ತಿದ್ದಾರೆ. ಸಾಮಾಜಿಕ, ರಾಜಕೀಯ, ಔದ್ಯೋಗಿಕ, ಶೈಕ್ಷಣಿಕ ಸಬಲೀಕರಣಕ್ಕಾಗಿ ಜನಪರ ಚಳವಳಿಯನ್ನು ಹಮ್ಮಿಕೊಂಡು ದೇಶದ ಸಾಂವಿಧಾನಿಕ ಮೌಲ್ಯಗಳಾದ ಪ್ರಜಾಸತ್ತೆ, ಜಾತ್ಯತೀತತೆ ಮತ್ತು ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿದು ಹೋರಾಡುತ್ತಿರುವ ಸಂಘಟನೆಯ ವಿರುದ್ಧ ಇಲ್ಲಸಲ್ಲದ ಆರೋಪವನ್ನು ಹೊರಿಸುತ್ತಿರುವುದು ಅಕ್ಷಮ್ಯ. ಆದ್ದರಿಂದ ಗೃಹಸಚಿವರು ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕೆಂದು ಈ ಮೂಲಕ ಅಬ್ದುರ್ರಝಾಕ್ ಕೆಮ್ಮಾರ ಒತ್ತಾಯಿಸಿದ್ದಾರೆ.

To Top
error: Content is protected !!
WhatsApp chat Join our WhatsApp group